ಬೆಂಗಳೂರು :
ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ಬೆಂಬಲ ಇರುವವರೆಗೆ ನನ್ನ ವಿರುದ್ಧ ನೂರು ಆರೋಪಗಳು ಕೇಳಿ ಬಂದರೂ ಎದುರಿಸಿ ಗೆದ್ದು ಬರುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಇಂದು ರಾಜ್ಯಪಾಲರ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಉತ್ತರಿಸುತ್ತಿದ್ದ ಸಂದರ್ಭದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಮಾತನ್ನು ನೆನಪಿಸಿಕೊಂಡ ಅವರು, ಡಿನೋಟಿಫಿಕೇಶನ್ ಆರೋಪದಲ್ಲಿ ನಾನು ಜಾಮೀನಿನ ಮೇಲಿದ್ದೇನೆ ಎಂದು ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ. ಈ ದೇಶದಲ್ಲಿ ಯಾರು ಬೇಲ್ ಮೇಲೆ ಇಲ್ಲ ಹೇಳಿ? ನಿಮ್ಮ ರಾಷ್ಟ್ರೀಯ ನಾಯಕರ ಮೇಲೆ ಆರೋಪ ಇಲ್ಲವೇ? ನಿಮ್ಮ ರಾಜ್ಯಾಧ್ಯಕ್ಷರ ಮೇಲೆ ಆರೋಪ ಇಲ್ಲವೇ? ಅವರು ಬೇಲ್ ಮೇಲೆ ಇಲ್ಲವೇ? ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿಧಾನಸಭಾ ಅಧಿವೇಶನದಲ್ಲಿ ಸಿದ್ದರಾಮಯ್ಯನವರಿಗೆ ಖಡಕ್ ಆಗಿ ಪ್ರಶ್ನಿಸಿದ್ದಾರೆ.
ಎಲ್ಲಿವರೆಗೆ ನನಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಬೆಂಬಲ ಇರುತ್ತೋ, ಕೇಂದ್ರ ಗೃಹ ಸಚಿವರ ಬೆಂಬಲ ಇರುತ್ತೋ, ಜನರ ಆಶೀರ್ವಾದ ಇರುತ್ತೋ ಅಲ್ಲಿಯವರೆಗೂ ಇಂತಹ ಸಾವಿರಾರು ಕೇಸ್ಗಳನ್ನು ಎದುರಿಸಲು ನಾನು ಸಿದ್ದನಿದ್ದೇನೆ. ಈಗಾಗಲೇ ಇಂತಹ ಕೇಸ್ಗಳನ್ನು ಎದುರಿಸಿ ಬಂದಿದ್ದೇನೆ. ಮುಂದೆಯೂ ಎದುರಿಸಿ, ನಾನು ಪ್ರಾಮಾಣಿಕ ಎಂದು ಸಾಬೀತು ಪಡಿಸುತ್ತೇನೆ. ಮುಂಬರುವ ಚುನಾವಣೆಯಲ್ಲಿ ನಿಮ್ಮನ್ನು ಸೋಲಿಸುತ್ತೇವೆ. ನಿಮ್ಮನ್ನು ಶಾಶ್ವತವಾಗಿ ವಿರೋಧ ಪಕ್ಷದಲ್ಲಿ ಕೂರಿಸಲು ನಾವು ಪಣ ತೊಡುತ್ತೇವೆ ಎಂದು ಸಿಎಂ ಯಡಿಯೂರಪ್ಪ ಸಿದ್ದರಾಮಯ್ಯನವರಿಗೆ ಸವಾಲು ಹಾಕಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
