ಶಿವಮೊಗ್ಗ
ಶಿವಮೊಗ್ಗದಲ್ಲಿ ನವವಿವಾಹಿತೆಯೊಬ್ಬಳು ಪತಿಯ ಹಾಗೂ ಗಂಡನ ಮನೆಯವರ ಕಿರುಕುಳದಿಂದ ಬೇಸತ್ತು ಮದುವೆ ಆದ 6 ತಿಂಗಳಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಹತಭಾಗ್ಯೆ ಡೆತ್‌ನೋಟ್ ಬರೆದಿಟ್ಟಿದ್ದು, ಅದರಲ್ಲಿ ಗಂಡನ ಮನೆಯವರ ಕಿರುಕುಳವನ್ನು ವಿವರಿಸಿದ್ದಾಳೆ. ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಹಂಚಿನ ಸಿದ್ದಾಪುರ ಗ್ರಾಮದ ಬಳಿ ನಡೆದಿದೆ.
ಆತ್ಮಹತ್ಯೆಗೆ ಶರಣಾದ ನವವಿವಾಹಿತೆಯನ್ನು ಲತಾ (25) ಎಂದು ಗುರುತಿಸಲಾಗಿದೆ. ಭದ್ರಾವತಿಯ ಹಂಚಿನ ಸಿದ್ದಾಪುರದ ನಿವಾಸಿಯಾಗಿರುವ ಲತಾ ಬಿಎಸ್‌ಸಿ ಮತ್ತು ಬಿಎಡ್ ಪದವೀಧರೆ ಆಗಿದ್ದರು. 2025ರ ಏಪ್ರಿಲ್ 14ರಂದು ಶಿಕಾರಿಪುರದ ಗುರುರಾಜ್ ಜೊತೆಗೆ ಲತಾ ವಿವಾಹವಾಗಿತ್ತು. ಆರು ತಿಂಗಳ ಹಿಂದೆಯಷ್ಟೇ ಲತಾ ಗುರುರಾಜ್ ನನ್ನು ಮದುವೆಯಾಗಿದ್ದರು. ಪತಿ ಗುರುರಾಜ್ ಬಿಆರ್‌ಪಿಯ ಕೆಪಿಸಿಎಲ್‌ನಲ್ಲಿ ಎಇಇ ಆಗಿದ್ದಾರೆ. ವಾಟ್ಸಪ್‌ನಲ್ಲಿ ಡೆತ್ ನೋಟ್ ಬರೆದಿಟ್ಟಿರುವ ಲತಾ, ಭದ್ರಾ ನಾಲೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ವಾಟ್ಸ್ಯಾಪ್‌ನಲ್ಲಿ ಡೆತ್ ನೋಟ್ ಬರೆದಿರುವ ಲತಾ ಪತಿ ಹಾಗೂ ಮನೆಯವರ ಕಿರುಕುಳದ ಬಗ್ಗೆ ದೂರು ನೀಡಿದ್ದಾರೆ. ನವೆಂಬರ್ 23ರಂದು ಲತಾ ನಾಲೆಗೆ ಹಾರಿದ್ದಾರೆ. ಸದ್ಯ ಲತಾ ಶವಕ್ಕಾಗಿ ಇದೀಗ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿಗಳು ಶೋಧ ಕಾರ್ಯ ನಡೆಸುತ್ತಿದ್ದಾರೆ. ಘಟನೆ ಕುರಿತಂತೆ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯ ಬಳಿಕ ಲತಾ ಅವರ ಪತಿ ಹಾಗೂ ಆತನ ಕುಟುಂಬಸ್ಥರು ನಾಪತ್ತೆಯಾಗಿದ್ದಾರೆ.








