ಕೋಟಾ:
ರಾಜಸ್ಥಾನದ ಕೋಟಾದಲ್ಲಿ ಜೆಇಇ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳ ಆತ್ಮಹತ್ಯೆ ಮುಂದುವರೆದಿದೆ .ಜೆಇಇ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ 18 ವರ್ಷದ ವಿದ್ಯಾರ್ಥಿನಿಯೊಬ್ಬರು ಕೋಟಾದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತನ್ನ ಪೋಷಕರಿಗೆ ಈ ವಿದ್ಯಾರ್ಥಿನಿ ಪತ್ರ ಬರೆದಿದ್ದು, ತಾನೊಬ್ಬ ಪರಾಜಿತೆ, ಜೆಇಇಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಸಾಧ್ಯವಾಗದೇ ಇರುವುದಕ್ಕೆ ಕ್ಷಮಿಸಿ ಎಂದು ಕೇಳಿಕೊಂಡಿದ್ದಾರೆ.
ಅಪ್ಪ, ಅಪ್ಪ ನಾನು ಜೆಇಇ ಪೂರ್ಣಗೊಳಿಸುವುದಕ್ಕೆ ಸಾಧ್ಯವಾಗುತ್ತಿಲ್ಲ. ಆದ್ದರಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಪೋಷಕರಿಗೆ ಬರೆದ ಪತ್ರದಲ್ಲಿ ಆಕೆ ತಿಳಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಮಹೈತಿ ನೀಡಿದ್ದಾರೆ.
ಇನ್ನೆರಡು ದಿನಗಳಲ್ಲಿ ಆಕೆ ಜೆಇಇ ಪರೀಕ್ಷೆ ಬರೆಯಬೇಕಿತ್ತು. “ನಾನೊಬ್ಬ ಪರಾಜಿತೆ, ನಾನು ಅತ್ಯಂತ ಕಳಪೆ ಮಗಳು. ಅಪ್ಪ- ಅಮ್ಮ ನನಗೆ ಉಳಿದಿರುವುದು ಇದೊಂದೇ ಕೊನೆಯ ಆಯ್ಕೆ ಎಂದು ಆತ್ಮಹತ್ಯೆಗೂ ಮುನ್ನ ಬರೆದಿರುವ ಪತ್ರದಲ್ಲಿ ವಿದ್ಯಾರ್ಥಿನಿ ಹೇಳಿದ್ದಾರೆ.
ಒಂದು ವಾರದಲ್ಲಿ ಕೋಟಾದಲ್ಲಿ ವರದಿಯಾಗುತ್ತಿರುವ 2 ನೇ ವಿದ್ಯಾರ್ಥಿಯ ಆತ್ಮಹತ್ಯೆ ಪ್ರಕರಣ ಇದಾಗಿದೆ . ಪ್ರಧಾನಿ ನರೇಂದ್ರ ಮೋದಿ ಶಾಲಾ ಬೋರ್ಡ್ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳೊಂದಿಗೆ ಪರೀಕ್ಷಾ ಪೇ ಚರ್ಚಾ ವಾರ್ಷಿಕ ಸಂವಾದ ನಡೆಸಿದ ದಿನದಂದೇ ಈ ಆತ್ಮಹತ್ಯೆ ಪ್ರಕರಣ ವರದಿಯಾಗಿದೆ. ಪ್ರಧಾನಿ ಮೋದಿ ಪರೀಕ್ಷೆಗಳಲ್ಲಿ ಸ್ಪರ್ಧೆಗೆ ಅವಕಾಶ ನೀಡಬೇಡಿ ಎಂದು ವಿದ್ಯಾರ್ಥಿಗಳು ಮತ್ತು ಅವರ ಪೋಷಕರಿಗೆ ಕಿವಿ ಮಾತು ಹೇಳಿದ್ದಾರೆ.
ನಗರದ ಬೋರೆಖೇಡ ಪೊಲೀಸ್ ಠಾಣಾ ವ್ಯಾಪ್ತಿಯ ಶಿವ ವಿಹಾರ್ ಕಾಲೋನಿಯಲ್ಲಿರುವ ತನ್ನ ಕುಟುಂಬದ ಮನೆಯಲ್ಲಿ ವಿದ್ಯಾರ್ಥಿನಿ ವಾಸವಾಗಿದ್ದು, ಜನವರಿ 30 ಅಥವಾ 31 ರಂದು ಜೆಇಇ ಪರೀಕ್ಷೆ ಬರೆಯಬೇಕಿತ್ತು ಎಂದು ಸರ್ಕಲ್ ಆಫೀಸರ್ ಡಿಎಸ್‌ಪಿ ಧರ್ಮವೀರ್ ಸಿಂಗ್ ತಿಳಿಸಿದ್ದಾರೆ. ಆತ್ಮಹತ್ಯೆ ಪತ್ರದಲ್ಲಿ ಆಕೆ ತೀವ್ರ ಒತ್ತಡದಲ್ಲಿದ್ದಳು ಮತ್ತು ಪರೀಕ್ಷೆಯನ್ನು ಎದುರಿಸಲು ಸಾಧ್ಯವಾಗುತ್ತಿಲ್ಲ ಎಂಬುದು ತಿಳಿದುಬಂದಿದೆ ಎಂದು ಅಧಿಕಾರಿ ಹೇಳಿದ್ದಾರೆ.
ವಿದ್ಯಾರ್ಥಿನಿ ಮೂವರು ಸಹೋದರಿಯರಲ್ಲಿ ಹಿರಿಯಳಾಗಿದ್ದಳು. ಆಕೆಯ ತಂದೆ ಕೋಟಾದ ಖಾಸಗಿ ಬ್ಯಾಂಕ್‌ನಲ್ಲಿ ಭದ್ರತಾ ಸಿಬ್ಬಂದಿಯಾಗಿದ್ದಾರೆ. ಈ ಕುಟುಂಬ ಜಲಾವರ್ ಜಿಲ್ಲೆಯ ಅಕವ್ಡಾಖುರ್ದ್ ಗ್ರಾಮದವರಾಗಿದ್ದು, ಕಳೆದ ಮೂರು ವರ್ಷಗಳಿಂದ ನಗರದಲ್ಲಿ ನೆಲೆಸಿದೆ. ಜೆಇಇಗೆ ತಯಾರಿ ನಡೆಸುತ್ತಿದ್ದ ವಿದ್ಯಾರ್ಥಿಗಳ ಪೈಕಿ 26 ಮಂದಿ ಕಳೆದ ವರ್ಷ ಒತ್ತಡದ ಕಾರಣದಿಂದ ಆತ್ಮಹತ್ಯೆಗೆ ಶರಣಾಗಿದ್ದರು. ಜ.19 ರಂದು 19 ವರ್ಷದ ವಿದ್ಯಾರ್ಥಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು.