ಪೂಂಚ್ :
ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿ ಅಪ್ರಚೋದಿತ ಗುಂಡಿನ ದಾಳಿ ಹಾಗೂ ಶೆಲ್ ದಾಳಿ ನಡೆಸಿರುವ ಪಾಕಿಸ್ತಾನ ಮತ್ತೊಮ್ಮೆ ಕದನ ವಿರಾಮ ಉಲ್ಲಂಘಿಸಿದ್ದು, ಭಾರತೀಯ ಯೋಧರು ಪ್ರತಿದಾಳಿ ನಡೆಸಿದ ಪರಿಣಾಮ ಪಾಕ್ ತನ್ನ ದಾಳಿ ನಿಲ್ಲಿಸಿತು ಎನ್ನಲಾಗಿದೆ.
ಇಂದು(ಗುರುವಾರ) ಬೆಳಗ್ಗೆ ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಕೃಷ್ಣ ಘಾಟಿ ವಲಯದಲ್ಲಿ ಪಾಕ್ ಸತತ ಒಂದು ಗಂಟೆಗಳ ಗುಂಡಿನ ಹಾಗೂ ಭಾರಿ ಪ್ರಮಾಣದ ಶೆಲ್ಗಳ ದಾಳಿ ನಡೆಸಿತು. ಬೆಳ್ಳಗ್ಗೆ 6 ಗಂಟೆಗೆ ಆರಂಭವಾದ ದಾಳಿ 7 ಗಂಟೆವರೆಗೆ ಮುಂದುವರೆಯಿತು ಎಂದು ರಕ್ಷಣಾ ವಕ್ತಾರ ಲೆಫ್ಟಿನೆಂಟ್ ಕರ್ನಲ್ ದೇವೇಂದರ್ ಆನಂದ್ ಹೇಳಿದ್ದಾರೆ.
ರಾಜೌರಿ ಜಿಲ್ಲೆಯ ಕೃಷ್ಣ ಘಾಟಿ ಹಾಗೂ ಮೆಂಢರ್ ಪ್ರದೇಶಗಳ ಬಳಿ ಪಾಕಿಸ್ತಾನ ಪಡೆಗಳು ಬುಧವಾರವೂ ಗುಂಡಿನ ದಾಳಿ ನಡೆಸಿದ್ದವು. ಬಾರಾಮುಲ್ಲಾ ಜಿಲ್ಲೆಯ ಉರಿ ಪ್ರದೇಶದಲ್ಲಿರುವ ಕಮಲಾಕೋಟ್ ಎಂಬಲ್ಲಿಯೂ ಮತ್ತೊಂದು ದಾಳಿ ಪ್ರಕರಣ ವರದಿಯಾಗಿತ್ತು. ಈ ಎಲ್ಲ ದಾಳಿಗಳನ್ನು ಭಾರತ ಪಡೆಗಳು ಸಮರ್ಥವಾಗಿ ಹಿಮ್ಮೆಟ್ಟಿಸಿದ್ದವು.