ಲೋಕಸಭೆಯಲ್ಲೂ ಮೈತ್ರಿ ಮುಂದುವರಿಯಲಿದೆ: ದೇಶಪಾಂಡೆ

ಬೆಂಗಳೂರು

        ಜೆಡಿಎಸ್-ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಂಡು ಲೋಕಸಭಾ ಚುಣಾವಣೆ ಎದುರಿಸುತ್ತೇವೆ ಎಂದು ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ ತಿಳಿಸಿದರು.

          ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಉಪ ಚುಣಾವಣೆಯಲ್ಲಿ ಹೊಂದಾಣಿಕೆ ಮಾಡಿದ ರೀತಿಯಲ್ಲಿಯೇ ಮಾಡುತ್ತೇವೆ ಎಂದರು.

         ನಗರದಲ್ಲಿ ಎಲ್ಲೆಲ್ಲಿ ಯಾವ್ಯಾವ ಪಕ್ಷದ ಅಭ್ಯರ್ಥಿ ನಿಲ್ಲಿಸುವುದು ಎಂಬುದರ ಬಗ್ಗೆ ತೀರ್ಮಾನ ಮಾಡುತ್ತೇವೆ. ಬೆಳಗಾವಿಯ ಅಧಿವೇಶನಕ್ಕೂ ಮೊದಲು ಸಭೆ ಮಾಡುತ್ತೇವೆ ಎಂದು ತಿಳಿಸಿದರು.

         ಕಲಬುರಗಿ ಹತ್ಯೆ ತನಿಖೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು,ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ವರದಿ ಕೇಳಿದೆ. ತಕ್ಷಣ ವರದಿ ಕೊಡುತ್ತೇವೆ.ಅದು ವಿಳಂಬವಾಗಬಾರದಿತ್ತು . ಸರಕಾರ ಸಾಕಷ್ಟು ಪ್ರಯತ್ನ ಮಾಡುತ್ತಿದೆ ಎಂದರು.

        ಸಚಿವರಾದ ಡಿ.ಕೆ.ಶಿವಕುಮಾರ್ ಹಾಗೂ ರಮೇಶ್ ಜಾರಕಿಹೊಳಿ ನಡುವೆ ಯಾವುದೇ ಗುದ್ದಾಟವಿಲ್ಲ. ಅವರಿಬ್ಬರೂ ಆಪ್ತ ಸ್ನೇಹಿತರು.ಆದರೆ ನಿಮಗೆ ಮಾತ್ರ ಹಾಗೆ ಕಾಣಿಸುತ್ತಿದೆ ಎಂದು ಮಾಧ್ಯಮದವರತ್ತಲೇ ಬೆರಳು ಮಾಡಿದರು.

        ಸಮ್ಮಿಶ್ರ ಸರ್ಕಾರ ಮೂರು ಜಿಲ್ಲೆಗೆ ಮಾತ್ರ ಸೀಮಿತವಾಗಿಲ್ಲ. ಹುಬ್ಬಳ್ಳಿ-ಧಾರವಾಡಕ್ಕೆ ಸಾಕಷ್ಟು ಅನುದಾನ ಬಿಡುಗಡೆ ಮಾಡಿದೆ. ಹುಬ್ಬಳ್ಳಿ ಧಾರವಾಡ ಅವಳಿ ನಗರದ ಕುಡಿಯುವ ನೀರಿಗಾಗಿ 24ಕೋಟಿ ಅನುದಾನವನ್ನು ನಮ್ಮ ಸರ್ಕಾರ ಕೊಟ್ಟಿದೆ. ಮಹಾನಗರ ಪಾಲಿಕೆಗೆ ಬರಬೇಕಾದ 117 ಕೋಟಿ ಪಿಂಚಣಿ ಹಣದ ಬಗ್ಗೆ ಈಗಾಗಲೇ ಚರ್ಚಿಸಲಾಗಿದೆ ಎಂದು ತಿಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ