ನವದೆಹಲಿ:
ವಿಶೇಷ ಚೇತನರ ಕುರಿತಾದ ಅಸಂವೇದನಶೀಲ ಜೋಕ್ ಮಾಡಿದ ಕಾಮಿಡಿಯನ್ಸ್ ಸಮಯ್ ರೈನಾ, ವಿಪಿನ್ ಗೋಯಲ್, ಬಲರಾಜ್ ಪರಮ್ಜೀತ್ ಸಿಂಗ್ ಘಾಯ್, ಸೋನಾಲಿ ಠಕ್ಕರ್ ಮತ್ತು ನಿಶಾಂತ್ ಜಗದೀಶ್ ತನ್ವಾರ್ ಅವರನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿತು. ಈ ಕಾಮಿಡಿಯನ್ಸ್ ಯಾವ ವೇದಿಕೆ ಮುಖಾಂತರ ಈ ತಪ್ಪು ಎಸಗಿದ್ದಾರೋ ಅಲ್ಲೇ ಅಂದರೆ, ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಕ್ಷಮೆಯಾಚಿಸಬೇಕೆಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೋಯ್ಮಾಲ್ಯ ಬಾಗ್ಚಿ ಅವರ ನೇತೃತ್ವದ ಪೀಠವು ಹೇಳಿದೆ.
ಎಸ್ಎಂಎ ಕ್ಯೂರ್ ಫೌಂಡೇಶನ್ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ದಾಖಲಿಸಿತ್ತು. ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಸಮಯ್ ರೈನಾ ಅವರ ‘ಇಂಡಿಯಾಸ್ ಗಾಟ್ ಲೇಟೆಂಟ್’ ಕಾರ್ಯಕ್ರಮದ ಸಂಬಂಧದಲ್ಲಿ ರಣವೀರ್ ಅಲ್ಲಾಬಾದಿಯಾ ಮತ್ತು ಆಶಿಶ್ ಚಂಚ್ಲಾನಿ ಅವರ ವಿರುದ್ಧ ವಿವಿಧ ಸ್ಥಳಗಳಲ್ಲಿ ದಾಖಲಾದ ಎಫ್ಐಆರ್ಗಳನ್ನು ಒಗ್ಗೂಡಿಸುವಂತೆ ಕೋರಿದ ಅರ್ಜಿಯ ಜೊತೆಗೆ ಈ ಪ್ರಕರಣವನ್ನು ವಿಚಾರಣೆಗೆ ತೆಗೆದುಕೊಳ್ಳಲಾಯಿತು.
ನ್ಯಾಯಮೂರ್ತಿ ಬಾಗ್ಚಿ ಅವರು ‘ಕಾಮಿಡಿಯನ್ಸ್ ಹಾಸ್ಯ ಭಾಷಣವನ್ನು ವಾಣಿಜ್ಯೀಕರಣಗೊಳಿಸುತ್ತಿದ್ದಾರೆ. ಸಮಾಜದ ಯಾವುದೇ ವರ್ಗದ ಜನರ ಭಾವನೆಗಳಿಗೆ ಧಕ್ಕೆ ತರುವಂತೆ ಹಾಸ್ಯವನ್ನು ಮಾಡಬಾರದು. ಅದರಲ್ಲೂ ಇದು ವಾಣಿಜ್ಯ ಭಾಷಣವಾಗಿದೆ” ಎಂದು ತಿಳಿಸಿದರು. “ಹಾಸ್ಯವು ಜೀವನದ ಭಾಗವಾಗಿದೆ, ಆದರೆ ಇತರರನ್ನು ಗೇಲಿ ಮಾಡುವುದರಿಂದ ಸಂವೇದನೆಗೆ ಧಕ್ಕೆ ಉಂಟಾಗುತ್ತದೆ. ಇದರಿಂದ ಸಮಾಜದಲ್ಲಿ ಸಮಸ್ಯೆಯಾಗುತ್ತದೆ ಎಂದು ಅವರು ಎಚ್ಚರಿಸಿದರು.
ಕಾಮಿಡಿಯನ್ಸ್ ಪರ ವಕೀಲರು, ತಮ್ಮ ಕಕ್ಷಿದಾರರು ಬೇಷರತ್ ಕ್ಷಮೆಯಾಚನೆ ಸಲ್ಲಿಸಿದ್ದಾರೆ ಎಂದು ಕೋರ್ಟ್ಗೆ ತಿಳಿಸಿದರು. ಇದಕ್ಕೆ ನ್ಯಾಯಮೂರ್ತಿ ಕಾಂತ್ ಮುರು ಪ್ರಶ್ನೆ ಮಾಡುತ್ತಾ, “ಮುಂದಿನ ಬಾರಿ ಎಷ್ಟು ದಂಡ ವಿಧಿಸಬೇಕೆಂದು ಹೇಳಿ”ಎಂದು ಕೇಳಿದರು. ವಕೀಲರು, “ದಂಡವನ್ನು ವಿಶೇಷ ಚೇತನರ ಒಳಿತಿಗೆ ಬಳಸುವಂತೆ ನಿಮ್ಮ ವಿವೇಕಕ್ಕೆ ಬಿಡುತ್ತೇವೆ” ಎಂದರು. “ಇಂದು ವಿಶೇಷ ಚೇತನ ಬಗ್ಗೆ, ಮುಂದೆ ಮಹಿಳೆಯರು, ಹಿರಿಯ ನಾಗರಿಕರು, ಮಕ್ಕಳ ಬಗ್ಗೆ ಮಾತನಾಡಬಹುದು. ಇದು ಎಲ್ಲಿಗೆ ಮುಗಿಯುತ್ತದೆ?” ಎಂದು ಕೇಳಿದರು.
ಫೌಂಡೇಶನ್ನ ಪರ ಹಿರಿಯ ವಕೀಲೆ ಅಪರಾಜಿತಾ ಸಿಂಗ್, “ಕೋರ್ಟ್ನಿಂದ ಬಲವಾದ ಸಂದೇಶ ತಲುಪಿದೆ. ಕಾಮಿಡಿಯನ್ಸ್ ಕ್ಷಮೆಯಾಚಿಸಿದ್ದಾರೆ. ಅವರು ತಮ್ಮ ಪ್ರಭಾವವನ್ನು ಈ ವಿಷಯದ ಬಗ್ಗೆ ಜಾಗೃತಿ ಮೂಡಿಸಲು ಬಳಸಬೇಕು. ಅದೇ ಉತ್ತಮ ಕ್ಷಮೆಯಾಗಲಿದೆ” ಎಂದರು. ಕೊನೆಯದಾಗಿ ಕೋರ್ಟ್ ನಿಮ್ಮ ಯೂಟ್ಯೂಬ್ ಚಾನೆಲ್ಗಳಲ್ಲಿ ಕ್ಷಮೆಯಾಚಿಸಿ. ಅಪರಾಜಿತಾ ಅವರ ಸಲಹೆಯಂತೆ ಕಾರ್ಯಕ್ರಮ ರೂಪಿಸಿ, ದಂಡದ ಬಗ್ಗೆ ತಿಳಿಸಿ ಎಂದು ಆದೇಶಿಸಿದೆ.
