ಇಂದು ರೈತರ ಜೊತೆಗೆ ಬೆಳಗಾವಿ ಸುವರ್ಣ ಸೌಧಕ್ಕೆ ಬಿಜೆಪಿ ಮುತ್ತಿಗೆ

ಬೆಳಗಾವಿ

    ಡಿಸೆಂಬರ್ 9 ರ ಬೆಳಗ್ಗೆ ರೈತರ ಬೃಹತ್ ಪ್ರತಿಭಟನೆ ನಡೆಸಿ, ವಿಧಾನಮಂಡಲ ಅಧಿವೇಶನ  ನಡೆಯುತ್ತಿರುವ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲಿದ್ದೇವೆ ಎಂದು ಬಿಜೆಪಿ  ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ  ಅವರು ತಿಳಿಸಿದ್ದಾರೆ. ಕಾಂಗ್ರೆಸ್ ಸರ್ಕಾರದ ರೈತವಿರೋಧಿ ನೀತಿಯನ್ನು ಖಂಡಿಸಿ ನಡೆಯುವ ಹೋರಾಟದ ಸ್ಥಳ ಮಾಲಿನಿ ಸಿಟಿ ಮೈದಾನಕ್ಕೆ ಭೇಟಿ ನೀಡಿದ ಬಳಿಕ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಬೆಳಗಾವಿ ಜಿಲ್ಲೆಯ ಶಾಸಕರು, ವಿಧಾನಪರಿಷತ್ ಸದಸ್ಯರು, ಬೆಳಗಾವಿ, ಅಕ್ಕಪಕ್ಕದ ಜಿಲ್ಲೆಗಳ ರೈತರು ಭಾಗವಹಿಸುತ್ತಾರೆ ಎಂದರು.

   ಪ್ರತಿಭಟನೆಯಲ್ಲಿ ಕನಿಷ್ಠ 20-25 ಸಾವಿರ ಜನರು ಸೇರುತ್ತಾರೆ ಎಂದು ತಿಳಿಸಿದರು. ಈ ಸರಕಾರ ಕಣ್ಣಿದ್ದೂ ಕುರುಡನಂತೆ, ಕಿವಿಯಿದ್ದೂ ಕಿವುಡನಂತೆ ನಟಿಸುತ್ತಿದೆ. ಪರಿಹಾರದ ವಿಚಾರ ಕೇಳಿದರೆ ಕೇಂದ್ರದ ಮೇಲೆ ಆರೋಪಿಸುತ್ತಾರೆ. ರಾಜ್ಯ ಸರಕಾರಕ್ಕೆ ಜವಾಬ್ದಾರಿಯೇ ಇಲ್ಲ ಎಂದು ದೂರಿದರು.

    ಕಬ್ಬು ಬೆಳೆಗಾರರ ಸಮಸ್ಯೆ ಇನ್ನೂ ಸಂಪೂರ್ಣವಾಗಿ ಇತ್ಯರ್ಥ ಆಗಿಲ್ಲ. ಕೇಂದ್ರವು ಮೆಕ್ಕೆ ಜೋಳಕ್ಕೆ 2400 ರೂ. ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಿದೆ. ಆದರೆ, ರಾಜ್ಯ ಸರಕಾರವು ಸೂಕ್ತ ಸಮಯದಲ್ಲಿ ಖರೀದಿ ಕೇಂದ್ರ ತೆರೆಯದ ಕಾರಣ ಮೆಕ್ಕೆ ಜೋಳ ಬೆಳೆಯುವ ರೈತರು 1500, 1600 ರೂಪಾಯಿಗೆ ಮೆಕ್ಕೆ ಜೋಳ ಮಾರಾಟ ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಹತ್ತಿ, ತೊಗರಿ ಮೊದಲಾದ ರೈತರ ಸಮಸ್ಯೆ ಚರ್ಚೆ ನಡೆಸಲಿದ್ದೇವೆ ಎಂದು ತಿಳಿಸಿದರು. 

   ಮುಖ್ಯಮಂತ್ರಿ ಗಾದಿಗೆ ಕಚ್ಚಾಟದ ಕರಿನೆರಳು ರಾಜ್ಯದ ಮೇಲೆ ಬಿದ್ದಿದೆ. ರಾಜ್ಯ ಸರಕಾರವು ತನ್ನ ವೈಫಲ್ಯವನ್ನು ಮುಚ್ಚಿ ಹಾಕಿಕೊಳ್ಳಲು ಕೇಂದ್ರ ಸರಕಾರವನ್ನು ದೂರುವ ಪರಿಪಾಠವನ್ನು ಮುಂದುವರೆಸಿದೆ. ಇವೆಲ್ಲವನ್ನೂ ಸದನದಲ್ಲಿ ಚರ್ಚಿಸುತ್ತೇವೆ ಎಂದು ಹೇಳಿದರು. 

   ರೊಚ್ಚಿಗೆದ್ದ ರೈತರ ಪರ ಧ್ವನಿ ಎತ್ತುತ್ತಿದ್ದೇವೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಅವರು ತಿಳಿಸಿದರು. ಬಿಜೆಪಿ, ಯಡಿಯೂರಪ್ಪನವರು ಮೊದಲಿನಿಂದಲೂ ರೈತಪರವಾಗಿ ಕೆಲಸ ಮಾಡುತ್ತ ಬಂದಿದ್ದಾಗಿ ವಿವರಿಸಿದರು. ಹೋರಾಟದ ಮೂಲಕ ಬಿಜೆಪಿ ಬೆಳೆದಿದೆ. ವಿಧಾನಸೌಧದಲ್ಲೂ ರೈತಪರವಾಗಿ ಧ್ವನಿ ಎತ್ತಲಿದೆ ಎಂದು ಹೇಳಿದರು. 

   ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್, ವಿಧಾನ ಪರಿಷತ್ತಿನ ಸದಸ್ಯ ಸಿ.ಟಿ. ರವಿ, ಶಾಸಕರಾದ ವಿಠ್ಠಲ ಹಲಗೇಕರ್, ಅಭಯ ಪಾಟೀಲ, ರಾಜ್ಯ ಉಪಾಧ್ಯಕ್ಷ ಅನೀಲ ಬೆನಕೆ, ಮಾಜಿ ಶಾಸಕ ಸಂಜಯ ಪಾಟೀಲ, ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೇರಿ, ಜಿಲ್ಲಾಧ್ಯಕ್ಷರಾದ ಶ್ರೀಮತಿ ಗೀತಾ ಸುತಾರ, ಸುಭಾಷ ಪಾಟೀಲ, ಮುಖಂಡರಾದ ಎಂ.ಬಿ.ಜಿರಲಿ, ಅರವಿಂದ ಪಾಟೀಲ ಹಾಗೂ ಪಕ್ಷದ ಮುಖಂಡರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

Recent Articles

spot_img

Related Stories

Share via
Copy link