ಬಸ್ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳ ಪರದಾಟ

ಕೊರಟಗೆರೆ:

             ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ರಾಜ್ಯ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದು ಕೋಟ್ಯಂತ ರೂಪಾಯಿ ಖರ್ಚು ಮಾಡುತ್ತಿದೆ. ಇಂತಹ ಸನ್ನಿವೇಶದಲ್ಲಿ ನೂರಾರು ವಿದ್ಯಾರ್ಥಿಗಳು ಶಾಲೆಗೆ ಬರಲು ಸಮರ್ಪಕ ಸಾರಿಗೆ ಸೌಕರ್ಯವಿಲ್ಲದೆ ದಿನಂಪ್ರತಿ ಬೆಳಗ್ಗೆ ತಿಂಡಿ ಇಲ್ಲದೆ 2-3 ತಾಸು ಬಸ್‍ಗಾಗಿ ಕಾದು ಪರಿತಪಿಸುವಂತ ಪರಿಸ್ಥಿತಿ ತಾಲ್ಲೂಕಿನ ಹೊಳವನಹಳ್ಳಿ ಭಾಗದ ವಿದ್ಯಾರ್ಥಿಗಳಿಗೆ ತಲೆದೋರಿದೆ.

ತಾಲ್ಲೂಕಿನ ಹೊಳವನಹಳ್ಳಿ ಭಾಗದಿಂದ ಕೊರಟಗೆರೆ ತಾಲ್ಲೂಕು ಕೇಂದ್ರ ಸ್ಥಾನಕ್ಕೆ ಪ್ರತಿದಿನ 500-600 ವಿದ್ಯಾರ್ಥಿಗಳು ಬಸ್ ಮೂಲಕ ಪ್ರಯಾಣಿಸುತ್ತಿದ್ದಾರೆ. ವಿದ್ಯಾರ್ಥಿಗಳು ಬೆಳಗ್ಗೆ 8.30 ಗಂಟೆಗೆ, ಮತ್ತೆ ಕೆಲವು 9 ಗಂಟೆಗೆ ಪ್ರಾರಂಭಗೊಳ್ಳುವ ಶಾಲಾ ಕಾಲೇಜಿಗೆ ಹೋಗಲು ಬೆಳಗ್ಗೆ 7 ಗಂಟೆಗೆ ಗ್ರಾಮೀಣ ಪ್ರದೇಶದ ಮನೆಗಳಿಂದ ತಿಂಡಿ ಇಲ್ಲದೆ ಉಪವಾಸ ಹೊರಟು ಬರುತ್ತಾರೆ. ಬಂದು ಮೂರು ಗಂಟೆಗಳ ಕಾಲ ಬಸ್‍ಸ್ಟ್ಯಾಂಡ್‍ನಲ್ಲಿ ಬಸ್‍ಗಾಗಿ ಕಾದು, ಕಾಲಿಡಲೂ ಸ್ಥಾವಕಾಶವಿಲ್ಲದ ಬಸ್‍ನಲ್ಲಿ ಪ್ರಯಾಣಿಸಲಾಗದೆ, ಬಂದ ದಾರಿಗೆ ಸುಂಕ ಇಲ್ಲ ಎಂಬುವಂತೆ ಹಲವು ವಿದ್ಯಾರ್ಥಿ- ವಿದ್ಯಾರ್ಥಿನಿಯರು ಶಾಲಾ-ಕಾಲೇಜಿನ ತರಗತಿಗಳನ್ನು ತಪ್ಪಿಸಿಕೊಂಡು ಮನೆಗೆ ವಾಪಸ್ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕೊರಟಗೆರೆ ಪಟ್ಟಣವು ತಾಲ್ಲೂಕು ಕೇಂದ್ರವಾಗಿದ್ದು, ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ತಾಲ್ಲೂಕು ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ಹೆಸರು ಗಳಿಸಿದ್ದರೂ ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ಬಂದು ಹೋಗಲು ಹರಸಾಹಸ ಪಡುತ್ತಿದ್ದಾರೆ. ಹೊಳವನಹಳ್ಳಿ, ಸೋಂಪುರ, ಅಕ್ಕಿರಾಂಪುರ, ಹೊಸಹಳ್ಳಿ, ಭೈರೇನಹಳ್ಳಿ ಸೇರಿದಂತೆ ತಾಲ್ಲೂಕಿನ ಗಡಿ ಭಾಗ ಅರಸಾಪುರದ ಹಾಗೂ ಈ ಮೇಲಿನ ಎಲ್ಲಾ ಗ್ರಾಮಗಳ ಆಸು-ಪಾಸಿನ 40-50 ಹಳ್ಳಿಗಳ ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ಸಮರ್ಪಕ ಬಸ್‍ಗಳ ಸಂಪರ್ಕವಿಲ್ಲದೆ ಪರಿತಪಿಸುತ್ತಾ, ಸರ್ಕಾರ ಹಾಗೂ ಜಿಲ್ಲಾಡಳಿತದ ವಿರುದ್ದ ಹಿಡಿ ಶಾಪ ಹಾಕುತ್ತಿದ್ದಾರೆ.

ಸಾರ್ವಜನಿಕರು ತಾಲ್ಲೂಕು ಕೇಂದ್ರ ಹಾಗೂ ಜಿಲ್ಲಾ ಕೇಂದ್ರಕ್ಕೆ ನಿತ್ಯವೂ ಕಛೇರಿ ಸೇರಿದಂತೆ ಆಸ್ಪತ್ರೆಗಳಿಗೆ ತೆರಳಲು ಬೆಳಗ್ಗೆಯೇ ಬಸ್ ನಿಲ್ದಾಣದಲ್ಲಿ ಕಾಯುವ ಜೊತೆಗೆ ವಿದ್ಯಾರ್ಥಿಗಳ ಅವಸರಕ್ಕೆ ಹಿರಿಯರು, ವಯಸ್ಸಾದವರ ಗತಿ ಕೇಳುವರಿಲ್ಲದಂತಾಗಿ, ಸಾರ್ವಜನಿಕರು ಇದರಿಂದ ತುಂಬಾ ತೊಂದರೆ ಪಡುತ್ತಿದ್ದಾರೆ. ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು ತರಗತಿ ತಪ್ಪಿ ಹೋಗುತ್ತದೆ ಎಂಬ ಕಾರಣಕ್ಕೆ ಪ್ರಾಣ ಪಣಕ್ಕಿಟ್ಟು ಬಸ್‍ಗಳ ಫುಟ್‍ಬೋರ್ಡ್‍ನಲ್ಲಿ ನೇತಾಡಿಕೊಂಡು ಪ್ರಯಾಣಿಸುವುದು ದಿನಂಪ್ರತಿ ವಾಡಿಕೆಯಾಗಿದೆ. ಇಲ್ಲಿ ವಿದ್ಯಾರ್ಥಿ-ವಿದ್ಯಾರ್ಥಿನಿಯರೆಂಬ ಭೇದವಿಲ್ಲದೆ ನೂಕು ನುಗ್ಗಲಿನಲ್ಲಿ ಒಬ್ಬರಿಗೊಬ್ಬರು ಅಂಟಿಕೊಂಡು ಪ್ರಯಾಣಿಸುವುದು ಕೆಲವರಿಗೆ ಇರಿಸು-ಮುರಿಸಾಗಿದೆ. ಆದರೂ ಅನ್ಯ ಮಾರ್ಗವಿಲ್ಲದೆ ಸಹಿಸಿಕೊಳ್ಳಲೆ ಬೇಕಾದ ಪರಿಸ್ಥಿತಿ ಉದ್ಭವವಾಗಿದೆ. ಇಂತಹ ಆಧುನಿಕ ಯುಗದಲ್ಲೂ ಈ ಜ್ವಲಂತ ಸಮಸ್ಯೆ ಬಗ್ಗೆ ತಾಲ್ಲೂಕು ಹಾಗೂ ಜಿಲ್ಲಾ ಆಡಳಿತ ಗಮನ ಹರಿಸದಿರುವುದು ಪೋಷಕರ ಹಾಗೂ ವಿದ್ಯಾರ್ಥಿ, ವಿದ್ಯಾರ್ಥಿನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಕೊರಟಗೆರೆ ತಾಲ್ಲೂಕು ಕೇಂದ್ರದಲ್ಲಿ ಪ್ರಮುಖ ಖಾಸಗಿ ಹಾಗೂ ಸರ್ಕಾರಿ ಶಾಲಾ ಕಾಲೇಜುಗಳ ಜೊತೆಗೆ ಉನ್ನತ ಶಿಕ್ಷಣದ ಪದÀವಿ ಕಾಲೇಜಿನವರೆಗೂ ಬೆಳಗ್ಗೆ 8 ರಿಂದ 9 ಗಂಟೆವರೆಗೂ ವಿವಿಧÀ ಶಾಲಾ-ಕಾಲೇಜುಗಳಿಗೆ ಅನುಗುಣವಾಗಿ ಅವಶ್ಯಕತೆಗೆ ತಕ್ಕಂತೆ ತರಗತಿಗಳಿಗೆ ಸಮಯ ನಿಗದಿ ಮಾಡಲಾಗಿದೆ. ಸಾಮಾನ್ಯವಾಗಿ 9 ಗಂಟೆಗೆ ಹೆಚ್ಚು ತರಗತಿಗಳು ಪ್ರಾರಂಭವಾಗುತ್ತವೆ.

ಬೆಳ್ಳಗೆ 7 ಗಂಟೆಗೆ ಆಯಾ ಬಸ್ ನಿಲ್ದಾಣಗಳಿಗೆ ಬಂದು 1-2 ಗಂಟೆ ಕಾಯುವುದಲ್ಲದೆ, ಬಹಳಷ್ಟು ವಿದ್ಯಾರ್ಥಿಗಳು ಬಸ್‍ನಲ್ಲಿ ಸ್ಥಳಾವಕಾಶÀವಿಲ್ಲದೆ, ಕೆಲವರು ದುಪ್ಪಟ್ಟು ಹಣ ನೀಡಿ, ಆಟೋದಲ್ಲಿ ಪ್ರಯಾಣಿಸುತ್ತಾರೆ. ಕೆಲವು ಬಡ ವಿದ್ಯಾರ್ಥಿಗಳಂತೂ ಬಸ್ ಸೌಕರ್ಯವಿಲ್ಲದ ಏಕೈಕ ಕಾರಣಕ್ಕಾಗಿಯೆ ಶಿಕ್ಷಣ ಮೊಟಕು ಗೊಳಿಸಿ ಶಿಕ್ಷಣದಿಂದ ವಂಚಿತರಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ವಿದ್ಯಾರ್ಥಿಗಳಿಗೆ ಶಾಲಾ-ಕಾಲೇಜ್ ಮುಗಿದ ನಂತರವೂಇದೇ ಸಮಸ್ಯೆಯಾಗಿದೆ. ಮಧ್ಯಾಹ್ನ 1 ಗಂಟೆಗೆ ತರಗತಿಗಳು ಮುಗಿದರೆ ಸರ್ಕಾರಿ ಬಸ್ 1.10 ಕ್ಕೆ ತುಮಕೂರಿನಿಂದಲೆ ಭರ್ತಿಯಾಗಿ ಬಂದಿರುತ್ತದೆ. ಆದ್ದರಿಂದ ಬಸ್ ನಿಲ್ದಾಣದಲ್ಲಿ ನಿಲ್ಲಿಸದೆ, ಬಹು ದೂರ ಮುಂದೆ ಹೋಗಿ ಇಳಿಯುವ ಪ್ರಯಾಣಿಕರನ್ನು ಮಾತ್ರ ಇಳಿಸಿ ಹೊರಟು ಹೋಗುತ್ತದೆ. ನಂತರ 2-45 ಗಂಟೆಗೆ ಮತ್ತೊಂದು ಬಸ್ ಬರುತ್ತದೆ.

ಇದೂ ವಿಪರೀತ ಭರ್ತಿಯಾಗಿದ್ದರೆ ಮತ್ತೆ 3-45 ಕ್ಕೆ ಒಂದು ಬಸ್ ಬರುತ್ತದೆ. ಅಲ್ಲಿಗೆ ತರಗತಿ ಬಿಟ್ಟ ನಂತರ 2-3 ಗಂಟೆ ಕಾದು ಸಂಜೆ 4-5 ಗಂಟೆಗೆ ಮನೆಗೆ ಹೋದರೆ ವಿದ್ಯಾರ್ಥಿಗಳ ಗತಿ ಏನು? ಬೆಳಗ್ಗೆ ಬರುವಾಗ ಉಪವಾಸ ಬಂದಿದ್ದರೆ ಅವರು ಊಟ ಮಡುವುದು ಯಾವಾಗ? ಕೇವಲ ಬಸ್‍ಗಾಗಿ ಬಸ್ ಸ್ಟ್ಯಾಂಡ್ ಹಾಗೂ ಇತರೆ ಪ್ರದೇಶಗಳಲ್ಲಿ ಪ್ರತಿ ದಿನ 2-3 ಗಂಟೆ ಕಾಲ ಹರಣವಾದರೆ, ಅವರ ವಿದ್ಯಾಭ್ಯಾಸದ ಗುಣಮಟ್ಟ ಸುಧಾರಿಸಲು ಸಾಧ್ಯವೇ? ಎಷ್ಟೋ ವಿದ್ಯಾರ್ಥಿಗಳು 2-3 ಗಂಟೆ ಕಾಯುವ ಬದಲು ಮನೋರಂಜನೆಗಾಗಿ ಸಿನಿಮಾಗಳಿಗೆ ಥಿಯೇಟರ್‍ಗೆ, ಪಾರ್ಕ್‍ಗಳಿಗೆ ಅಲೆದಾಟ ಮಾಡುತ್ತಾರೆ. ಸರ್ಕಾರದ ನಿರ್ಲಕ್ಷ್ಯದಿಂದ ಎಷ್ಟೊ ಉತ್ತಮ ವಿದ್ಯಾರ್ಥಿಗಳು ಸಹವಾಸದಿಂದ ಸನ್ಯಾಸಿ ಕೆಟ್ಟ ಎಂಬಂತೆ ವಿದ್ಯಾರ್ಥಿಗಳು ಕೆಡುವ ಸಾಧ್ಯತೆಗಳೂ ಹೆಚ್ಚಾಗಿದೆ.


ಕೊರೋನಾದಿಂದ ಇಡೀ ಶಿಕ್ಷಣ ವ್ಯವಸ್ಥೆ ಅಲ್ಲೋಲ ಕಲ್ಲೋಲವಾಗಿ ಒಂದೆರಡು ವರ್ಷ ಶೈಕ್ಷಣಿಕ ಚಟುವಟಿಕೆಗಳು ಸ್ಥಗಿತÀಗೊಂಡಿದ್ದವು. ಮತ್ತೆ ಪ್ರಾರಂಭಕ್ಕೆ ಹಲವು ಅಡೆ ತಡೆಗಳ ನಡುವೆ ಪುನರಾರಂಭದ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಸೌಕರ್ಯ ಕಲ್ಪಿಸುವಲ್ಲಿ ಸರ್ಕಾರ ಎಡವಿದೆ. ವಿದ್ಯಾರ್ಥಿಗಳು ಮನೆಯಿಂದ-ಕಾಲೇಜಿಗೆ, ಕಾಲೇಜಿನಿಂದ-ಮನೆಗೆ ವೇಳೆಗೆ ಸರಿಯಾಗಿ ತಲುಪಲು ಸಾಧ್ಯವಾಗದ ಸನ್ನಿವೇಶ ತಲೆದೋರಿದೆ. ತಕ್ಷಣ ಸಂಬಂಧಪಟ್ಟ ಇಲಾಖೆಯಲ್ಲದೆ, ಜಿಲ್ಲಾಡಳಿತ, ತಾಲ್ಲೂಕು ಆಡಳಿತ ಸೇರಿದಂತೆ ಸಾರಿಗೆ ಇಲಾಖೆಯ ಉನ್ನತ ಅಧಿಕಾರಿಗಳು ಗಮನಹರಿಸಿ ಸಮಸ್ಯೆ ಪರಿಹರಿಸಬೇಕೆಂದು ಪೋಷಕರಾದಿಯಾಗಿ, ವಿದ್ಯಾರ್ಥಿ-ವಿದ್ಯಾರ್ಥಿನಿ ಯರೂ ಆಗ್ರಹಿಸಿದ್ದಾರೆ.

ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಬಸ್‍ಪಾಸ್ ವ್ಯವಸ್ಥೆಯು ವಿದ್ಯಾರ್ಥಿಗಳಿಗೆ ನಿಷ್ಪ್ರಯೋಜನವಾಗಿದೆ. ಬಸ್‍ಪಾಸ್ ನೀಡಿದ್ದರೂ ಖಾಸಗಿ ಬಸ್ ಹಾಗೂ ಆಟೋದಲ್ಲಿಯೇ ಹೆಚ್ಚು ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದಾರೆ. ವಿದ್ಯಾರ್ಥಿಗಳ ಬಸ್‍ಪಾಸ್ ಉಪಯೋಗವಿಲ್ಲವಾಗಿದ್ದು, ಯಾವ ಪುರುಷಾರ್ಥಕ್ಕೆ ಸರ್ಕಾರ ಬಸ್ ಪಾಸ್ ವಿತರಿಸಿದೆ ಎಂದು ಕೆಲವರು ಸರ್ಕಾರದ ವಿರುದ್ದ ಹಿಡಿ ಶಾಪ ಹಾಕುತ್ತಿದ್ದಾರೆ.
ಈ ಮಾರ್ಗವಾಗಿ ಸರ್ಕಾರಿ ಬಸ್ ಸಂಚಾರ ಕಡಿಮೆಯಿದ್ದು, ವಿದ್ಯಾರ್ಥಿಗಳು ಶಾಲಾ-ಕಾಲೇಜಿಗೆ ಹೋಗಿ-ಬರಲು ತೊಂದರೆಯಾಗಿದೆ. ಬಸ್‍ಗಾಗಿ 2-3 ಗಂಟೆ ವಿದ್ಯಾರ್ಥಿಗಳು ಬಸ್‍ಸ್ಟ್ಯಾಂಡ್‍ನಲ್ಲಿ ಕಾದು, ಸೊರಗಿ, ಮಧ್ಯಾಹ್ನದ ಊಟವೂ ಇಲ್ಲದೆ ಅಸಹಾಯಕರಾಗಿರುವ ಇವರ ನೋವು ಯಾರ ಕಣ್ಣಿಗೂ ಬೀಳದಿರುವುದು ಶೋಚನೀಯ ವಿಚಾರವಾಗಿದೆ.

ಸಾರಿಗೆ ಇಲಾಖಾ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಶೀಘ್ರ ತ್ವರಿತವಾಗಿ ಸಮಸ್ಯೆ ತಿಳಿಗೊಳಿಸ ಬೇಕು. ರಾಜ್ಯ ಸರ್ಕಾರ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದರೂ, ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಮಾಯಕ ವಿದ್ಯಾರ್ಥಿ-ವಿದ್ಯಾರ್ಥಿನಿಯರು ತೊಂದರೆಗೆ ಒಳಗಾಗಿದ್ದಾರೆ. ಶಿಕ್ಷಣಕ್ಕೆ ಒತ್ತು ಕೊಡದೆ ಈ ರೀತಿ ನಿರ್ಲಕ್ಷಿಸಿದರೆ ಮುಂದೆ ಹೋರಾಟ ಮಾಡಬೇಕಾಗುತ್ತದೆ.

ವಿದ್ಯಾರ್ಥಿಗಳು ತಿಂಡಿ ತಿನ್ನದೆ, ಶಾಲಾ-ಕಾಲೇಜಿಗೆ ಹೋಗಲು ಬಂದು ಕಾದರೂ ಬಸ್ ಸೌಕರ್ಯವಿಲ್ಲ. ಬೆಳಗ್ಗೆ 7 ಗಂಟೆಗೆ ಬಿಟ್ಟರೆ 9 ಗಂಟೆವರೆಗೂ ಬಸ್‍ಗಳಿಲ್ಲ. ಶಾಲೆಯಲ್ಲಿ ಲೇಟಾಗಿ ಹೋದರೆ ಮೇಷ್ಟ್ರು ಬೈತಾರೆ. ಇಲ್ಲಿ ಬಸ್ ಇಲ್ಲ. ಇನ್ನೂ ಕಾಡಿ ಬೇಡಿ 50-60 ರೂ. ಇಸ್ಕೊಂಡು ಬಂದಿರುತ್ತಾರೆ. ಅವರು ಆಟೋಗೆ ಹೋಗ್ಬೇಬೇಕಾ? ಊಟ-ತಿಂಡಿ ಇಲ್ಲದೆ ಹೋಗ್ತಾರೆ. ಏನ್ ಆಡಳಿತಾನೊ? ಏನ್ ಕತೆನೊ? ಹೇಳೋರಿಲ್ಲ-ಕೇಳೋರಿಲ್ಲ. ವಿದ್ಯಾರ್ಥಿಗಳು ಆಫ್ ಲೈನ್ ಶಾಲೆ ಪ್ರಾರಂಭಕ್ಕಿಂತ ಆನ್ ಲೈನ್ ಚೆನ್ನಾಗಿತ್ತು ಎನ್ನುತಿದ್ದಾರೆ. ಈ ವ್ಯವಸ್ಥೆನೆ ಸರಿ ಇಲ್ಲ. …

ಯಾವ ಸರ್ಕಾರವೂ ನಮ್ಮ ತೊಂದರೆ ಬಗ್ಗೆ ಗಮನ ಹರಿಸುತ್ತಿಲ್ಲ. ನಮ್ಮ ಡಿಗ್ರಿ ಕಾಲೇಜು ಬೆಳಗ್ಗೆ 9 ಗಂಟೆಗೆ ಪ್ರಾರಂಭವಾಗುತ್ತದೆ. ನಮಗೆ 8-30 ರ ಬಸ್ ಹತ್ತೋದಕ್ಕೆ ಆಗದಂತೆ ಭರ್ತಿ ಬರುತ್ತೆ. ಅದನ್ನು ಬಿಟ್ಟರೆ 9-30 ಕ್ಕೆ ತರಗತಿ ಮೊದಲ ಪೀರಿಯಡ್ ಮುಗಿದು ಹೋಗಿರುತ್ತೆ. ಆ ಮೇಲೆ ಹೇಗೆ ಕಾಲೇಜ್‍ಗೆ ಹೋಗೋದು? ಆದರೂ ಹೋಗಲೆ ಬೇಕು, ಹೋಗುತ್ತೇವೆ. ಆದರೆ ಅಲ್ಲಿ ಪ್ರಾಂಶುಪಾಲರಿಂದ ಹಿಡಿದು, ಉಪನ್ಯಾಸಕರವರೆಗೂ ಬೈಸಿಕೊಳ್ಳಬೇಕು. ನಮ್ಗೆ ಬಸ್ ಪಾಸ್ ಯಾಕೆ ಕೊಟ್ಟಿದ್ದಾರೊ? ಬಸ್ಸೇ ಇಲ್ಲ. ನಮ್ಮ ಸಮಸ್ಯೆ ಆಲಿಸೋರ್ಯಾರು? ದೇವರೇ ಬಲ್ಲ ! ಸಂಬಂಧ ಪಟ್ಟವರು ಗಮನ ಹರಿಸಿ, ಶೀಘ್ರ ಬೆಳಗ್ಗೆ 4 ಬಸ್‍ಗಳನ್ನು, ಮಧ್ಯಾಹ್ನ 4 ಬಸ್‍ಗಳನ್ನು ಶಾಲಾ ಕಾಲೇಜ್ ಸಮಯಕ್ಕೆ ಓಡಿಸಲಿ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap