ಕೊರಟಗೆರೆ :
ಹೈಕೋರ್ಟಿನ ಆದೇಶ ಮತ್ತು ಮುಜರಾಯಿ ಆಯುಕ್ತರ ನಿರ್ದೇಶನದಂತೆ ಮಹಾಲಕ್ಷ್ಮೀ ದೇವಾಲಯದ ಆಡಳಿತದ ಜೊತೆ 16 ಕೋಟಿ ರೂ. ಮೌಲ್ಯದ ಚಿನ್ನಾಭರಣ ಮತ್ತು 11 ಕೋಟಿ ರೂ. ಬ್ಯಾಂಕ್ ಠೇವಣಿಯೊಂದಿಗೆ ಕೋಟ್ಯಂತರ ರೂ. ಮೌಲ್ಯದ ದೇವಾಲಯದ ಜಮೀನಿನ ದಾಖಲೆಯನ್ನು ಗೊರವನಹಳ್ಳಿ ಮಹಾಲಕ್ಷ್ಮೀ ಚಾರಿಟಬಲ್ ಟ್ರಸ್ಟ್‍ನ ಅಧ್ಯಕ್ಷರಿಗೆ ದೇವಾಲಯದ ಆಡಳಿತಾಧಿಕಾರಿ ಹಸ್ತಾಂತರ ಮಾಡಿದ್ದಾರೆ.
ತಾಲ್ಲೂಕಿನ ತೀತಾ ಗ್ರಾಪಂ ವ್ಯಾಪ್ತಿಯ ಗೊರವನಹಳ್ಳಿ ಶ್ರೀಮಹಾಲಕ್ಷ್ಮೀ ದೇವಾಲಯಕ್ಕೆ ಸೇರಿರುವ ಚಿನ್ನ- 11ಕೆಜಿ 780ಗ್ರಾಂ, ಬೆಳ್ಳಿ- 129 ಕೆಜಿ 94ಗ್ರಾಂ, ಉಳಿತಾಯ ಖಾತೆಯ ನಗದು- 1 ಕೋಟಿ 65 ಲಕ್ಷ, ಠೇವಣಿ ನಗದು- 10ಕೋಟಿ, ಸುಂದರ ಸೀರೆ- 45ಸಾವಿರ, ಸಿಲ್ಕ್ ಸೀರೆ- 1800, 8 ಕೋಟಿ ರೂ. ವೆಚ್ಚದ ದಾಸೋಹ ಭವನ, ಶಾಲಾ, ಕಾಲೇಜಿನ ಜೊತೆ ಕೋಟ್ಯಂತರ ರೂ. ಮೌಲ್ಯದ 24 ಎಕರೆ ದೇವಾಲಯದ ಜಮೀನಿನ ದಾಖಲೆಯನ್ನು ಟ್ರಸ್ಟ್ ವಶಕ್ಕೆ ನೀಡಿದ್ದಾರೆ.
ಗೊರವನಹಳ್ಳಿ ಶ್ರೀಮಹಾಲಕ್ಷ್ಮಿ ದೇವಾಲಯವು ಕಾಯ್ದೆಯನುಸಾರ ಘೋಷಿತ ಸಂಸ್ಥೆಯೆಂದು ಘೋಷಿಸಲು ಅಂತಿಮ ಆದೇಶ ಹೊರಡಿಸುವ ತನಕ ನಿಬಂಧನೆ ಮತ್ತು ನಿಯಮವನ್ನು ಪಾಲಿಸಲು ಉಚ್ಛ ನ್ಯಾಯಾಲಯ ಟ್ರಸ್ಟ್‍ಗೆ ಆದೇಶ ಮಾಡಿದೆ. ಸಾರ್ವಜನಿಕ ವಂತಿಗೆ ಮತ್ತು ಮಹತ್ತರ ತೀರ್ಮಾನಕ್ಕೆ ಕಡಿವಾಣ ಹಾಕಿದೆ. ದೇವಾಲಯದ ದಾಖಲೆ ಮತ್ತು ಲೆಕ್ಕ ಪತ್ರಗಳನ್ನು ಪ್ರತಿ ಮಾಹೆಯಂತೆ ಜಿಲ್ಲಾಧಿಕಾರಿಗಳ ಗಮನಕ್ಕೆ ಕಡ್ಡಾಯವಾಗಿ ತರಲು ಕಟ್ಟುನಿಟ್ಟಾಗಿ ಸೂಚಿಸಿದೆ.
ಮಹಾಲಕ್ಷ್ಮೀ ದೇವಾಲಯದ ಆಡಳಿತ ಅಧಿಕಾರವನ್ನು ಮಧುಗಿರಿ ಎಸಿ ಸೋಮಪ್ಪ ಕಡಕೋಳರವರು ಸರಕಾರದಿಂದ ಶ್ರೀಮಹಾಲಕ್ಷ್ಮೀ ಚಾರಿಟಬಲ್ ಟ್ರಸ್ಟ್‍ನ ಅಧ್ಯಕ್ಷ ಟಿ.ಆರ್.ಶ್ರೀರಂಗಯ್ಯನವರಿಗೆ ಕಾರ್ಯದರ್ಶಿ ಚಿಕ್ಕನರಸಪ್ಪ, ಧರ್ಮದರ್ಶಿ ರಂಗಶಾಮಯ್ಯ, ರಾಮಕೃಷ್ಣಯ್ಯ, ನರಸರಾಜು, ಲಕ್ಷ್ಮೀನರಸಯ್ಯ, ತಹಸೀಲ್ದಾರ್ ಗೋವಿಂದರಾಜು, ಉಪತಹಸೀಲ್ದಾರ್ ಮಧುಚಂದ್ರ, ಎಎಸೈ ಯೊಗೀಶ್, ತೀತಾ ಗ್ರಾಪಂ ಅಧ್ಯಕ್ಷ ಟಿ.ಆರ್.ನಟರಾಜು ಹಾಗೂ ದೇವಾಲಯದ ಸಿಬ್ಬಂದಿ ಸಮಕ್ಷಮದಲ್ಲಿ ಹಸ್ತಾಂತರ ಮಾಡಿದ್ದಾರೆ.
ಮಹಾಲಕ್ಷ್ಮೀ ದೇವಾಲಯದ ಗತವೈಭವಕ್ಕೆ ಭಕ್ತರ ತವಕ :
ಶ್ರೀಮಹಾಲಕ್ಷ್ಮೀ ಚಾರಿಟಬಲ್ ಟ್ರಸ್ಟ್ ಮತ್ತು ಶ್ರೀಮಹಾಲಕ್ಷ್ಮೀ ಪುನಸ್ರ್ಥಾಪಿತ ಟ್ರಸ್ಟ್ ನಡುವಿನ ವೈಮನಸ್ಸು ಈಗ ಮಾಯವಾಗಿದೆ. 6 ವರ್ಷಗಳ ನಂತರ ಸರಕಾರದ ಹಿಡಿತದಿಂದ ಮತ್ತೆ ಟ್ರಸ್ಟ್‍ಗೆ ಹಸ್ತಾಂತರ ಆಗಿರುವುದು ಭಕ್ತರಲ್ಲಿ ಸಂತಸ ತಂದಿದೆ. ಭಕ್ತಾದಿಗಳಿಗೆ ಪ್ರಸಾದದ ಜೊತೆ ದಾಸೋಹ ಪ್ರಾರಂಭಕ್ಕೆ ಈಗಾಗಲೇ ಸಿದ್ದತೆ ನಡೆಯುತ್ತಿದೆ. ಶಾಲಾ-ಕಾಲೇಜು-ವಸತಿ ನಿಲಯ ಪ್ರಾರಂಭದ ಜೊತೆ ದೇವಾಲಯದ ಗತವೈಭವ ಮತ್ತೆ ಪ್ರಾರಂಭ ಆಗಲಿ ಎಂಬುದು ಭಕ್ತರ ಅಭಿಲಾಷೆಯಾಗಿದೆ.
ಮಹಾಲಕ್ಷ್ಮೀ ಭಕ್ತಾದಿಗಳ ಆಶಯದಂತೆ ದೇವಾಲಯದ ಆಡಳಿತ ಶ್ರೀಮಹಾಲಕ್ಷ್ಮೀ ಚಾರಿಟಬಲ್ ಟ್ರಸ್ಟ್‍ಗೆ ಬಂದಿದೆ. ಹೈಕೋರ್ಟಿನ ಆದೇಶ, ನಿಬಂಧನೆ ಮತ್ತು ಷರತ್ತುಗಳನ್ನು ಕಡ್ಡಾಯವಾಗಿ ಪಾಲಿಸುತ್ತೇವೆ. ಮಹಾಲಕ್ಷ್ಮೀ ದೇವಾಲಯದ ಅಭಿವೃದ್ದಿ ಮತ್ತು ಭಕ್ತರ ಸೇವೆಗೆ ಟ್ರಸ್ಟ್ ಸದಾ ಶ್ರಮಿಸುತ್ತದೆ. ಪ್ರಸಾದ ಮತ್ತು ದಾಸೋಹ ಪ್ರಾರಂಭಕ್ಕೆ ಸಿದ್ದತೆ ನಡೆಯುತ್ತಿದೆ.
– ಚಿಕ್ಕನರಸಪ್ಪ, ಕಾರ್ಯದರ್ಶಿ, ಮಹಾಲಕ್ಷ್ಮೀ ಚಾರಿಟಬಲ್ ಟ್ರಸ್ಟ್. ಗೊರವನಹಳ್ಳಿ.
ಹೈಕೋರ್ಟಿನ ಆದೇಶದಂತೆ ಗೊರವನಹಳ್ಳಿ ದೇವಾಲಯದ ಆಡಳಿತ ಶ್ರೀಮಹಾಲಕ್ಷ್ಮೀ ಚಾರಿಟಬಲ್ ಟ್ರಸ್ಟ್‍ಗೆ ಹಸ್ತಾಂತರ ಆಗಿದೆ. ತುಮಕೂರು ಡಿಸಿಯವರ ನಿರ್ದೇಶನದಂತೆ ಹೈಕೋರ್ಟಿನ ಷರತ್ತು ಮತ್ತು ನಿಬಂಧನೆ ಪಾಲನೆಯ ಬಗ್ಗೆ ಟ್ರಸ್ಟ್ ಅಧ್ಯಕ್ಷರಿಗೆ ಸೂಚಿಸಲಾಗಿದೆ. ಎಂದಿನಂತೆ ಪ್ರತಿನಿತ್ಯ ಮಹಾಲಕ್ಷ್ಮೀ ದೇವಿಯ ಸೇವೆ ಮತ್ತು ಭಕ್ತಾದಿಗಳಿಗೆ ದರ್ಶನ ಸಿಗಲಿದೆ.
-ಸೋಮಪ್ಪ ಕಡಕೋಳ, ಆಡಳಿತಾಧಿಕಾರಿ/ಎಸಿ., ಮಧುಗಿರಿ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ