ಬೆಂಗಳೂರು
ವರ್ತೂರು ಬಳಿಯ ಪಣತ್ತೂರಿನಲ್ಲಿ ಬುಧವಾರ ರಾತ್ರಿ ಮನೆಯ ಮೇಲೆ ಪಟಾಕಿ ಸ್ಫೋಟಗೊಂಡ ಪರಿಣಾಮ ಮನೆಯ ಮೇಲ್ಚಾವಣಿಯ ಶೀಟ್ ಹೊಡೆದು ಬೆಂಕಿ ಹೊತ್ತಿಕೊಂಡು ಮನೆಯೊಳಗಿದ್ದ ಪೀಠೋಪಕರಣಗಳು ಇನ್ನಿತರ ವಸ್ತುಗಳು ಸುಟ್ಟು ಕರಕಲಾಗಿವೆ.
ಪಣತ್ತೂರಿನ ವೆಂಕಟೇಶ್ ಎಂಬವರು ರಾತ್ರಿ ಮನೆಯವರ ಜೊತೆ ಊಟ ಮುಗಿಸಿ ಮನೆಯ ಆವರಣದಲ್ಲಿ ಕುಳಿತಿದ್ದರು.ಈ ವೇಳೆ ಏಕಾಏಕಿ ಭಾರೀ ಸ್ಫೋಟಕ ಸಾಂದ್ರತೆಯುಳ್ಳ ಪಟಾಕಿಯು ಮನೆ ಶೀಟ್ ನಿಂದ ಒಳಬಿದ್ದಿದೆ.ಈ ವೇಳೆ ಮನೆಯೊಳಗಿದ್ದ ವೆಂಕಟೇಶ್‍ರ ತಾಯಿ ರಾಜಮ್ಮ ಹಾಗೂ ಪುತ್ರ ಮೋನಿತ್‍ಗೆ ಸಣ್ಣಪುಟ್ಟ ಗಾಯಗಳಾಗಿವೆ. ಕೂಡಲೇ ಹತ್ತಿರದ ಖಾಸಗಿ ಆಸ್ಪತ್ರೆಯಲ್ಲಿ ಗಾಯಗೊಂಡ ಇಬ್ಬರಿಗೂ ಚಿಕಿತ್ಸೆ ಕೊಡಿಸಲಾಗಿದೆ.
ಘಟನೆ ನಡೆದ ವೇಳೆ ಏರಿಯಾದಲ್ಲಿ ವಿದ್ಯುತ್ ಕೂಡ ಕೈ ಕೊಟ್ಟಿತ್ತು ಇದೇ ವೇಳೆ ಕಿಡಿಗೇಡಿಗಳು ತಮ್ಮ ಮನೆಮೇಲೆ ಸ್ಪೊಟಕ ರೀತಿಯ ಪಟಾಕಿ ಎಸೆದಿರಬಹುದೆಂದು ಆರೋಪಿಸಿ ಮನೆ ಮಾಲೀಕ ವೆಂಕಟೇಶ್ ಮಾರತ್ತಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದು,ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.








