ಬೆಂಗಳೂರು:
ವಿಧಾನಸಭೆ ಕಲಾಪ ನಿನ್ನೆ ಗುರುವಾರಕ್ಕೆ ಮುಂದೂಡಿಕೆಯಾದ ಬೆನ್ನಲ್ಲೇ ರಾಜ್ಯ ವಿಧಾನ ಪರಿಷತ್ ಕಲಾಪ ಕೂಡ ಗುರುವಾರಕ್ಕೆ ಮುಂದೂಡಿಕೆಯಾಗಿದೆ.
ಆಡಳಿತ ಪಕ್ಷ ಕಾಂಗ್ರೆಸ್ ಹಾಗೂ ಪ್ರತಿಪಕ್ಷ ಬಿಜೆಪಿ ಸದಸ್ಯರ ವಾಗ್ಯುದ್ಧದ ನಡುವೆಯೇ ಸಭಾಪತಿ ಪೀಠದಲ್ಲಿದ್ದ ಉಪಸಭಾಪತಿ ಧರ್ಮೇಗೌಡ ಅವರು ಕಲಾಪವನ್ನು ಮುಂದೂಡಿದರು.
ಗುರುವಾರ ವಿಧಾನಸಭೆಯಲ್ಲಿ ಮೈತ್ರಿ ಸರ್ಕಾರದ ಬಹುಮತ ಸಾಬೀತು ಪ್ರಸ್ತಾಪ ಮಂಡನೆಯಾಗಲಿದೆ. ಅಲ್ಲಿ ಚರ್ಚೆ ಆರಂಭವಾಗಲಿದ್ದು ಅಲ್ಲಿಯವರೆಗೆ ವಿಧಾನಸಭೆ ಕಲಾಪ ಮುಂದಕ್ಕೆ ಹೋಗಿದೆ. ನಿನ್ನೆ ಪರಿಷತ್ ಕಲಾಪ ಕೂಡ ಪ್ರತಿಪಕ್ಷಗಳ ಗದ್ದಲದಿಂದಾಗಿ ನಡೆಯಲಿಲ್ಲ. ಪ್ರಶ್ನೋತ್ತರ ಅವಧಿ ಕೂಡ ನಡೆಸಲು ಸಾಧ್ಯವಾಗಿರಲಿಲ್ಲ. ರಾಜ್ಯ ಮೈತ್ರಿ ಸರ್ಕಾರ ಅಲ್ಪ ಮತಕ್ಕೆ ಕುಸಿದಿದೆ. ಸಿಎಂ ರಾಜೀನಾಮೆ ನೀಡಬೇಕೆಂದು ಭಿತ್ತಿಪತ್ರ ಹಿಡಿದು ಬಿಜೆಪಿ ಸದಸ್ಯರು ಬಾವಿಗಿಳಿದು ಪ್ರತಿಭಟಿಸಿದರು. ಇದರಿಂದ ಸದನವನ್ನು ಅರ್ಧ ಗಂಟೆ ಮುಂದೂಡಲಾಗಿತ್ತು. ಆದರೆ ಮತ್ತೆ ಸಮಾವೇಶ ಆರಂಭವಾದಾಗ ಬಾವಿಯಲ್ಲಿದ್ದ ಬಿಜೆಪಿ ಸದಸ್ಯರು ಹಾಗೂ ಆಡಳಿತ ಪಕ್ಷದ ಸದಸ್ಯರ ನಡುವೆ ಗದ್ದಲ ಮುಂದುವರಿದ ಕಾರಣ ಇಂದು ಬೆಳಗ್ಗೆ 11.30 ಕ್ಕೆ ಕಲಾಪ ಮುಂದೂಡಲಾಗಿತ್ತು.
ಇಂದು ಕೂಡ ಪ್ರತಿಪಕ್ಷಗಳು ಗದ್ದಲ ಮುಂದುವರಿಸಿ ಕಲಾಪ ಆರಂಭವಾಗುತ್ತಿದ್ದಂತೆ ಬಾವಿಯಲ್ಲಿದ್ದು ಪ್ರತಿಭಟನೆ ಮುಂದುವರಿಸಿದರು. ಸದಸ್ಯರ ನಿಲುವಿಗೆ ಸಚಿವರಾದ ಡಿ.ಕೆ. ಶಿವಕುಮಾರ್, ಕೆ.ಜೆ. ಜಾರ್ಜ್, ಆಡಳಿತ ಪಕ್ಷದ ನಾಯಕಿ ಡಾ. ಜಯಮಾಲಾ ಆಕ್ರೋಶ ವ್ಯಕ್ತಪಡಿಸಿದರು. ಆಡಳಿತ- ಪ್ರತಿಪಕ್ಷದ ನಾಯಕರ ನಡುವೆ ಗದ್ದಲ ಆರಂಭವಾಯಿತು. ಸಭಾಪತಿಗಳು ಬಂದು ಆಸೀನರಾಗಿ ಪ್ರಶ್ನೋತ್ತರ ಅವಧಿ ಆರಂಭಕ್ಕೆ ಅವಕಾಶ ನೀಡಿದರು. ಬಾವಿಗಿಳಿದಿದ್ದ ಬಿಜೆಪಿ ಸದಸ್ಯರನ್ನು ಆಸನಕ್ಕೆ ಮರಳುವಂತೆ ಸಲಹೆ ನೀಡಿದರು.
ಕಲಾಪ 15 ನಿಮಿಷ ಮುಂದೂಡಿಕೆ :
ಪ್ರತಿಪಕ್ಷದ ನಾಯಕ ಕೋಟಾ ಶ್ರೀನಿವಾಸ ಪೂಜಾರಿ, ಬಹುಮತ ಕಳೆದುಕೊಂಡ ಸರ್ಕಾರಒಂದು ದಿನ ಮುಂದುವರಿಯಬಾರದು. ಡಿಕೆಶಿ ಸೇರಿದಂತೆ ಎಲ್ಲಾ ಸಚಿವರು ರಾಜೀನಾಮೆ ನೀಡಿದ್ದಾರೆ. ಸಿಎಂ ಕೂಡಲೆ ರಾಜೀನಾಮೆ ಕೊಡಬೇಕೆಂದು ಆಗ್ರಹಿಸಿದರು.
ಆಡಳಿತ ಪಕ್ಷದ ಹಾಗೂ ಪ್ರತಿಪಕ್ಷದ ಸದಸ್ಯರು ಭಿತ್ತಿಪತ್ರ ಹಿಡಿದು ಆಕ್ರೋಶ ವ್ಯಕ್ತಪಡಿಸಿದರು. ಆಡಳಿತ ಪಕ್ಷದ ನಾಯಕಿ ಡಾ. ಜಯಮಾಲಾ ಮಾಡಿದ ಮನವಿಗೆ ಬೆಲೆ ಸಿಗಲಿಲ್ಲ. ಬಿಜೆಪಿ ಗೆ ಧಿಕ್ಕಾರ ಎಂದು ಆಡಳಿತ ಪಕ್ಷದ ಸದಸ್ಯರು ಹಾಗೂ ಜೆಡಿಎಸ್ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಸಿಎಂ ರಾಜೀನಾಮೆ ನೀಡಬೇಕು. ಸರ್ಕಾರಕ್ಕೆ ಬಹುಮತ ಇಲ್ಲ. ಸಿಎಂ ರಾಜೀನಾಮೆ ಕೊಡಲಿ ಎಂದು ಆಗ್ರಹಿಸಿದರು. ಪ್ರತಿಪಕ್ಷದ ಕುದುರೆ ವ್ಯಾಪಾರ ನಿಲ್ಲಿಸಿ ಎಂದು ಆಡಳಿತ ಪಕ್ಷದ ಸದಸ್ಯರು ಗದ್ದಲ ಮಾಡಿದಾಗ ಉಪ ಸಭಾಪತಿ ಧರ್ಮೇಗೌಡರು ಕಲಾಪವನ್ನು 15 ನಿಮಿಷ ಮುಂದೂಡಿದರು.
ಮತ್ತೆ ಗಲಾಟೆ:
ವಿರಾಮದ ನಂತರ ಕಲಾಪ ಆರಂಭವಾದಾಗಲೂ ಅಲ್ಪಮತಕ್ಕಿಳಿದ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.
ಗಲಾಟೆಯ ಮಧ್ಯವೇ ವರದಿ ಒಪ್ಪಿಸಲಾಯಿತು. ಹಕ್ಕು ಬಾಧ್ಯತಾ ಸಮಿತಿ ಅಧ್ಯಕ್ಷ ಆಯನೂರು ಮಂಜುನಾಥ್ ಸಮಿತಿಯ 95ನೇ ವರದಿ ಮಂಡಿಸಬೇಕಿತ್ತು. ಸರ್ಕಾರಿ ಭರವಸೆಗಳ ಸಮಿತಿ ಅಧ್ಯಕ್ಷ ಕೆ.ಸಿ. ಕೊಂಡಯ್ಯ ಸಮಿತಿಯ 47 ನೇ ವರದಿ ಒಪ್ಪಿಸಿದರು. ಗಲಾಟೆ ಮುದುವರಿದೇ ಇತ್ತು. ಕಳೆದ ಅಧಿವೇಶನದಲ್ಲಿ ವರದಿಯನ್ನು ಒಪ್ಪಿಸಿದ ನಂತರ ರಾಷ್ಟ್ರಪತಿಯವರಿಂದ ಹಾಗೂ ರಾಜ್ಯಪಾಲರಿಂದ ಒಪ್ಪಿಗೆ ಪಡೆದ ವಿಧೇಯಕಗಳ ಪಟ್ಟಿಯನ್ನು ಸಭೆಯಲ್ಲಿ ಮಂಡಿಸಲಾಯಿತು. ಪ್ರಶ್ನೋತ್ತರ ಅವಧಿ ನಡೆಸಲಾಯಿತು. ಗದ್ದಲ ಮುಂದುವರಿದ ಹಿನ್ನೆಲೆ ಉಪಸಭಾಪತಿ ಗಳು ಗುರುವಾರ ಬೆಳಗ್ಗೆ 11.30 ಕ್ಕೆ ಕಲಾಪವನ್ನು ಮುಂದೂಡಿದರು.
ಕೊಂಚ ತಡವಾಗಿ ಆರಂಭ:
ಕೋರಂ ಇಲ್ಲದ ಕಾರಣ ಅರ್ಧ ಗಂಟೆ ತಡವಾಗಿ ಸದನ ಸಮಾವೇಶಗೊಂಡಿತು. ಇಂದು ಕಲಾಪ ಸುಗಮವಾಗಿ ನಡೆದರೆ ಗಮನ ಸೆಳೆಯುವ ಸೂಚನೆ ಅಡಿ ಪಿ. ಆರ್. ರಮೇಶ್, ಎನ್. ರವಿಕುಮಾರ್ ವಿಷಯ ಮಂಡಿಸಬೇಕಿತ್ತು. ಅಲ್ಲದೇ ನಿಯಮ 330 ರ ಅಡಿ ಬಸವರಾಜ ಶಿವಲಿಂಗಪ್ಪ ಹೊರಟ್ಟಿ, ಎಸ್.ಆರ್. ಪಾಟೀಲ್ ಹಾಗೂ ಬಸವರಾಜ ಪಾಟೀಲ್ ಇಟಗಿ ತಮ್ಮ ವಿಚಾರ ಮಂಡಿಸಬೇಕಿತ್ತು. ಯಾವುದಕ್ಕೂ ಅವಕಾಶ ದೊರೆಯಲಿಲ್ಲ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ