ಕುತೂಹಲ ಸೃಷ್ಠಿಸಿದ ಸುಮಲತಾ ಬಿಜೆಪಿ ನಾಯಕರ ಭೇಟಿ….!

ಮಂಡ್ಯ

     ಮಂಡ್ಯದ ಸಂಸದೆ ಸುಮಲತಾ ಗುರುವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಮತ್ತು ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ. ಎಲ್‌. ಸಂತೋಷ್‌ ಭೇಟಿಯಾಗಿದರು.

    ಈ ಕುರಿತು ಫೇಸ್‌ಬುಕ್ ಪೋಸ್ಟ್ ಹಾಕಿರುವ ಅವರು, ಅನೌಪಚಾರಿಕವಾಗಿ ಭೇಟಿ ಮಾಡಿ ಮಂಡ್ಯ ಕ್ಷೇತ್ರ ಹಾಗೂ ಲೋಕಸಭಾ ಚುನಾವಣೆ ಕುರಿತಂತೆ ಚರ್ಚಿಸಲಾಯಿತು. ತಮ್ಮ ಅಮೂಲ್ಯ ಸಮಯವನ್ನು ನೀಡಿ, ನನ್ನ ಮಾತುಗಳನ್ನು ಆಲಿಸಿದ ಶ್ರೀ ನಡ್ಡಾ ಅವರಿಗೂ ಶ್ರೀ ಸಂತೋಷ್ ಅವರಿಗೂ ಧನ್ಯವಾದಗಳು. ತಮ್ಮ ಸಹಕಾರದ ಮಾತುಗಳಿಗೆ ಮತ್ತೊಮ್ಮೆ ಕೃತಜ್ಞತೆ ಸಲ್ಲಿಸುವೆ ಎಂದು ಹೇಳಿದ್ದಾರೆ.

   2023ರ ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶದ ಬಳಿಕ ಎಚ್. ಡಿ. ದೇವೇಗೌಡ ನೇತೃತ್ವದ ಜೆಡಿಎಸ್ ಪಕ್ಷ ಎನ್‌ಡಿಎ ಮೈತ್ರಿಕೂಟಕ್ಕೆ ಬೆಂಬಲ ಘೋಷಣೆ ಮಾಡಿದೆ. ಲೋಕಸಭೆ ಚುನಾವಣೆಯಲ್ಲಿ ಎರಡೂ ಪಕ್ಷಗಳು ಸೀಟು ಹಂಚಿಕೆ ಮಾಡಿಕೊಳ್ಳಲಿವೆ.

   2019ರ ಲೋಕಸಭೆ ಚುನಾವಣೆಯಲ್ಲಿ ಮಂಡ್ಯದಲ್ಲಿ ಸುಮಲತಾ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಬಿಜೆಪಿ ಪಕ್ಷ ಅಭ್ಯರ್ಥಿಯನ್ನು ಕಣಕ್ಕಿಳಿಸದೇ ಸುಮಲತಾ ಬೆಂಬಲಿಸಿತ್ತು. ಅವರು ಚುನಾವಣೆಯಲ್ಲಿ 703,660 ಮತಗಳನ್ನು ಪಡೆದು ಕಾಂಗ್ರೆಸ್-ಜೆಡಿಎಸ್ ಒಮ್ಮತದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ (577,784 ಮತ) ಸೋಲಿಸಿದ್ದರು.

    ಆಗ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಧಿಕಾರದಲ್ಲಿತ್ತು. ಎಚ್. ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರು. ಆದರೂ ಪುತ್ರ ನಿಖಿಲ್ ಕುಮಾರಸ್ವಾಮಿ ಗೆಲ್ಲಿಸಲು ಆಗಿರಲಿಲ್ಲ. ಆದರೆ ಈಗ ಚಿತ್ರಣವೇ ಬದಲಾಗಿದೆ. ಸುಮಲತಾ ಅವರು ಬಿಜೆಪಿಗೆ ಬೆಂಬಲ ಘೋಷಣೆ ಮಾಡಿದ್ದಾರೆ.

   ಮತ್ತೊಂದು ಕಡೆ ಜೆಡಿಎಸ್ ಎನ್‌ಡಿಎ ಮೈತ್ರಿಕೂಟ ಸೇರಿದೆ. ಬಿಜೆಪಿ ಮತ್ತು ಜೆಡಿಎಸ್ ಸೀಟು ಹಂಚಿಕೆ ಮಾಡಿಕೊಂಡು ಚುನಾವಣೆ ಎದುರಿಸಲಿವೆ. ಮಂಡ್ಯ ಸೀಟು ಯಾರಿಗೆ? ಎಂಬುದು ಇನ್ನೂ ಅಂತಿಮವಾಗಿಲ್ಲ. ಆದರೆ ಜೆಡಿಎಸ್ ಮಂಡ್ಯ ಬಿಟ್ಟುಕೊಡಲು ಬೇಡಿಕೆ ಇಟ್ಟಿದೆ ಎಂಬ ಸುದ್ದಿಗಳಿವೆ.

   ಬಿಜೆಪಿ ಮಂಡ್ಯವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟರೆ ಸುಮಲತಾ ಯಾವ ಕ್ಷೇತ್ರದಿಂದ ಕಣಕ್ಕಿಳಿಯುತ್ತಾರೆ? ಎಂಬುದು ಪ್ರಶ್ನೆಯಾಗಿದೆ. ಮಂಡ್ಯದಲ್ಲಿ ಬಿಜೆಪಿ ಅಭ್ಯರ್ಥಿಯೇ ಕಣಕ್ಕಿಳಿಯಬೇಕು ಎಂದು ಕಳೆದ ವಾರ ನಡೆದ ಜಿಲ್ಲಾ ಬಿಜೆಪಿ ಕಾರ್ಯಕಾರಣಿ ಸಭೆಯಲ್ಲಿ ಒತ್ತಾಯ ಕೇಳಿ ಬಂದಿತ್ತು. 

   ಮಂಡ್ಯ ಮತ್ತು ಹಾಸನ ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟು ಕೊಡಲಾಗುತ್ತದೆ. ಮಂಡ್ಯದಲ್ಲಿ ಮಾಜಿ ಮುಖ್ಯಮಂತ್ರಿ, ಚನ್ನಪಟ್ಟಣ ಶಾಸಕ ಎಚ್. ಡಿ. ಕುಮಾರಸ್ವಾಮಿ ಕಣಕ್ಕಿಳಿಯುತ್ತಾರೆ ಎಂಬ ಸುದ್ದಿಗಳು ಹಬ್ಬಿವೆ. ಆದರೆ ಕುಮಾರಸ್ವಾಮಿ ಲೋಕಸಭೆ ಚುನಾವಣೆ ಕಣಕ್ಕಿಳಿಯುವ ಕುರಿತು ಇನ್ನೂ ಯಾವುದೇ ತೀರ್ಮಾನವಾಗಿಲ್ಲ.

   ಫೆಬ್ರವರಿ 10ರ ಬಳಿಕ ಬಿಜೆಪಿ, ಜೆಡಿಎಸ್ ಸೀಟು ಹಂಚಿಕೆ ಕುರಿತು ನವದೆಹಲಿಯಲ್ಲಿ ಮಹತ್ವದ ಸಭೆ ನಡೆಯಲಿದೆ ಎಂದು ನಿರೀಕ್ಷೆ ಮಾಡಲಾಗಿದೆ. ಕರ್ನಾಟಕದ ಬಿಜೆಪಿ ಘಟಕವೂ ಸಹ ಯಾವ ಯಾವ ಸೀಟುಗಳನ್ನು ಜೆಡಿಎಸ್‌ಗೆ ನೀಡಲಾಗುತ್ತದೆ ಎಂಬ ಕುರಿತು ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ.

    ಮೈತ್ರಿಯಂತೆ ಜೆಡಿಎಸ್‌ಗೆ ಮಂಡ್ಯವನ್ನು ಕೊಟ್ಟು, ಬಿಜೆಪಿ ಹೈಕಮಾಂಡ್ ಮನವಿಯಂತೆ ಎಚ್. ಡಿ. ಕುಮಾರಸ್ವಾಮಿ ಕಣಕ್ಕಿಳಿದರೆ ಸುಮಲತಾ ಅವರ ಮುಂದಿನ ನಡೆ ಏನು? ಎಂಬುದು ಎಲ್ಲರ ಪ್ರಶ್ನೆಯಾಗಿದೆ. ಅವರು ಬೆಂಗಳೂರು ಗ್ರಾಮಾಂತರದಿಂದ ಕಣಕ್ಕಿಳಿಯುತ್ತಾರೆ ಎಂಬ ಸುದ್ದಿ ಇದ್ದು, ಇದನ್ನು ಸಹ ಯಾರೂ ಇನ್ನೂ ಖಚಿತಪಡಿಸಿಲ್ಲ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap