ಒಂದು ವಾರದಲ್ಲಿ ಕೇಂದ್ರಕ್ಕೆ ಸಮಗ್ರ ಯೋಜನಾ ವರದಿ ಸಲ್ಲಿಕೆ : ಡಿಕೆಶಿ

ಬೆಂಗಳೂರು

         ಕಾವೇರಿ ನದಿ ಪಾತ್ರದ ಮೇಕೆದಾಟು ಯೋಜನೆಗೆ ಕೇಂದ್ರ ಜಲ ಆಯೋಗ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಇನ್ನೊಂದು ವಾರದಲ್ಲಿ ಕೇಂದ್ರಕ್ಕೆ ಸಮಗ್ರ ಯೋಜನಾ ವರದಿ ಸಲ್ಲಿಸುವುದಾಗಿ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

       ನಗರದಲ್ಲಿಂದು ಸುದ್ದಿಗಾರರ ಜತೆ ಮಾತನಾಡಿದ ಅವರು, ಮೇಕೆದಾಟು ಯೋಜನೆಯನ್ನು ತ್ವರಿತವಾಗಿ ಕೈಗೆತ್ತಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸಮಗ್ರ ಯೋಜನಾ ವರದಿಯನ್ನು ಇಲಾಖಾ ಅಧಿಕಾರಿಗಳು ಸಿದ್ಧಪಡಿಸುತ್ತಿದ್ದಾರೆ. ಇದು ನಮ್ಮ ರಾಜ್ಯದ ಹಕ್ಕು. ಇದರಿಂದ ತಮಿಳುನಾಡಿಗೂ ಸಹ ಅನುಕೂಲವಾಗಲಿದ್ದು, ನೆರೆ ರಾಜ್ಯದ ಹಿತ ರಕ್ಷಿಸಲು ಸಹಕಾರಿಯಾಗಲಿದೆ ಎಂದು ಬಲವಾಗಿ ಸಮರ್ಥಿಸಿಕೊಂಡರು.

         ಈ ಯೋಜನೆಗೆ ತಮಿಳು ನಾಡು ವಿರೋಧ ವ್ಯಕ್ತಪಡಿಸಿ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿರುವುದು ಸರಿಯಾದ ಬೆಳವಣಿಗೆಯಲ್ಲ. ಕಾವೇರಿ ನ್ಯಾಯ ಮಂಡಳಿ ತೀರ್ಪಿನಂತೆ ಕಾವೇರಿ ನದಿಯಿಂದ ನೀರು ಸಂಗ್ರಹಿಸಿ ಅವರಿಗೆ ಅಗತ್ಯಕ್ಕೆ ಬಿಡುಗಡೆ ಮಾಡುವ ಉದ್ದೇಶದಿಂದ ಮೇಕೆದಾಟು ಯೋಜನೆ ಕೈಗೆತ್ತಿಕೊಳ್ಳಲಾಗುತ್ತಿದೆ. ಈ ವರ್ಷ ವ್ಯಾಪಕ ಮಳೆಯಾಗಿತ್ತು. ಹೆಚ್ಚುವರಿ ನೀರು ವ್ಯರ್ಥವಾಗಿ ಸಮುದ್ರಕ್ಕೆ ಹರಿದು ಹೋಗಿತ್ತು. ನೀರು ಸಂಗ್ರಹಿಸಲು ಅಣೆಕಟ್ಟೆ ಕಟ್ಟಿದರೆ ವ್ಯರ್ಥವಾಗುವ ನೀರನ್ನು ಹಿಡಿದಿಟ್ಟುಕೊಳ್ಳಬಹುದು. ಇದನ್ನು ತಮಿಳುನಾಡು ಸಹ ಅರ್ಥಮಾಡಿಕೊಳ್ಳಬೇಕು ಎಂದರು.

         ರಾಜ್ಯದ ಜನರ ಕುಡಿಯುವ ನೀರು ಮತ್ತು ವಿದ್ಯುತ್ ಉತ್ಪಾದನೆ ಉದ್ದೇಶವುಳ್ಳ ಯೋಜನೆಗೆ ತಗಾದೆ ತೆಗೆದು ಅನಗತ್ಯ ವಿವಾದ ಸೃಷ್ಟಿ ಮಾಡುವುದು ಸರಿಯಲ್ಲ ಎಂದು ನೆರೆ ರಾಜ್ಯದವರಿಗೆ ವಿನಯ ಪೂರ್ವಕವಾಗಿ ಮನವಿ ಮಾಡುತ್ತೇನೆ .ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಅವರು ಈ ಯೋಜನೆಗೆ ಸಂಬಂಧಿಸಿದಂತೆ ಡಿಸೆಂಬರ್ 6 ರಂದು ಮಹತ್ವದ ಸಭೆ ಕರೆದಿದ್ದಾರೆ ಮಾಜಿ ಮುಖ್ಯಮಂತ್ರಿಗಳು, ಪ್ರತಿಪಕ್ಷ ನಾಯಕರ ಜತೆ ಮುಖ್ಯಮಂತ್ರಿ ಅವರು ಚರ್ಚಿಸಿ, ಮುಂದಿನ ಹೆಜ್ಜೆ ಬಗ್ಗೆ ನಿರ್ಧರಿಸಲಿದ್ದಾರೆ ಎಂದರು.

        ಯೋಜನೆ ಜಾರಿಗೆ ತಮಿಳುನಾಡು ರಾಜ್ಯದ ಜತೆ ಮಾತುಕತೆ ನಾವು ಸಿದ್ಧವಾಗಿದ್ದೇವೆ. ಈ ವಿವಾದದ ಕುರಿತು ಕರ್ನಾಟಕ ಮತ್ತು ತಮಿಳುನಾಡು ರಾಜ್ಯದ ಪ್ರತಿನಿಧಿಗಳನ್ನು ಕರೆದು ಚರ್ಚೆ ನಡೆಸಿ ಸಮಸ್ಯೆ ಬಗೆಹರಿಸುವಂತೆ ಕೇಂದ್ರ ಜಲ ಸಂಪನ್ಮೂಲ ಸಚಿವರಿಗೆ ಈಗಾಗಲೇ ಮನವಿ ಮಾಡಲಾಗಿದೆ ಎಂದು ಸಚಿವ ಡಿ.ಕೆ. ಶಿವಕುಮಾರ್ ತಿಳಿಸಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap