ಸೆನ್ಸೆಕ್ಸ್‌ 824 ಅಂಕ ಪತನ ಆಟೋ, ಮೆಟಲ್‌ ಸ್ಟಾಕ್ಸ್‌ ನಷ್ಟ- ಬಜಾಜ್‌ ಫೈನಾನ್ಸ್‌ 1ಕ್ಕೆ 10 ಷೇರು!

ಮುಂಬಯಿ:

    ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಇವತ್ತು 824ಕ್ಕೂ ಹೆಚ್ಚು ಅಂಕಗಳ ನಷ್ಟಕ್ಕೀಡಾಗಿದೆ. ಸೆನ್ಸೆಕ್ಸ್‌ 81,692 ಅಂಕಗಳಿಗೆ ಇಳಿಯಿತು. ನಿಫ್ಟಿ 236 ಅಂಕ ಕಳೆದುಕೊಂಡು 24,888ಕ್ಕೆ ತಗ್ಗಿತು. ನಿಫ್ಟಿ 50 ಫ್ಯೂಚರ್‌ ಆಂಡ್‌ ಆಪ್ಷನ್‌ ಕಾಂಟ್ರ್ಯಾಕ್ಟ್‌ಗಳ ವೀಕ್ಲೀ ಎಕ್ಸ್‌ಪೈರಿ, ಜಾಗತಿಕ ಅನಿಶ್ಚಿತತೆ, ಅಮೆರಿಕ-ಚೀನಾ ವಾಣಿಜ್ಯ ಒಪ್ಪಂದ ಇನ್ನೂ ಅಂತಿಮ ಆಗದಿರುವ ಹಿನ್ನೆಲೆಯಲ್ಲಿ ಸೂಚ್ಯಂಕ ಇಳಿಯಿತು. ಐಟಿ ಸ್ಟಾಕ್ಸ್‌ಗಳು ದರ ಇಳಿಕೆಯನ್ನು ದಾಖಲಿಸಿತು. ಅಮೆರಿಕ-ಚೀನಾ ವಾಣಿಜ್ಯ ಸಂಘರ್ಷ ಮತ್ತೆ ತೀವ್ರತೆ ಪಡೆದುಕೊಳ್ಳಬಹುದೇ ಎಂಬ ಆತಂಕ ಹೂಡಿಕೆದಾರರಲ್ಲಿ ಇದೆ.

   ಬಿಗ್‌ ಟಿಕೆಟ್‌ ಐಪಿಒಗಳು ಮುಂಬರುವ ದಿನಗಳಲ್ಲಿ ನಡೆಯಲಿವೆ. NSDL, HDB Financial ಕಂಪನಿಗಳ ಐಪಿಒ ನಡೆಯಲಿದೆ. ಸೆಕೆಂಡರಿ ಮಾರುಕಟ್ಟೆ ಚೇತರಿಸುತ್ತಿರುವ ಹಿನ್ನೆಲೆಯಲ್ಲಿ ಕಳೆದ ಎರಡು ತಿಂಗಳಿನಲ್ಲಿ 30ಕ್ಕೂ ಹೆಚ್ಚು ಲಿಸ್ಟಿಂಗ್‌ ಆಗಿದೆ. ಮುಂಬರುವ ದಿನಗಳಲ್ಲಿ 67 ಕಂಪನಿಗಳು 1 ಲಕ್ಷ ಕೋಟಿ ರುಪಾಯಿಗೂ ಹೆಚ್ಚು ಹೂಡಿಕೆಯನ್ನು ಸಂಗ್ರಹಿಸುವ ಉದ್ದೇಶದಿಂದ ಐಪಿಒಗಳನ್ನು ನಡೆಸಲಿವೆ. ಐಪಿಒ ಫಂಡ್‌ ರೈಸಿಂಗ್‌ 2 ಲಕ್ಷ ಕೋಟಿ ರುಪಾಯಿ ತನಕ ಏರಿಕೆಯಾಗುವ ಸಾಧ್ಯತೆಯೂ ಇದೆ. 

   ಟಾಟಾ ಗ್ರೂಪ್‌ನ ಷೇರುಗಳು ಕಳೆದ ಮೂರು ತಿಂಗಳಿನಲ್ಲಿ ಗಣನೀಯವಾಗಿ ಚೇತರಿಸಿವೆ. ಟಾಟಾ ಸಮೂಹದ 16 ಕಂಪನಿಗಳ ಷೇರುಗಳು ಮೂರು ತಿಂಗಳಿನಲ್ಲಿ 49% ತನಕ ಲಾಭ ಗಳಿಸಿವೆ. ಟಾಟಾ ಗ್ರೂಪ್‌ನ ಸಣ್ಣ ಕಂಪನಿಗಳಾದ Rallis India, Tata Comm, and Nelco ಷೇರುಗಳೂ ಲಾಭ ದಾಖಲಿಸಿವೆ. Tata Elxsi, Trent, Tata Motors, and Titan ಷೇರುಗಳೂ ಲಾಭ ಗಳಿಸಿವೆ. TCS, Voltas, and Benares Hotels ಷೇರು ದರ ಇಳಿಕೆಯಾಗಿವೆ.

   ಷೇರು ಮಾರುಕಟ್ಟೆಯಲ್ಲಿ ಲಿಸ್ಟ್‌ ಆಗಿರುವ ಕಂಪನಿಗಳ ಬಂಡವಾಳ ವೆಚ್ಚವು 2024-25ರಲ್ಲಿ 11 ಲಕ್ಷ ಕೋಟಿ ರುಪಾಯಿಗೆ ಏರಿಕೆಯಾಗಿದೆ. ಸರಕಾರದ ವೆಚ್ಚವನ್ನು ಇದು ಮೀರಿದೆ. ಫ್ಲಾಟ್‌ ಗ್ರೋತ್‌ನ ಹೊರತಾಗಿಯೂ ರಿಲಯನ್ಸ್‌ ಇಂಡಸ್ಟ್ರೀಸ್‌ ಅತಿ ಹೆಚ್ಚು ಖರ್ಚು ಮಾಡಿದೆ. ಯುಟಿಲಿಟಿ, ಆಟೊಮೊಬೈಲ್‌, ಸಿಮೆಂಟ್‌, ಹೆಲ್ತ್‌ ಕೇರ್‌ ವಲಯದಲ್ಲಿ ಕಾರ್ಪೊರೇಟ್‌ ಕಂಪನಿಗಳು ಹೆಚ್ಚಿನ ಬಂಡವಾಳ ವೆಚ್ಚವನ್ನು ಮಾಡಿವೆ.

  ಬಜಾಜ್‌ ಫೈನಾನ್ಸ್‌ ತನ್ನ ಷೇರನ್ನು 1:2 ಅನುಪಾತದಲ್ಲಿ ಸ್ಟಾಕ್‌ ಸ್ಪ್ಲಿಟ್‌ ಮಾಡಲಿದೆ. ಜತೆಗೆ 4:1 ರ ಅನುಪಾತದಲ್ಲಿ ಬೋನಸ್‌ ಷೇರುಗಳನ್ನು ನೀಡುತ್ತಿದ್ದು, ಜೂನ್‌ 16ರಿಂದ ಅನ್ವಯವಾಗಲಿದೆ. ಹೀಗಾಗಿ ಬಜಾಜ್‌ ಫೈನಾನ್ಸ್‌ನ ಪ್ರತಿ 1 ಷೇರು 10 ಷೇರುಗಳಾಗಿ ವಿಭಜನೆಯಾಗಲಿದೆ.

   ಉದಾಹರಣೆಗೆ 100 ಬಜಾಜ್‌ ಷೇರು ನಿಮ್ಮಲ್ಲಿ ಇದ್ದರೆ 1: 2 ಅನುಪಾತದಲ್ಲಿ 200 ಆಗಲಿದೆ. 200 ಷೇರುಗಳು 4:1 ಅನುಪಾತದಲ್ಲಿ 800 ಷೇರು ಆಗಲಿದೆ. ಆಗ ಒಟ್ಟು ಷೇರಿನ ಸಂಖ್ಯೆ 1,000 ಆಗಲಿದೆ. ಹೀಗಿದ್ದರೂ, ಷೇರಿನ ದರ ಮಾತ್ರ ವ್ಯತ್ಯಾಸವಾಗುವುದಿಲ್ಲ. ಷೇರುಗಳ ಸಂಖ್ಯೆ ಮಾತ್ರ ವೃದ್ಧಿಸಲಿದೆ. ಇದರಿಂದ ಹೊಸತಾಗಿ ಹೂಡಿಕೆ ಮಾಡುವವರಿಗೆ ಷೇರಿನ ದರ ಕೈಗೆಟಕುತ್ತದೆ. ಇದು ಟ್ರೇಡಿಂಗ್‌ ಆಕ್ಟಿವಿಟಿಯನ್ನು ಹೆಚ್ಚಿಸುತ್ತದೆ. ಈ ಲಾಭ ಬೇಕಿದ್ದರೆ ರೆಕಾರ್ಡ್‌ ಡೇಟ್‌ ಆಗಿರುವ ಜೂನ್‌ 16ರೊಳಗೆ ಷೇರುಗಳನ್ನು ಖರೀದಿಸಬೇಕು.

   ಅಹಮದಾಬಾದ್‌ನಲ್ಲಿ ಏರ್‌ ಇಂಡಿಯಾ ವಿಮಾನ ಪತನವಾದ ಬೆನ್ನಲ್ಲೇ ಸ್ಪೈಸ್‌ ಜೆಟ್‌, ಇಂಡಿಗೊ ಷೇರು ದರದಲ್ಲಿ ಎರಡು ಪರ್ಸೆಂಟ್‌ ಇಳಿಕೆಯಾಗಿದೆ. ಬೋಯಿಂಗ್‌ ಷೇರಿನ ದರದಲ್ಲೂ 5% ಇಳಿಕೆಯಾಗಿದೆ.

   2024ರಲ್ಲಿ ನಷ್ಟದಲ್ಲಿದ್ದ ಕನಿಷ್ಠ 40 ಕಂಪನಿಗಳು ಈ ವರ್ಷ ಲಾಭದ ಹಳಿಗೆ ಮರಳಿದೆ. ಈ ಪೈಕಿ ರಿಲಯನ್ಸ್‌ ಪವರ್‌ ಕೂಡ ಒಂದು. ಕಳೆದ 2023-24ರಲ್ಲಿ 2,242 ಕೋಟಿ ನಷ್ಟದಲ್ಲಿದ್ದ ಕಂಪನಿ 2024-25ರಲ್ಲಿ 2,947 ಕೋಟಿ ರುಪಾಯಿ ಲಾಭದ ಹಳಿಗೆ ಮರಳಿದೆ. ಕಳೆದೊಂದು ವರ್ಷದಲ್ಲಿ ರಿಲಯನ್ಸ್‌ ಪವರ್‌ ಹೂಡಿಕೆದಾರರಿಗೆ 151% ಲಾಭ ನೀಡಿದೆ. ಎಲೆಕ್ಟ್ರಾನಿಕ್ಸ್‌ ಬಿಡಿ ಭಾಗಗಳನ್ನು ತಯಾರಿಸುವ ಕೆರ್ನೆಕ್ಸ್‌ ಮೈಕ್ರೊ ಸಿಸ್ಟಮ್ಸ್‌ ಕಳೆದ ವರ್ಷ 27 ಕೋಟಿ ನಷ್ಟದಲ್ಲಿತ್ತು. ಈಗ 50 ಕೋಟಿ ಲಾಭದಲ್ಲಿದೆ.

Recent Articles

spot_img

Related Stories

Share via
Copy link