ಅಮರಾವತಿ:
ತುಂಗಾಭದ್ರ ಜಲಾಶಯದ 19ನೇ ಗೇಟ್ ಮುರಿದಿರುವ ಹಿನ್ನೆಲೆಯಲ್ಲಿ ಉಂಟಾಗಿರುವ ಪರಿಸ್ಥಿತಿ ಪರಾಮರ್ಶಿಸಲು ಆಂಧ್ರ ಪ್ರದೇಶದ ಜಲ ಸಂಪನ್ಮೂಲ ಸಚಿವ ನಿಮ್ಮಲ ರಾಮನಾಯ್ಡು ಸೋಮವಾರ ಜಲಾಶಯಕ್ಕೆ ಭೇಟಿ ನೀಡಿದರು.
ಗೇಟ್ ದುರಸ್ತಿ ಕಾರ್ಯವನ್ನು ಪರಿಶೀಲಿಸಿದ ಸಚಿವರು, ನೂತನ ಗೇಟ್ ಅಳವಡಿಕೆ ಕುರಿತು ಎಂಜಿನಿಯರ್ ಗಳು ಹಾಗೂ ತಜ್ಞರೊಂದಿಗೆ ಮಾತನಾಡಿದರು. ಈ ವೇಳೆ ವಿಶೇಷ ಮುಖ್ಯ ಕಾರ್ಯದರ್ಶಿ ಮತ್ತು ಮುಖ್ಯ ಅಭಿಯಂತರರು ಸಚಿವರ ಜೊತೆಗೆ ಉಪಸ್ಥಿತರಿದ್ದರು. ಇದಕ್ಕೂ ಮುನ್ನ ಜಲಾಶಯದ ಎಂಜಿನಿಯರ್‌ಗಳನ್ನು ಭೇಟಿ ಮಾಡಿದ ಆಂಧ್ರಪ್ರದೇಶದ ತಜ್ಞರ ತಂಡ ಗೇಟ್ ಕೊಚ್ಚಿಹೋಗಿರುವ ಸ್ಥಳದಲ್ಲಿ ತಾತ್ಕಾಲಿಕ ವ್ಯವಸ್ಥೆ ಮತ್ತು ಹೊಸ ಗೇಟ್ ಅಳವಡಿಸುವ ಪ್ರಯತ್ನದ ಕುರಿತು ಚರ್ಚಿಸಿತು.
ವಿನ್ಯಾಸ ವಿಭಾಗದ ಮುಖ್ಯ ಇಂಜಿನಿಯರ್ ಟಿ.ಕುಮಾರ್ ನೇತೃತ್ವದ ತಂಡದಲ್ಲಿ ಅಧೀಕ್ಷಕ ಎಂಜಿನಿಯರ್ ಶಿವಕುಮಾರ್ ರೆಡ್ಡಿ ಹಾಗೂ ಕಾರ್ಯಪಾಲಕ ಎಂಜಿನಿಯರ್ ವೇಣುಗೋಪಾಲ್ ರೆಡ್ಡಿ ಇದ್ದಾರೆ. ತುಂಗಭದ್ರಾ ಅಣೆಕಟ್ಟಿನ 19ನೇ ಗೇಟ್ ಆ.10ರಂದು ರಾತ್ರಿ ಕೊಚ್ಚಿ ಹೋಗಿದ್ದು, ಜಲಾಶಯದಲ್ಲಿ ಪ್ರವಾಹದ ಪ್ರಮಾಣ ತಗ್ಗಿದ ಹಿನ್ನೆಲೆಯಲ್ಲಿ ಕ್ರೆಸ್ಟ್ ಗೇಟ್ ಗಳನ್ನು ಮುಚ್ಚುವ ವೇಳೆ ಈ ಘಟನೆ ನಡೆದಿದೆ.