ನವದೆಹಲಿ :
ಯುಎಸ್‍ನ ಮಹಿಳೆಯೊಬ್ಬಳು ಒಂದು ಸ್ಟ್ರಾಬೆರಿ ಖರೀದಿಸಲು ಸಾವಿರಾರು ರೂಪಾಯಿ ಹಣ ನೀಡಿದ್ದಾಳಂತೆ. ಈ ವಿಚಾರವನ್ನು ಆಕೆ ಟಿಕ್‌ಟಾಕ್ ವಿಡಿಯೊದಲ್ಲಿ ಹಂಚಿಕೊಂಡಿದ್ದು, ಪ್ರೀಮಿಯಂ ಶಾಪ್ ಎರೆವ್ಹಾನ್‍ನಿಂದ ಸಾವಿರಾರು ರೂಪಾಯಿ ಖರ್ಚು ಮಾಡಿ ಒಂದು ಸ್ಟ್ರಾಬೆರಿ ಖರೀದಿಸಿದ್ದೇನೆ ಎಂದು ತಿಳಿಸಿದ್ದಾಳೆ. ಈ ವಿಡಿಯೊ ವೈರಲ್ ಆಗಿದೆ.ಒಂದು ಸ್ಟಾಬ್ರೆರಿ ಹಣ್ಣಿಗೆ ಸಾವಿರಾರು ರೂಪಾಯಿ ಖರ್ಚು ಮಾಡುವಂತದ್ದು ಏನಿದೆ ಆ ಹಣ್ಣಿನಲ್ಲಿ ಎಂಬ ಕುತೂಹಲ ನಿಮ್ಮನ್ನೂ ಕಾಡುತ್ತಿದೆಯಾ….? ಅದಕ್ಕೆ ಕಾರಣವನ್ನು ಕೂಡ ಆಕೆ ನೀಡಿದ್ದಾಳೆ. ಸ್ಟ್ರಾಬೆರಿ ಮೂಲತಃ ಜಪಾನ್‍ನ ಕ್ಯೋಟೋದಿಂದ ಬಂದಿದೆಯಂತೆ ಮತ್ತು ಇದನ್ನು ದಕ್ಷಿಣ ಕ್ಯಾಲಿಫೋರ್ನಿಯಾದ ಎರೆವ್ಹಾನ್ ಸ್ಥಳಗಳಲ್ಲಿ $ 18.99 ಕ್ಕೆ ಮಾರಾಟ ಮಾಡಲಾಗುತ್ತಿದೆ ಎಂದು ಆಂಟೋಸಿ ಹೇಳಿದ್ದಾಳೆ.
ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹಾಗೇ ಈ ವಿಡಿಯೊಗೆ ಜನರು ಬೇರೆ ಬೇರೆ ರೀತಿಯಲ್ಲಿ ಕಾಮೆಂಟ್ ಮಾಡಡುತ್ತಿದ್ದಾರೆ.. ಕೆಲವರು ಇದನ್ನು ಶ್ರೀಮಂತರ ದುಂದುವೆಚ್ಚ ಎಂದು ಕರೆದರೆ, ಕೆಲವರು ಬೆಲೆಯ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ನೆಟ್ಟಿಗರೊಬ್ಬರು, “ಇದು ಸಮಾಜದ ಜನರನ್ನು ತಮಾಷೆ ಮಾಡಿದ್ದಾಗಿದೆ ಎಂದು ಹೇಳಿದ್ದಾರೆ.
ಲಾಸ್ ಏಂಜಲೀಸ್ ಮೂಲದ ದಿನಸಿ ಅಂಗಡಿ ಎರೆವ್ಹಾನ್ ಜಸ್ಟಿನ್ ಬೀಬರ್, ಬ್ರೂಕ್ಲಿನ್ ಬೆಕ್ಹ್ಯಾಮ್ ಮತ್ತು ಕಾರ್ದಶಿಯಾನ್ ಸೇರಿದಂತೆ ಹಲವಾರು ಪ್ರಸಿದ್ಧ ವ್ಯಕ್ತಿಗಳು ಭೇಟಿ ನೀಡುವ ಸ್ಥಳವಾಗಿದೆ. ಈ ಎರೆವ್ಹಾನ್ ಈ ಹಿಂದೆಯೂ ವಸ್ತುಗಳ ಮೇಲಿನ ದುಬಾರಿ ಬೆಲೆಯ ವಿಚಾರಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡಿತ್ತು. ಕಳೆದ ವರ್ಷ ಮೇ ತಿಂಗಳಲ್ಲಿ, ಅಂಗಡಿಯು ಸುಮಾರು 950 ಮಿಲಿ ಸೂಪ್ ಅನ್ನು ಸುಮಾರು 2,100 ರೂ.ಗೆ ಮಾರಾಟ ಮಾಡಿತ್ತು. ಇದಲ್ಲದೆ, ಅಂಗಡಿಯಲ್ಲಿ ವಿಶೇಷ ಕಾಕ್ಟೈಲ್ ಐಸ್ ಬ್ಯಾಗ್ ಬೆಲೆ ಸುಮಾರು 2,500 ರೂ. ಅಂತೆ.
ಇತ್ತೀಚೆಗೆ ವ್ಯಕ್ತಿಯೊಬ್ಬ ಬೀದಿ ಬದಿಯ ಅಂಗಡಿಯ 5 ರೂ. ಇಡ್ಲಿಯನ್ನು ಸೇವಿಸುವುದರಿಂದ ಹಿಡಿದು ಪ್ಯಾಲೇಸ್‍ನಲ್ಲಿ ಸಿಗುವ ಚಿನ್ನದ ಲೇಪನದ ಐಷಾರಾಮಿ 5000 ರೂ ಬೆಲೆಯ ಇಡ್ಲಿಯನ್ನು ಸೇವಿಸಿದ್ದಾನೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ವೈರಲ್ ವಿಡಿಯೊದಲ್ಲಿ ಆತ ಮೊದಲು ರಸ್ತೆಬದಿಯ ಅಂಗಡಿಗೆ ಭೇಟಿ ನೀಡಿ 5 ರೂಪಾಯಿಯ ಇಡ್ಲಿಯನ್ನು ತಿಂದಿದ್ದಾನೆ. ನಂತರ ಬೆಂಗಳೂರಿನ ಪ್ರಸಿದ್ಧ ರಾಮೇಶ್ವರಂ ಕೆಫೆಗೆ ಭೇಟಿ ನೀಡಿ, 50 ರೂಪಾಯಿ ನೀಡಿ ಇಡ್ಲಿ ಸವಿದಿದ್ದಾನೆ. ಇದಾದ ಬಳಿಕ ತಾಜ್ ಹೋಟೆಲ್‍ಗೆ ಭೇಟಿ ನೀಡಿ 500 ರೂಪಾಯಿ ಕೊಟ್ಟು ಇಡ್ಲಿಯನ್ನು ತಿಂದಿದ್ದಾನೆ. ಕೊನೆಯದಾಗಿ ಅವರು ಐಷಾರಾಮಿ ಹೋಟೆಲ್‍ಗೆ ಹೋಗಿ 5000 ರೂಪಾಯಿ ತೆತ್ತು ಇಡ್ಲಿಯನ್ನು ತಿಂದಿದ್ದಾನೆ.
ಜನ ಮರಳೋ ಜಾತ್ರೆ ಮರಳೋ ಅನ್ನುವ ಹಾಗೇ ಕೆಲವರಿಗೆ ದುಬಾರಿ ಬಟ್ಟೆ, ಲಕ್ಸುರಿ ಕಾರು, ಫ್ಲೈವ್ ಸ್ಟಾರ್ ಹೋಟೆಲ್‌ಗಳ ಕ್ರೇಜ್ ಇರುತ್ತದೆ. ಇನ್ನು ತುಂಬಾ ದುಬಾರಿಯಾಗಿರುವುದು ಒಳ್ಳೆಯದಿರುತ್ತದೆ ಎಂಬುದು ಕೆಲವರ ಮನಸ್ಥಿತಿ!
