ಬಿಜೆಪಿಯ ಭದ್ರಕೋಟೆಗೆ ಕಾಂಗ್ರೆಸ್-ಜೆಡಿಎಸ್ ಲಗ್ಗೆ

ಬೆಂಗಳೂರು

        ಬಿಜೆಪಿಯ ಭದ್ರಕೋಟೆಯಾದ ಶಿವಮೊಗ್ಗ ಮತ್ತು ಬಳ್ಳಾರಿ ಲೋಕಸಭಾ ಕ್ಷೇತ್ರಗಳಿಗೆ ಲಗ್ಗೆ ಇಟ್ಟು ವಶಪಡಿಸಿಕೊಳ್ಳುವ ತಂತ್ರಗಾರಿಕೆಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಆದ್ಯತೆ ನೀಡಿವೆ.

        ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತನ್ನ ಪ್ರಾಭಲ್ಯ ಸಾಬೀತುಪಡಿಸಲು ದೋಸ್ತಿಗಳು ಇದೀಗ ನಿರ್ಣಾಯಕ ಹೋರಾಟಕ್ಕೆ ಅಣಿಯಾಗುತ್ತಿದ್ದಾರೆ. ಮತ್ತೊಂದೆಡೆ ತನ್ನೆರಡು ಕ್ಷೇತ್ರಗಳನ್ನು ಉಳಿಸಿಕೊಂಡು ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ದೋಸ್ತಿಗಳನ್ನು ಬಗ್ಗು ಬಡಿಯಲು ಬಿಜೆಪಿ ನಾಯಕರು ಕಾರ್ಯತತ್ಪರರಾಗಿದ್ದಾರೆ.

         ಮತ್ತೊಂದೆಡೆ ಮೈತ್ರಿ ಪಕ್ಷಗಳ ನಡುವೆ ಇರುವ ಭಿನ್ನಮತ ಯಾವ ಪಕ್ಷವನ್ನು ಗೆಲ್ಲಿಸುತ್ತದೆಯೋ, ಅಥವಾ ಸೋಲಿನ ದವಡೆಗೆ ತಳ್ಳುತ್ತದೆಯೋ ಎನ್ನುವ ಆತಂಕ ಸಹ ಉಭಯ ಪಕ್ಷಗಳ ನಾಯಕರನ್ನು ಕಾಡುತ್ತಿದೆ. ರಾಮನಗರ ಮತ್ತು ಜಮುಖಂಡಿ ವಿಧಾನಸಭಾ ಕ್ಷೇತ್ರಗಳಲ್ಲಿ ಅಷ್ಟೇನು ಗೊಂದಲ, ಪೈಪೋಟಿ ಇಲ್ಲದ ಕಾರಣ ಲೋಕಸಭಾ ಚುನಾವಣೆ ಇದೀಗ ಪ್ರಮುಖ ಮೂರು ರಾಜಕೀಯ ಪಕ್ಷಗಳಿಗೆ ಪ್ರತಿಷ್ಠೆಯಾಗಿ ಪರಿಣಮಿಸಿದೆ.

        ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಅನಿತಾ ಕುಮಾರ ಸ್ವಾಮಿ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಮಂಡ್ಯದಲ್ಲಿ ಅವರ ಪುತ್ರ ನಿಖಿಲ್ ಕುಮಾರ ಸ್ವಾಮಿ ಸ್ಪರ್ಧೆ ಮಾಡುವ ಸಾಧ್ಯತೆಗಳಿವೆ. ಹಾಗೇನಾದರೂ ಆದರೆ ಗೌಡರ ಕುಟುಂಬದ ಮೂರನೇ ತಲೆಮಾರಿನವರು ಚುನಾವಣಾ ರಾಜಕಾರಣ ಪ್ರವೇಶಿಸಿದಂತಾಗುತ್ತದೆ. ಇದು ಜೆಡಿಎಸ್‍ನಲ್ಲಿ ಆಂತರಿಕ ಸಂಘರ್ಷಕ್ಕೂ ಸಹ ಕಾರಣವಾಗಲಿದೆ.

       ವಿಧಾನಸಭೆಗೆ ಆಯ್ಕೆಯಾಗಿರುವ ಬಿ.ಎಸ್.ಯಡಿಯೂರಪ್ಪ ಅವರಿಂದ ತೆರವಾದ ಶಿವಮೊಗ್ಗ, ಶ್ರೀರಾಮುಲು ಅವರಿಂದ ತೆರವಾದ ಬಳ್ಳಾರಿ, ಸಿ.ಎಸ್.ಪುಟ್ಟರಾಜು ಅವರಿಂದ ತೆರವಾದ ಮಂಡ್ಯದಲ್ಲಿ ಚುನಾವಣಾ ರಾಜಕಾರಣ ರಂಗೇರಲಿದೆ.

       ಯಡಿಯೂರಪ್ಪ ಅವರಿಗೆ ಇದೀಗ ಶಿವಮೊಗ್ಗದಲ್ಲಿ ತಮ್ಮ ಪುತ್ರನನ್ನು ಗೆಲ್ಲಿಸಿಕೊಳ್ಳುವ ಅನಿವಾರ್ಯತೆ ಎದುರಾಗಿದೆ. ಜತೆಗೆ ಬಳ್ಳಾರಿಯಲ್ಲೂ ಕಮಲ ಅರಳುವಂತೆ ಮಾಡುವುದು ಬಹುದೊಡ್ಡ ಸವಾಲಾಗಿದೆ. ಬರುವ 2019ರ ಸಾರ್ವತ್ರಿಕ ಲೋಕಸಭಾ ಚುನಾವಣೆಗೆ ಪೂರ್ವಭಾವಿಯಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಉಡುಗೊರೆ ನೀಡಲು ಯಡಿಯೂರಪ್ಪ ಅವರಿಗೆ ಇದು ಕಡೆಯ ಅವಕಾಶವಾಗಿದೆ. ಮತ್ರಿ ಸರ್ಕಾರಕ್ಕೆ ಈ ಚುನಾವಣೆ ಅಗ್ನಿ ಪರೀಕ್ಷೆಯಾಗಿದ್ದರೆ ಬಿಜೆಪಿಗೆ ಸತ್ವ ಪರೀಕ್ಷೆಯಂತಾಗಿದೆ. ಯಡಿಯೂರಪ್ಪ ಅವರಿಗೆ ತಮ್ಮ ನಾಯಕತ್ವದಲ್ಲಿ ಇನ್ನೂ ಕಸುವಿದೆ ಎನ್ನುವುದನ್ನು ತೋರಿಸಿಕೊಳ್ಳಬೇಕಾಗಿದೆ.

        ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರ ಹೆಗಲಿಗೆ ಚುನಾವಣಾ ಉಸ್ತುವಾರಿ ಜವಾಬ್ದಾರಿ ಹೊರಿಸಲಾಗುತ್ತಿದೆ. ಎಲ್ಲರೂ ಒಗ್ಗಟ್ಟಿನಿಂದ ಚುನಾವಣೆ ಎದುರಿಸುವಂತೆ ನೋಡಿಕೊಳ್ಳುವ ಉದ್ದೇಶದಿಂದ ರಾಜ್ಯದ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಲ್ ಬಹುತೇಕ ಒಂದೆರಡು ದಿನಗಲ್ಲಿ ನಗರಕ್ಕೆ ಆಗಮಿಸಿ ಅಭ್ಯರ್ಥಿಗಳ ಆಯ್ಕೆ, ಚುನಾವಣಾ ತಂತ್ರಗಾರಿಕೆ ಬಗ್ಗೆ ಚರ್ಚೆ ನಡೆಸಲಿದ್ದಾರೆ.

        ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಜೆಡಿಎಸ್ ಸಹ ಸ್ವಲ್ಪ ಮಟ್ಟಿಗೆ ಪ್ರಾಬಲ್ಯ ಹೊಂದಿದ್ದು, ಕಾಂಗ್ರೆಸ್‍ಗೆ ಸೂಕ್ತ ಸಹಕಾರ ನೀಡಿದರೆ ಯಡಿಯೂರಪ್ಪ ತವರು ನೆಲದಲ್ಲಿ ಬಿಜೆಪಿಯನ್ನು ಮಣ್ಣು ಮುಕ್ಕಿಸಬಹುದು ಎನ್ನುವ ಲೆಕ್ಕಾಚಾರವಿದೆ. ಜತೆಗೆ ಯಡಿಯೂರಪ್ಪ ಪುತ್ರ ಬಿ.ವೈ. ರಾಘವೇಂದ್ರ ಅವರ ಸ್ಪರ್ಧೆಗೆ ಹಿರಿಯ ಮುಖಂಡ ಕೆ.ಎಸ್. ಈಶ್ವರಪ್ಪ ಬಣ ವಿರೋಧ ವ್ಯಕ್ತಪಡಿಸಿದ್ದು, ಈ ಎಲ್ಲಾ ಅಂಶಗಳನ್ನು ಮೈತ್ರಿ ನಾಯಕರು ಮನಗಂಡಿದ್ದಾರೆ.

       ಈ ಬಾರಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದಿಂದ ಅಭ್ಯರ್ಥಿಯಾಗಿರುವುದರಿಂದ ಬಹುತೇಕ ತೀವ್ರ ಸ್ಪರ್ಧೆ ನೀಡಬಹುದು ಎಂಬ ಲೆಕ್ಕಾಚಾರಗಳಿವೆ. ಕಾಂಗ್ರೆಸ್‍ನಿಂದ ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪ, ಕಿಮ್ಮನೆ ರತ್ನಾಕರ್ ಮತ್ತು ಹಿರಿಯ ನಾಯಕ ಮಂಜುನಾಥ್ ಭಂಡಾರಿ ಈ ಕ್ಷೇತ್ರದಲ್ಲಿ ಸ್ಪರ್ಧಿಸುವ ಆಕಾಂಕ್ಷೆ ಹೊಂದಿದ್ದಾರೆ. ಆದರೆ ಪ್ರಬಲ ಅಭ್ಯರ್ಥಿ ದೊರೆಯುತ್ತಿಲ್ಲ. ಬಹುತೇಕ ಕಿಮ್ಮನೆ ರತ್ನಾಕರ್ ಅವರನ್ನು ಕಣಕ್ಕಿಳಿಸುವ ಸಂಭವವಿಚೆ. ಒಟ್ಟಿನಲ್ಲಿ ಐದು ಕ್ಷೇತ್ರಗಳ ಚುನಾವಣೆ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟಕ್ಕೆ ಪ್ರತಿಷ್ಠೆಯಾಗಿದೆ. ಬಿಜೆಪಿಗೆ ಲೋಕಸಭೆಯ ಸೆಮಿಫೈನಲ್‍ಗೂ ಮುನ್ನ ತನ್ನ ಸಾಮಥ್ರ್ಯ ಪರೀಕ್ಷೆಗೆ ಇದು ವೇದಿಕೆಯಾಗಿದೆ.

       ಇನ್ನು ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಬಳ್ಳಾರಿಯಲ್ಲಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಉತ್ತಮ ಸಾಧನೆ ಮಾಡಿದ್ದು, ಐದು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ ತನ್ನ ಸಾಮಥ್ರ್ಯ ಹೆಚ್ಚಿಸಿಕೊಂಡಿದೆ. ಗಣಿ ಉದ್ಯಮಿ, ಮಾಜಿ ಸಚಿವ ಜಿ. ಜನಾರ್ದನ ರೆಡ್ಡಿ ಅವರಿಗೆ ಬಳ್ಳಾರಿ ಭದ್ರಕೋಟೆ ಪ್ರವೇಶಿಸಲು ನ್ಯಾಯಾಲಯ ನಿರ್ಬಂಧ ವಿಧಿಸಿದೆ. ಇದು ಸಹ ಕಾಂಗ್ರೆಸ್ ಪಾಲಿಗೆ ವರದಾನವಾಗುವ ಸಾಧ್ಯತೆಯಿದೆ. ಶಾಸಕ ಬಿ. ಶ್ರೀರಾಮುಲು ತಮ್ಮ ಸಹೋದರಿ ಶಾಂತಾ ಅವರನ್ನು ಕಣಕ್ಕಿಳಿಸಲು ಪ್ರಯತ್ನ ನಡೆಸಿದ್ದಾರೆ. ಕಾಂಗ್ರೆಸ್‍ನಿಂದ ಶಾಸಕ ನಾಗೇಂದ್ರ ಅವರ ಸಹೋದರ ರಾಮ್ ಪ್ರಸಾದ್ ಅಥವಾ ಮತ್ತಿತರ ಸ್ಥಳೀಯ ಮುಖಂಡರ ಪೈಕಿ ಒಬ್ಬರನ್ನು ಕಣಕ್ಕಿಳಿಸಲು ರಾಜ್ಯದ ನಾಯಕರು ಮುಂದ್ದಾಗಿದ್ದಾರೆ.

       ಹಾಗೆ ನೋಡಿದರೆ ಶಿವಮೊಗ್ಗ ಮತ್ತು ಬಳ್ಳಾರಿ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಜೆಪಿಯಲ್ಲಿ ರಣೋತ್ಸಾಹ ಕಡಿಮೆಯಾಗಿದೆ. ವಿಧಾನಸಭೆ ಚುನಾವಣೆ ನಂತರ ಸರ್ಕಾರ ರಚಿಸಲು ಬಿಜೆಪಿ ನಾಯಕರು ನಡೆಸಿದ ಪ್ರಯತ್ನಗಳು ವಿಫಲವಾಗಿವೆ. ರಾಷ್ಟ್ರೀಯ ನಾಯಕರು ಸಹ ಯಡಿಯೂರಪ್ಪ ಅವರ ಪ್ರಯತ್ನಕ್ಕೆ ಸೂಕ್ತ ಸಹಕಾರ ನೀಡಿಲ್ಲ. ಈ ಎಲ್ಲಾ ಅಂಶಗಳು ಬಿಜೆಪಿ ಪಾಲಿಗೆ ನಕಾರಾತ್ಮಕವಾಗಿವೆ.

       ಬಿಜೆಪಿ ಒಲ್ಲದ ಮನಸ್ಸಿನಿಂದಲೇ ಚುನಾವಣೆಗೆ ತಯಾರಾಗುತ್ತಿದೆ. ರಾಜ್ಯ ಕಾರ್ಯಕಾರಿಣಿ ಸಮಿತಿ ಸಭೆ ಕರೆದು ಅಭ್ಯರ್ಥಿಗಳ ಆಯ್ಕೆ ಬಗ್ಗೆ ಚರ್ಚೆ ನಡೆಸುತ್ತಿದೆ. ಜತೆಗೆ ಜೆಡಿಎಸ್-ಕಾಂಗ್ರೆಸ್‍ನ ಅತೃಪ್ತರನ್ನು ಸೆಳೆದುಕೊಳ್ಳುವ ತಂತ್ರಗಾರಿಕೆ ಅನುಸರಿಸುತ್ತಿದೆ.

       ಹಾಗೆಂದು ಕಾಂಗ್ರೆಸ್‍ನಲ್ಲಿ ಎಲ್ಲವೂ ಸರಿಯಿಲ್ಲ. ಮಂತ್ರಿಮಂಡಲ ವಿಸ್ತರಣೆಯಾಗದ ಹಿನ್ನೆಲೆಯಲ್ಲಿ ಭುಗಿಲೆದ್ದ ಭಿನ್ನಮತ ಇನ್ನೂ ತಣ್ಣಗಾಗಿಲ್ಲ. ಎಲ್ಲರನ್ನೂ ಸಮಾಧಾನಪಡಿಸಿ ಚುನಾವಣೆ ಎದುರಿಸುವುದು ಕಾಂಗ್ರೆಸ್‍ಗೆ ದೊಡ್ಡ ಸವಾಲಾಗಿದೆ. ಉಪಚುನಾವಣೆಯ ಹೋರಾಟ ಮೈತ್ರಿಕೂಟದ ಬಲಾಬಲ ಪರೀಕ್ಷೆಯಾಗಿದೆ. ಇನ್ನು ಜಯ ಸಾಧಿಸಿದರೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಮುಂದುವರಿಸಲು ಎರಡೂ ಪಕ್ಷಗಳಿಗೆ ಆತ್ಮವಿಶ್ವಾಸ ಹೆಚ್ಚಾಗಲಿದೆ. ಇಲ್ಲವಾದರೆ ಮೈತ್ರಿ ಮಾಡಿಕೊಂಡರೂ ಬಿಜೆಪಿಯನ್ನು ಸೋಲಿಸಲಾಗುವುದಿಲ್ಲ ಎಂಬ ಸಂದೇಶ ರವಾನೆಯಾಗುತ್ತದೆ. ಎರಡೂ ಪಕ್ಷಗಳ ನಾಯಕರು ಮತ್ತೊಮ್ಮೆ ತಮ್ಮ ನಿರ್ಧಾರಗಳನ್ನು ಪುನರ್ ಪರಿಶೀಲಿಸುವ ಅನಿವಾರ್ಯತೆ ಎದುರಾಗುತ್ತದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap