ಯಡಿಯೂರಪ್ಪ ಪ್ರಮಾಣವಚನಕ್ಕೆ ಮುಹೂರ್ತ ಫಿಕ್ಸ್!!

ಬೆಂಗಳೂರು:

      ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡುವುದು ಬಹುತೇಕ ಖಚಿತವಾಗಿದ್ದು, ಪ್ರಮಾಣ ವಚನಕ್ಕೆ ದಿನಾಂಕ ಮತ್ತು ಸಮಯ ನಿಗಧಿಯಾಗಿದ್ದು, ಇದಕ್ಕೆ ಇನ್ನು ಯಡಿಯೂರಪ್ಪ ಅನುಮತಿಯೊಂದು ಬಾಕಿ ಇದೆ ಎಂದು ಹೇಳಲಾಗುತ್ತಿದೆ.

      14 ತಿಂಗಳ ಬಳಿಕ ಕೊನೆಗೂ ದೋಸ್ತಿ ಸರ್ಕಾರ ಪತನವಾಗಿದ್ದು, ಸರ್ಕಾರ ರಚನೆಗೆ ಬಿಜೆಪಿ ಸಕಲ ಸಿದ್ಧತೆ ನಡೆಸಿದೆ. ಬಿ.ಎಸ್​. ಯಡಿಯೂರಪ್ಪ ಅವರ ಪದಗ್ರಹಣವು ಜ್ಯೋತಿಷಿಗಳ ಸಲಹೆಯಂತೆ ನಡೆಯಲಿದೆಯಂತೆ. ಜ್ಯೋತಿಷಿಗಳು ಎರಡು ಮುಹೂರ್ತ ನೀಡಿದ್ದು, ಗುರುವಾರ ಮಧ್ಯಾಹ್ನ 3.28 ನಿಮಿಷದಿಂದ 3.48 ನಿಮಿಷದವರೆಗೆ ಅಥವಾ ಶುಕ್ರವಾರ ಸಂಜೆ 4 ಗಂಟೆಗೆ ಪ್ರಮಾಣವಚನ ಸ್ವೀಕರಿಸುವಂತೆ ತಿಳಿಸಿದ್ದಾರೆ. ಯಡಿಯೂರಪ್ಪ ಗುರುವಾರದ ಮುಹೂರ್ತದಲ್ಲಿ ಸಿಎಂ ಆಗಿ ಪದಗ್ರಹಣ ಮಾಡಲಿದ್ದಾರೆ ಎನ್ನಲಾಗುತ್ತಿದೆ.

      ಇಂದು ರಾಜ್ಯಪಾಲರನ್ನು ಭೇಟಿ ಮಾಡಲಿರುವ ಬಿಎಸ್​ವೈ ಸರ್ಕಾರ ರಚಿಸಲು ಹಕ್ಕು ಮಂಡಿಸಲಿದ್ದಾರೆ. ನಂತರ ಬಿಜೆಪಿ ಪಕ್ಷದ ಕಾರ್ಯಾಲಯದಲ್ಲಿ ನಡೆಯಲಿರುವ ಪಕ್ಷದ ಸಭೆಯಲ್ಲಿ ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡುವ ಪ್ರಕ್ರಿಯೆ ಸಾಂಕೇತಿಕವಾಗಿ ನಡೆಯಲಿದೆ.

      ಶಾಸಕಾಂಗ ಪಕ್ಷದ ಸಭೆಯ ನಂತರ ಬಿಎಸ್​ವೈ ದೆಹಲಿಗೆ ಹೊರಡಲಿದ್ದು,  ಅಮಿತ್ ಷಾ, ಪಿಯೂಷ್ ಗೋಯೆಲ್, ರಾಜನಾಥ್ ಸಿಂಗ್, ಜೆ.ಪಿ.ನಡ್ಡಾ, ನಿತಿನ್ ಗಡ್ಕರಿ ಹಾಗೂ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ಕೃತಜ್ಞತೆ ಸಲ್ಲಿಸಲಿದ್ದಾರೆ. ಅಲ್ಲದೆ ತಮ್ಮ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಆಹ್ವಾನಿಸಲಿದ್ದಾರೆ ಎಂದು ತಿಳಿದುಬಂದಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ