ಅರಣ್ಯ ಭೂಮಿ ಉಳುವವರಿಗೆ ಸಿಹಿಸುದ್ದಿ …!

ಮೈಸೂರು:

       ಅರಣ್ಯ ಮತ್ತು ಕಂದಾಯ ಭೂಮಿಯ ಜಂಟಿ ಸಮೀಕ್ಷೆ ನಡೆಸುವ ಮೂಲಕ ಕಾನೂನು ವ್ಯಾಪ್ತಿಯಲ್ಲಿ ಹಕ್ಕುಪತ್ರದ ಸಮಸ್ಯೆಯನ್ನು ಪರಿಹರಿಸಲಾಗುವುದು ಎಂದು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆ ಭರವಸೆ ನೀಡಿದ್ದಾರೆ.

     ಶಾಸಕ ಅನಿಲ್ ಚಿಕ್ಕಮಾದು ಪಾಲ್ಗೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಚಿವರು ಜನರ ಅಹವಾಲಿಗೆ ಸ್ಪಂದಿಸಿದರು. ಡಿ.ಬಿ.ಕುಪ್ಪೆ ವ್ಯಾಪ್ತಿಯಲ್ಲಿ 12 ಕುಟುಂಬಗಳು ಅರಣ್ಯ ವಾಸಿಗಳು ಎಂಬ ಬಗ್ಗೆ ಇರುವ ಗೊಂದಲದ ಕುರಿತಂತೆ ಪರಿಶೀಲನೆ ಮಾಡಿ ಸೂಕ್ತ ಪರಿಹಾರ ಒದಗಿಸಲು ಶೀಘ್ರವೆ ಬೆಂಗಳೂರಿನಲ್ಲಿ ರಾಜ್ಯಮಟ್ಟದ ಸಭೆ ನಡೆಸಿ, ಇಂತಹ ಸಮಸ್ಯೆ ಇರುವ ರಾಜ್ಯದ ಎಲ್ಲಾ ಹಾಡಿ, ಮುಳುಗಡೆ ಪ್ರದೇಶದ ಸಂತ್ರಸ್ತರ ಜಮೀನುಗಳ ಕುರಿತಂತೆ ಪರ್ಯಲೋಚಿಸುವುದಾಗಿ ಸಚಿವರು ತಿಳಿಸಿದರು.

     ಅನಿಲ್ ಚಿಕ್ಕಮಾದು ಅವರು ತಮ್ಮ ಕ್ಷೇತ್ರದಲ್ಲಿ ಆನೆಗಳ ಹಾವಳಿ ಇದ್ದು ಕನಿಷ್ಠ 72 ಕಿಲೋಮೀಟರ್ ರೈಲ್ವೆ ಬ್ಯಾರಿಕೆಡ್ ನಿರ್ಮಿಸುವಂತೆ ಮಾಡಿದ ಮನವಿಗೆ ಸ್ಪಂದಿಸಿದ ಸಚಿವರು ಒಂದೇ ವರ್ಷದಲ್ಲಿ 72 ಕಿಲೋಮೀಟರ್ ಒಂದೇ ಭಾಗದಲ್ಲಿ ನಿರ್ಮಿಸಲು ಸಾಧ್ಯವಿಲ್ಲ, ಆದರೆ ಆನೆಗಳ ಹಾವಳಿ ಹೆಚ್ಚಿರುವ ಪ್ರದೇಶಗಳಲ್ಲಿ ಆದ್ಯತೆಯ ಮೇರೆಗೆ ರೈಲ್ವೆ ಬ್ಯಾರಿಕೇಡ್ ನಿರ್ಮಿಸಲು ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸುವುದಾಗಿ ತಿಳಿಸಿದರು.

     ತಾವು ಇಂದು ಕಬಿನಿ ವ್ಯಾಪ್ತಿಯ ಅಂತರಸಂತೆ ಅರಣ್ಯ ಪ್ರದೇಶದಲ್ಲಿ ಸೌರಬೇಲಿ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದನ್ನು ಪರಿಶೀಲಿಸಿದ್ದಾಗಿ ತಿಳಿಸಿದ ಸಚಿವರು ಇದೇ ಸಂದರ್ಭದಲ್ಲಿ ಅರಣ್ಯದಲ್ಲೇ ವಾಸಿಸುವ ಆದಿವಾಸಿಗಳ ಸಮಸ್ಯೆಯನ್ನು ಆಲಿಸಿದ್ದಾಗಿ ತಿಳಿಸಿದರು. ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ಅವರಿಗೆ ಸಲ್ಲಬೇಕಾದ ಸೌಲಭ್ಯಗಳನ್ನು ನಿಯಮಾನುಸಾರ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದರು.

    ಇದೇ ಸಂದರ್ಭದಲ್ಲಿ ಅರಣ್ಯ ಭೂಮಿಗೆ ಪರ್ಯಾಯವಾಗಿ ಹಕ್ಕುಪತ್ರ ವಿತರಣೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಬಂದ ಹವಾಲುಗಳನ್ನು ಸಚಿವರು ಪರಿಶೀಲಿಸಿ 3 ಎಕರೆಗಿಂತ ಕಡಿಮೆ ಪ್ರದೇಶದಲ್ಲಿ 1980ಕ್ಕಿಂತ ಮೊದಲು ಉಳಿಮೆ ಮಾಡುತ್ತಿರುವ ಮತ್ತು ಮನೆ ಕಟ್ಟಿಕೊಂಡು ಮೂರು ತಲೆಮಾರಿನಿಂದ ವಾಸಿಸುತ್ತಿರುಔರಿಗೆ ಮಾತ್ರ ಪರಿಹಾರ ಒದಗಿಸುವ ಸಂಬಂಧ ನಿಗದಿತ ಅವಧಿಯಲ್ಲಿ ಅರ್ಜಿ ಸಲ್ಲಿಸಿದ್ದರೆ ಪರಿಶೀಲಿಸಿ ಎಂದು ಸೂಚಿಸಿದರು.

     ಹಿರಿಯ ಐಎಫ್‌ಎಸ್ ಅಧಿಕಾರಿಗಳಾದ ರಂಗರಾವ್, ಕುಮಾರ್ ಪುಷ್ಕರ್, ರಮೇಶ್ ಕುಮಾರ್, ಹರ್ಷಕುಮಾರ್ ಮತ್ತು ಎಚ್ ಡಿ ಕೋಟೆಯ ತಹಶೀಲ್ದಾರ್ ಸಭೆಯಲ್ಲಿ ಭಾಗವಹಿಸಿದ್ದರು. ಮಾಜಿ ಶಾಸಕ ಸಂದೇಶ್ ನಾಗರಾಜ್ ಅವರು ಈ ಸಭೆಯಲ್ಲಿ ಪಾಲ್ಗೊಂಡು ಅರಣ್ಯ ಹಕ್ಕು ಕಾಯ್ದೆಯ ಕುರಿತಂತೆ ಇರುವ ಸಮಸ್ಯೆಗಳ ಬಗ್ಗೆ ವಿವರಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap