ಮಠದಲ್ಲಿ ಬುದ್ಧಿಯವರ ಗದ್ದುಗೆ ದರ್ಶನಕ್ಕೆ ಭಕ್ತ ಗಣ!!

  ತುಮಕೂರು:

      ಒಂಬತ್ತು ದಶಕಗಳ ಕಾಲ ಸಿದ್ಧಗಂಗಾ ಮಠದ ಬೆಳಕಾಗಿದ್ದ, ಬದುಕಾಗಿದ್ದ ಡಾ. ಶಿವಕುಮಾರಸ್ವಾಮಿಗಳು ಲಿಂಗೈಕ್ಯರಾಗಿ, ಮಠದ ಆವರಣದ ಶಿವಯೋಗಿ ಮಂದಿರದ ಗದ್ದುಗೆಯಲ್ಲಿ ಐಕ್ಯರಾಗಿದ್ದಾರೆ. ಅವರಿಲ್ಲದ ಮೊದಲ ದಿನ ಬುಧವಾರ ಮಠದ ದಿನಚರಿ ಎಂದಿನಂತೆ ಆರಂಭವಾಯಿತು. ಮುಂಜಾನೆ ಮಠಾಧ್ಯಕ್ಷರಾದ ಸಿದ್ಧಲಿಂಗಸ್ವಾಮಿಗಳು ಇಷ್ಟಲಿಂಗ ಪೂಜೆ ನೆರವೇರಿಸಿದರು. ನಂತರ ಮಠದ ಮಕ್ಕಳಿಂದ ಸಾಮೂಹಿಕ ಪ್ರಾರ್ಥನೆ ನೆರವೇರಿತು. ಇದಾದ ಮೇಲೆ ಸಿದ್ಧಲಿಂಗಸ್ವಾಮಿಗಳು ಗದ್ದುಗೆ ಪೂಜೆ ಮಾಡಿ, ಭಕ್ತಿ ಸಮರ್ಪಿಸಿದರು.

      ಶ್ರೀಗಳ ಗದ್ದುಗೆ ದರ್ಶನ ಮಾಡಬೇಕು ಎಂದು ಕಾಯುತ್ತಿದ್ದ ಭಕ್ತರಿಗೆ ಪೂಜಾ ವಿಧಿವಿಧಾನಗಳು ಮುಗಿದ ನಂತರ ಅವಕಾಶ ಮಾಡಿಕೊಡಲಾಯಿತು. ಶ್ರೀಗಳ ಅಂತಿಮ ದರ್ಶನಕ್ಕೆಂದು ದೂರದ ಊರುಗಳಿಂದ ಬಂದಿದ್ದ ಭಕ್ತರು ರಾತ್ರಿ ಮಠದಲ್ಲೇ ತಂಗಿದ್ದರು. ಕ್ರಿಯಾ ಸಮಾದಿ ಪೂಜಾ ಪ್ರಕ್ರಿಯೆ ನಂತರ ಗದ್ದುಗೆ ದರ್ಶನ ಮಾಡಲು ಸಾಧ್ಯವಾಗದ ಕಾರಣ ಇವರು ಬೆಳಿಗ್ಗೆ ಸರತಿ ಸಾಲಿನಲ್ಲಿ ನಿಂತು ಹೋಗಿ ಶ್ರೀಗಳ ಗದ್ದುಗೆ ದರ್ಶನ ಮಾಡಿ, ಭಕ್ತಿ ನಮನ ಸಲ್ಲಿಸಿದರು.

      ಜಗತ್ತು ಮೆಚ್ಚುವಂತಹ ಸೇವೆ, ಸಾಧನೆ ಮಾಡಿರುವ ಡಾ. ಶಿವಕುಮಾರಸ್ವಾಮೀಗಳಿಗೆ ಜೀವಿತ ಕಾಲದಲ್ಲಿ ಭಾರತ ರತ್ನ ನೀಡಲಿಲ್ಲ ಎಂಬ ಕೊರಗನ್ನು ಬಹುತೇಕ ಭಕ್ತರು ವ್ಯಕ್ತಪಡಿಸಿದರು. ಮರಣಾನಂತರವಾದರೂ ಶ್ರೀಗಳಿಗೆ ಈ ಗೌರವ ಸಿಗಬೇಕು ಎಂದು ಕೆಲ ಭಕ್ತರು ಸರತಿ ಸಾಲಿನಲ್ಲಿ ಭಿತ್ತಿ ಪತ್ರ ಪ್ರದರ್ಶಿಸಿ ಒತ್ತಾಯಿಸಿದರು. ಭಾರತ ರತ್ನ ಪಡೆಯಲು ಇದಕ್ಕಿಂಥಾ ಇನ್ನೆಂಥಾ ಸಾಧನೆ ಮಾಡಬೇಕಾಗಿತ್ತು ಎಂಬ ಆಕ್ರೋಶವೂ ಅವರಲ್ಲಿ ಕಂಡುಬಂದಿತು. ಗದ್ದುಗೆ ದರ್ಶನದ ನಂತರ ಮಠದಲ್ಲಿ ಪ್ರಸಾದ ಸ್ವೀಕರಿಸಿದ ತಮ್ಮ ತಮ್ಮ ಊರುಗಳತ್ತ ತೆರಳುತ್ತಿದ್ದ ದೃಶ್ಯ ಕಂಡುಬಂದಿತು.

      ಮಠಕ್ಕೆ ಬರುವ ಭಕ್ತರಿಗೆ ಹಾಗೂ ಮಠದ ಮಕ್ಕಳಿಗೆ ಪ್ರತಿನಿತ್ಯ ಅನ್ನದಾಸೋಹ ನಡೆಯಬೇಕು ಎಂಬುದು ಡಾ. ಶಿವಕುಮಾರಸ್ವಾಮಿಗಳ ಆಶಯವಾಗಿತ್ತು. ಅವರ ಇಚ್ಚೆಯಂತೆ ನಿತ್ಯ ದಾಸೋಹ ನಡೆಯುತ್ತಿದ್ದು, ಪ್ರಸಾದ ಸ್ವೀಕರಿಸಿದ ಭಕ್ತರು, ಹಿರಿಯ ಶ್ರೀಗಳ ನೆನೆದು ಕಣ್ಣೀರು ಹಾಕಿದರು.

ಬುದ್ದಿಯವರ ದರ್ಶನ:

      ಡಾ. ಶಿವಕುಮಾರಸ್ವಾಮೀಜಿಗಳು ಲಿಂಗೈಕ್ಯರಾದ ಬಳಿಕ ಶ್ರೀಮಠ ದೇವರಿಲ್ಲದ ಗುಡಿಯಂತಾಗಿದೆ. ಇಷ್ಟು ವರ್ಷಗಳಿಂದ ನಿತ್ಯ ದೊರೆಯುತ್ತಿದ್ದ ನಡೆದಾಡುವ ದೇವರ ದರ್ಶನ ಇನ್ನು ಮುಂದೆ ಇಲ್ಲ ಎಂಬುದು ಮಠದ ಮಕ್ಕಳಿಗೆ ನಂಬಲಾಗದ ನೋವು. ಇನ್ನು ಬುದ್ದಿಯವರ ದೈವಿಕ ಮುಖ ದರ್ಶನವಿಲ್ಲ, ಅವರ ಪಾದಸ್ಪರ್ಶವಿಲ್ಲ, ಅವರ ಪಾದುಕೆ ಸಪ್ಪಳ ಕೇಳುವುದಿಲ್ಲ, ಅವರ ನುಡಿಮುತ್ತುಗಳಿಲ್ಲ…ಬುಧವಾರ ಮಠದ ಮಕ್ಕಳ ಮುಖದಲ್ಲಿ ಅಕ್ಷರಶ: ಅನಾಥ ಭಾವವಿತ್ತು.

      ಸಿದ್ಧಗಂಗಾಮಠದಲ್ಲಿ ಬುಧವಾರ ಎಂದಿನಂತೆ ಶಾಲಾ ಕಾಲೇಜು ಆರಂಭವಾದವು. ನಿತ್ಯ ಡಾ.ಶಿವಕುಮಾರಸ್ವಾಮೀಜಿಗಳ ದರ್ಶನ ಮಾಡುತ್ತಿದ್ದ ಮಠದ ವಿದ್ಯಾರ್ಥಿಗಳು ಬುಧವಾರ ‘ಬುದ್ದಿವರನ್ನ’ ನೋಡಲೇಂದು ಭಕ್ತರೊಂದಿಗೆ ಸಾಲಿನಲ್ಲಿ ತೆರಳಿ ಗದ್ದುಗೆ ದರ್ಶನ ಮಾಡಿ, ನಮಸ್ಕರಿಸಿ, ನಂತರ ತರಗತಿಗೆ ಹೋದರು.

      ಬೆಳಿಗ್ಗೆ ಮಠಕ್ಕೆ ಬಂದ ಭಕ್ತರಿಗೆ ಶ್ರೀಗಳು ‘ಇನ್ನಿಲ್ಲ’ ಎಂದು ಅಂದುಕೊಳ್ಳಲಾಗುತ್ತಿರಲಿಲ್ಲ, ಸ್ವಾಮೀಜಿಗಳು ಪ್ರಸಾದ ನಿಲಯ ಬಳಿ ಗದ್ದುಗೆ ಮೇಲಿರುತ್ತಾರೆ, ಅಲ್ಲಿ ಇಲ್ಲದಿದ್ದರೆ ಕಛೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುತ್ತಾರೆ, ಇಲ್ಲವೆ, ಹಳೆ ಮಠದಲ್ಲಿರುತ್ತಾರೆ ಎಂದೇ ಅನಿಸುತ್ತದೆ, ಆದರೆ ಅವರು ಇಲ್ಲ ಎಂದುಕೊಂಡಾಗ ನೋವಾಗುತ್ತದೆ ಎಂದು ಕೆಲ ಭಕ್ತರು ದು:ಖ ತೋಡಿಕೊಂಡರು.

      ಪ್ರಸಾದ ನಿಲಯ ಬಳಿಯ ಗದ್ದುಗೆಯಲ್ಲಿ ಡಾ. ಶಿವಕುಮಾರಸ್ವಾಮಿಗಳ ಭಾವಚಿತ್ರ ಹಾಗೂ ಶ್ರೀಗಳು ಧರಿಸುತ್ತಿದ್ದ ಪಾದರಕ್ಷೆಯನ್ನು ಭಕ್ತರಿಗೆ ದರ್ಶನಕ್ಕೆ ಇಡಲಾಗಿದೆ. ಮಠಕ್ಕೆ ಬಂದಿದ್ದ ಭಕ್ತರು ಶ್ರೀಗಳ ಕ್ರಿಯಾ ಸಮಾದಿಗೆ ನಮನ ಸಲ್ಲಿಸಿ, ಅವರ ಪಾದುಕೆಗೆ ನಮಸ್ಕರಿಸಿ ಭಕ್ತಿ ಸಮರ್ಪಿಸುತ್ತಿದ್ದರು.

      ಇಡೀ ದಿನ ಮಠದಲ್ಲಿ ಭಕ್ತರ ಮಹಾಪೂರವೇ ಸೇರಿತ್ತು. ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಬಂದೋಬಸ್ತ್ ನೋಡಿಕೊಂಡು, ಭಕ್ತರು ಸುಗಮವಾಗಿ ಗದ್ದುಗೆ ದರ್ಶನಕ್ಕೆ ಅನುಕೂಲ ಮಾಡಿಕೊಟ್ಟರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap