ತುಮಕೂರು :
ತುಮಕೂರು ಮಹಾನಗರ ಪಾಲಿಕೆಯ ಆಯುಕ್ತರಾಗಿದ್ದ ಭೂಬಾಲನ್.ಟಿ. ರವರು ಬೆಳಗಾವಿಗೆ ವರ್ಗಾವಣೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ದಕ್ಷತೆ ಹಾಗೂ ಪ್ರಾಮಾಣಿಕತೆಗೆ ಹೆಸರಾಗಿದ್ದ ತುಮಕೂರು ವiಹಾನಗರ ಪಾಲಿಕೆಯ ಆಯುಕ್ತ, ಐ.ಎ.ಎಸ್. ಅಧಿಕಾರಿ ಟಿ.ಭೂಬಾಲನ್ ಅವರನ್ನು ಹಠಾತ್ತನೆ ವರ್ಗಾಯಿಸುವ ಮೂಲಕ ರಾಜ್ಯ ಬಿಜೆಪಿ ಸರ್ಕಾರ ತುಮಕೂರು ನಗರದ ಜನರಿಗೆ ಶಾಕ್ ಟ್ರಿಟ್‍ಮೆಂಟ್ ಕೊಟ್ಟಿದೆ.

ಭೂಬಾಲನ್ ಅವರು ಉಡುಪಿ ಜಿಲ್ಲೆ ಕುಂದಾಪುರದಲ್ಲಿ ಉಪವಿಭಾಗಾಧಿಕಾರಿ ಆಗಿ ಪ್ರಾಮಾಣಿಕತೆಗೆ ಹೆಸರು ಮಾಡಿದ್ದರು. ಆ ಹುದ್ದೆಯಿಂದ ನೇರವಾಗಿ 2019 ರ ಜನವರಿಯಲ್ಲಿ ತುಮಕೂರು ಮಹಾನಗರ ಪಾಲಿಕೆಯ ಆಯುಕ್ತರ ಹುದ್ದೆಗೆ ವರ್ಗಾಯಿಸಲಾಗಿತ್ತು. ಕಳೆದ ಎರಡು ತಿಂಗಳ ಹಿಂದೆ ಇವರಿಗೆ ತುಮಕೂರು ಸ್ಮಾರ್ಟ್ ಸಿಟಿ ಕಂಪನಿಯ ವ್ಯವಸ್ಥಾಪಕ ಹುದ್ದೆಯನ್ನು ಹೆಚ್ಚುವರಿಯಾಗಿ ನೀಡಲಾಗಿತ್ತು.
ಪಾಲಿಕೆಯ ಆಯುಕ್ತರಾಗಿ ಅತ್ಯಲ್ಪ ಅವಧಿಯಲ್ಲಿ ತೆರಿಗೆ ಸಂಗ್ರಹ ಸೇರಿದಂತೆ ಅನೇಕ ಸುಧಾರಣೆಗಳನ್ನು ತಂದಿದ್ದ ಭೂಬಾಲನ್, ಅತ್ತ ಸ್ಮಾರ್ಟ್‍ಸಿಟಿ ಕಂಪನಿಯಲ್ಲೂ ಕ್ಷಿಪ್ರಗತಿಯಲ್ಲಿ ಬದಲಾವಣೆಗಳಿಗೆ ಕಾರಣರಾಗಿದ್ದರು. ಪಾಲಿಕೆ ವ್ಯಾಪ್ತಿಯಲ್ಲಿ ಹಾಗೂ ಸ್ಮಾರ್ಟ್‍ಸಿಟಿ ವ್ಯಾಪ್ತಿಯಲ್ಲಿ ಕಾಮಗಾರಿಗಳನ್ನು ನಡೆಸುತ್ತಿರುವ ಕೆಲವು ಗುತ್ತಿಗೆದಾರ ಕಂಪನಿಗಳ ಕರ್ತವ್ಯ ನಿರ್ಲಕ್ಷ್ಯದ ವಿರುದ್ಧ ಇದೇ ಮೊದಲ ಬಾರಿಗೆ ಲಕ್ಷಾಂತರ ರೂಗಳ ದಂಡ ವಿಧಿಸಿ ಎಲ್ಲರ ಗಮನ ಸೆಳೆದಿದ್ದರು. ಇವರಿಗೆ ಇತ್ತೀಚೆಗಷ್ಟೇ ಅತ್ಯುತ್ತಮ ಸಿ.ಇ.ಓ. ಪ್ರಶಸ್ತಿ ಘೋಷಣೆಯಾಗಿದೆ.
ಜನರ ಆಕ್ರೋಶ
ಈ ಮಧ್ಯ ಹಠಾತ್ತನೆ ಶನಿವಾರದಂದು ರಾಜ್ಯ ಸರ್ಕಾರ ಸ್ಮಾರ್ಟ್‍ಸಿಟಿಯ ಹುದ್ದೆಯಿಂದ ಇವರನ್ನು ಬಿಡುಗಡೆಗೊಳಿಸಿತು. ಈ ವಿಷಯ ಬಹಿರಂಗವಾದೊಡನೆ ಮಾಧ್ಯಮಗಳಲ್ಲಿ ಮತ್ತು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಗ್ರಾಸವಾಯಿತು. ಸೋಷಿಯಲ್ ಮೀಡಿಯಾಗಳಲ್ಲಿ ಸಾರ್ವಜನಿಕರು ಹಿಗ್ಗಾಮುಗ್ಗ ಕಮೆಂಟ್ ಮಾಡುತ್ತ, ರಾಜ್ಯ ಬಿಜೆಪಿ ಸರ್ಕಾರವನ್ನು ಹಾಗೂ ಜಿಲ್ಲೆಯ ಜನಪ್ರತಿನಿಧಿಗಳನ್ನು ತರಾಟೆಗೆ ತೆಗೆದುಕೊಂಡರು.
ಈ ಬೆಳವಣಿಗೆಯ ನಡುವೆಯೇ ಭಾನುವಾರ ರಾಜ್ಯ ಸರ್ಕಾರ ಮತ್ತೊಂದು ಪ್ರಕಟಣೆ ಹೊರಡಿಸಿ, ಭೂಬಾಲನ್ ಅವರನ್ನು ತುಮಕೂರು ಮಹಾನಗರ ಪಾಲಿಕೆ ಆಯುಕ್ತರ ಹುದ್ದೆಯಿಂದಲೂ ಅನಿರೀಕ್ಷಿತವಾಗಿ ವರ್ಗಾವಣೆ ಮಾಡಿ, ತುಮಕೂರು ಜನರಿಗೆ ಮತ್ತೊಂದು ಆಘಾತ ತಂದಿದೆ.
ಈ ವಿಷಯ ಬಹಿರಂಗವಾಗುತ್ತಿದ್ದಂತೆಯೇ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಸಾರ್ವಜನಿಕರು ರಾಜ್ಯ ಬಿಜೆಪಿ ಸರ್ಕಾರ ಮತ್ತು ಸ್ಥಳೀಯ ಜನಪ್ರತಿನಿಧಿಗಳ ವಿರುದ್ಧ ಮತ್ತೊಮ್ಮೆ ಹರಿಹಾಯುತ್ತಿದ್ದಾರೆ. ರಾಜಕಾರಣಿಗಳ ಜೊತೆಗೆ ಅವರ ಹಿಂಬಾಲಕರ ಕೈವಾಡವೂ ಇದೆಯೆಂಬ ಗುಮಾನಿ ಹರಿದಾಡುತ್ತಿದೆ. ಅದರಲ್ಲೂ ವಿಶೇಷವಾಗಿ ಬಿಜೆಪಿ ಅಭಿಮಾನಿಗಳೇ ಸೋಷಿಯಲ್ ಮೀಡಿಯಾದಲ್ಲಿ ಈ ವಿಷಯದಲ್ಲಿ ಖಾರವಾಗಿ ಪ್ರತಿಕ್ರಿಯಿಸುತ್ತಿರುವುದು ಗಮನಾರ್ಹವಾಗಿದೆ.
ಪಾಲಿಕೆಯಲ್ಲೂ ವಿಷಾದ
ಭೂಬಾಲನ್ ಅವರ ಹಠಾತ್ ವರ್ಗಾವಣೆ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗೆ ಪಾಲಿಕೆಯಲ್ಲೂ ವಿಷಾದದ ಛಾಯೆ ಕಂಡುಬಂದಿತು. ಅನೇಕ ಸದಸ್ಯರುಗಳು ಹೀಗಾಗಬಾರದಿತ್ತು… ಇದು ಅನ್ಯಾಯ…. ಎಂದು ತಮ್ಮೆದುರು ಬಂದವರೊಡನೆ ಹೇಳಿಕೊಂಡರು. ಇತ್ತ ಪಾಲಿಕೆಯ ವಿವಿಧ ಹಂತದ ಅನೇಕ ಅಧಿಕಾರಿಗಳು/ ನೌಕರರು/ ಸಿಬ್ಬಂದಿಯವರು ಸಹ ಇದು ಒಳ್ಳೆಯ ಬೆಳವಣಿಗೆ ಅಲ್ಲ. ಪ್ರಾಮಾಣಿಕವಾಗಿ ಇರಬೇಕೆಂದು ಬಯಸುವವರಿಗೆ ಬರೆ ಹಾಕಿದಂತಾಗಿದೆ ಎಂದು ನೋವಿನ ಧ್ವನಿಯಲ್ಲಿ ಪ್ರತಿಕ್ರಿಯಿಸಿದರು.
ಸ್ಮಾರ್ಟ್ ಸಿಟಿ ಎಂಡಿ ಆಗಿದ್ದ ಅವರ ಜಾಗಕ್ಕೆ ಟೂಡಾ ಪ್ರಾಧಿಕಾರದಲ್ಲಿ ಹೆಚ್ಚುವರಿ ನಿರ್ದೇಶಕ(ಕೋ- ಆಪರೇಟಿವ್ ಆಡಿಟ್)ರಾಗಿದ್ದ ಶ್ರೀ ಆದರ್ಶ ಕುಮಾರ ಅವರನ್ನು ನೇಮಕ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
