ತಂತ್ರಜ್ಞಾನ ಸದ್ಬಳಕೆಯಿಂದ ಸಮಗ್ರ ಸುಸ್ಥಿರ ಅಭಿವೃದ್ಧಿ : ಆರ್.ವಿ.ದೇಶಪಾಂಡೆ

ಬೆಂಗಳೂರು

      ತಂತ್ರಜ್ಞಾನ ಜನಜೀವನಕ್ಕೆ ಹಲವು ಅನುಕೂಲಗಳನ್ನು ಒದಗಿಸಿದ್ದು, ತಂತ್ರಜ್ಞಾನವನ್ನು ಸದ್ಬಳಕೆಮಾಡಿಕೊಂಡರೆ ಸಮಗ್ರ ಸುಸ್ಥಿರ ಅಭಿವೃದ್ಧಿ ಸಾಧ್ಯವಾಗಲಿದೆ ಎಂದು ಕಂದಾಯ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದ್ದಾರೆ.

        ನಗರದಲ್ಲಿಂದು 23ನೇ ವರ್ಷದ “ಗ್ಲೋಬಲ್ ಫೋರಂ ಆನ್ ಸ್ಟ್ರಾಟೆಜಿಕ್ ಚೇಂಜ್, ಲೀಡರ್ ಶಿಪ್ ಅಂಡ್ ಲರ್ನಿಂಗ್” ಕುರಿತ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, “ತಂತ್ರಜ್ಞಾನ ಹಿಂದೆಂದೂ ಇಲ್ಲದಂತೆ ಒಬ್ಬೊಬ್ಬರನ್ನೂ ಬೆಸೆದಿದೆ. ಆದರೆ, ಮನುಷ್ಯರ ನಡುವಿನ ಪರಸ್ಪರ ಬಾಂಧವ್ಯ ಶಿಥಿಲವಾಗಿರುವ ವೈರುಧ್ಯ ಪರಿಸ್ಥಿಯಲ್ಲಿ ನಾವಿದ್ದೇವೆ. ನಮ್ಮ ಆಸುಪಾಸಿನ ಸಂಗತಿಗಳು ವ್ಯವಸ್ಥಿತ ವಾಗಿರುವಂತೆ ಕಾಣುತ್ತಿದ್ದರೂ ವಾಸ್ತವದಲ್ಲಿ ಕ್ಷೋಭೆಯ ವಾತಾವರಣವಿದೆ.

       ಜೀವನ ಮಟ್ಟ ಸುಧಾರಿಸಿರುವುದು ನಿಜವಾದರೂ ಬಡವ – ಶ್ರೀಮಂತರ ನಡುವಿನ ಅಂತರ ಜಾಸ್ತಿಯಾಗುತ್ತಲೇ ಇದೆ. ತಂತ್ರಜ್ಞಾನ ಇದಕ್ಕೆ ಪರಿಹಾರ ಸೂಚಿಸಬೇಕು ಎಂದರು.

       “ತಂತ್ರಜ್ಞಾನ ರಂಗದಲ್ಲಿ ನಡೆಯುತ್ತಿರುವ ಅನುಶೋಧನೆಗಳ ಅದ್ಭುತ ಜಗತ್ತಿನಲ್ಲಿ ನಾವಿದ್ದೇವೆ. ಆದರೆ, ಇದೇ ತಂತ್ರಜ್ಞಾನ ನಮ್ಮ ಭೂಗ್ರಹವನ್ನೇ ನಾಶಮಾಡುವ ಭೀತಿಯನ್ನೂ ನಾವು ಎದುರಿಸುತ್ತಿದ್ದೇವೆ. ಜನರ ಅಭ್ಯುದಯವೇ ಮುಖ್ಯವಾಗಿರುವಂತಹ ನೀತಿಗಳನ್ನು ಜಾರಿಗೆ ತರುವುದೇ ಇದಕ್ಕೆ ಪರಿಹಾರವಾಗಿದೆ,” ಎಂದು ದೇಶಪಾಂಡೆ ಪ್ರತಿಪಾದಿಸಿದರು.

        “ತಂತ್ರಜ್ಞಾನದಿಂದಾಗಿ ಸಾರ್ವಜನಿಕ ವ್ಯವಸ್ಥೆಯಲ್ಲಿ ಒಂದು ಹಂತದ ಪಾರದರ್ಶಕತೆ ಬಂದಿದೆ. ವಿದ್ಯುನ್ಮಾನ ಆಡಳಿತ ಸರ್ಕಾರದ ಪಾತ್ರವನ್ನು ಸರಳಗೊಳಿಸುತ್ತಿದೆ. ಇದನ್ನು ಮನಗಂಡೇ ಸರಕಾರವು ಮಾಹಿತಿ ಮತ್ತು ಸಂಪರ್ಕ ತಂತ್ರಜ್ಞಾನವನ್ನು ವ್ಯಾಪಕ ಪ್ರಮಾಣದಲ್ಲಿ ಬಳಸುತ್ತಿದೆ, ರಾಜಕೀಯ ನಾಯಕರು, ಉದ್ಯಮ ವಲಯ ಮತ್ತು ನಾಗರಿಕ ಸಮಾಜದ ಧುರೀಣರೆಲ್ಲರೂ ಇಂದು ನಮ್ಮ ಮುಂದಿರುವ ಜಾಗತಿಕ ಒತ್ತಡಗಳನ್ನು ಗಮನಿಸಿ, ಅದಕ್ಕೆ ತಕ್ಕಂತೆ ನಾಯಕತ್ವ ಒದಗಿಸಬೇಕು. ಇಲ್ಲವಾದಲ್ಲಿ ತಂತ್ರಜ್ಞಾನವನ್ನು ಸಕಾರಾತ್ಮಕವಾಗಿ ಬಳಸಿಕೊಳ್ಳುವುದು ಸಾಧ್ಯವಾಗದು ” ಎಂದು ಸಚಿವರು ಎಚ್ಚರಿಸಿದರು.ಸಮಾವೇಶದಲ್ಲಿ ಹಲವು ರಾಷ್ಟ್ರಗಳ ಉದ್ಯಮಿಗಳು ಭಾಗವಹಿಸಿದ್ದರು. ಈ ಸಮಾವೇಶವು ಇದೇ ಮೊದಲ ಬಾರಿಗೆ ಭಾರತದಲ್ಲಿ ನಡೆಯುತ್ತಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap