ತುಮಕೂರು:
ಬಿಇಓ ನೂತನ ಕಚೇರಿ ಉದ್ಘಾಟಿಸಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಕರೆ
ದೇಶದಲ್ಲಿ ಗಡಿ ಕಾಯುವ ಯೋಧನ ಪಾತ್ರ ಎಷ್ಟು ಪ್ರಾಮುಖ್ಯತೆ ಹೊಂದಿದೆಯೋ ಸಮಾಜದಲ್ಲಿ ಭವಿಷ್ಯದ ಉತ್ತಮ ನಾಗರಿಕರನ್ನು ಮಾನಸಿಕವಾಗಿ ತಯಾರು ಮಾಡುವಲ್ಲಿ ಶಿಕ್ಷಕರ ಪಾತ್ರವೂ ಅಷ್ಟೇ ಪ್ರಮುಖವಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು.
ನಗರದ ಡಿಸಿಸಿ ಬ್ಯಾಂಕ್ ರಸ್ತೆಯಲ್ಲಿ ಜಿಲ್ಲಾ ಪಂಚಾಯತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ನಿರ್ಮಿಸಲಾದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ನೂತನ ಕಟ್ಟಡ ಉದ್ಘಾಟಿಸಿ ಮಾÁತನಾಡಿದ ಅವರು, ಒಳಿತು-ಕೆಡುಕು ಎರಡನ್ನೂ ಗುರುತಿಸುವ ಹಾಗೂ ಒಳ್ಳೆಯದನ್ನು ಸೃಷ್ಟಿಸಿ ಕೆಟ್ಟದ್ದನ್ನು ಶಿಕ್ಷಿಸುವ ಜವಾಬ್ದಾರಿ ಮತ್ತು ಶಕ್ತಿ ಎರಡೂ ಕೇವಲ ಶಿಕ್ಷಕನಿಗೆ ಮಾತ್ರ ಇರುವಂಥದ್ದು.
ಪುರಾತನ ಕಾಲದಲ್ಲಿ ಚಾಲ್ತಿಯಲ್ಲಿದ್ದ ಗುರುಕುಲ ಶಿಕ್ಷಣ ಪದ್ಧತಿಯಿಂದ ಈಗಿನವರೆಗೂ ಗುರುವಿಗೆ ತನ್ನದೇ ಆದ ಸ್ಥಾನ-ಮಾನವಿದೆ. ಪ್ರತಿಯೊಂದು ಮಗುವು ಒಬ್ಬ ಶಿಕ್ಷಕನಲ್ಲಿ ಜ್ಞಾನ ಮತ್ತು ಚಾರಿತ್ರ್ಯಗಳೆರಡನ್ನೂ ಗುರುತಿಸುತ್ತಿರುತ್ತದೆ. ಅಂತಹ ಶ್ರೇಷ್ಟ ಸ್ಥಾನದಲ್ಲಿರುವಾತ ಮಗುವಿಗೆ ಮಾದರಿಯಾಗಿ ಮುಂದಿನ ಭವಿಷ್ಯಕ್ಕೆ ದಾರಿದೀಪವಾಗಬೇಕು ಎಂದರು.
ಉತ್ತಮ ಉತ್ತಮ ಸಮಾಜವನ್ನು ಸೃಷ್ಟಿಸುವಲ್ಲಿ ಶಿಕ್ಷಕರು, ಅಧಿಕಾರಿಗಳು ಸೇರಿದಂತೆ ಶಿಕ್ಷಣ ಇಲಾಖೆಯ ಎಲ್ಲಾ ಸಿಬ್ಬಂದಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದ ಸಚಿವರು, ಸಮಾಜದಲ್ಲಿ ಮಾನವೀಯ ಮತ್ತು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಸಹಾಯಕ್ಕಿಂತ ಪ್ರೋತ್ಸಾಹ ಮುಖ್ಯ. ಈ ನಿಟ್ಟಿನಲ್ಲಿ ಸರ್ಕಾರವು ಪಾಲಿಕೆಯಲ್ಲಿ ಕರ್ಮಚಾರಿಗಳಾಗಿ ಕಾರ್ಯನಿರ್ವಹಿಸುತ್ತಿರುವವರಿಗೂ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ನೀಡಿದೆ ಎಂದರು.
ನಂತರ ಕಾರ್ಯಕ್ರಮದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಹನುಮನಾಯ್ಕ, ಇಲಾಖೆ ಉಪನಿರ್ದೇಶಕ ಸಿ. ನಂಜಯ್ಯ, ಉಪನಿರ್ದೇಶಕ ಹಾಗೂ ಡಯಟ್ ಪ್ರಾಂಶುಪಾಲ ಮಂಜುನಾಥ್ ಕೆ, ಬಸವರಾಜು, ಕುಮುದಮ್ಮ ಹಾಗೂ ರಂಗಧಾಮಪ್ಪರಿಗೆ ಸನ್ಮಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ:ಕೆ. ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ ಷಹಪುರವಾಡ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ನರಸಿಂಹರಾಜು ಎನ್. ಸೇರಿದಂತೆ ಶಿಕ್ಷಕ ವೃಂದದವರು, ಸಿಆರ್‍ಪಿ, ಬಿಆರ್‍ಪಿ, ಬಿಆರ್‍ಸಿಗಳು ಉಪಸ್ಥಿತರಿದ್ದರು.
ಗುರುವಿನ ಸ್ಥಾನ ಬ್ರಹ್ಮನಿಗೂ ಮಿಗಿಲು
ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಮಾತನಾಡಿ, ಗುರುವಿನ ಸ್ಥಾನವು ಸೃಷ್ಟಿಕರ್ತ ಬ್ರಹ್ಮನಿಗೂ ಮಿಗಿಲಾದದ್ದು. ಸೃಷ್ಟಿಯಲ್ಲಿ ಹೆಚ್ಚು ಗೌರವಕ್ಕೆ ಪಾತ್ರವಾಗುವ ಸ್ಥಾನ ಗುರುವಿನದ್ದು. ಗುರುವು ಕೇವಲ ಅಕ್ಷರ ಜ್ಞಾನವನ್ನಷ್ಟೇ ಅಲ್ಲದೆ, ಜೀವನದ ಮಹತ್ವ, ಅರಿವು, ಕತ್ತಲೆಯಲ್ಲಿರುವವರಿಗೆ ಬೆಳಕು ತೋರಿಸುವ ಮಾರ್ಗದರ್ಶಿಯಾಗಿರುತ್ತಾನೆ ಎಂದರಲ್ಲದೆ, ಶಿಕ್ಷಣ ಇಲಾಖೆ ಎಂಬುದು ರಾಷ್ಟ್ರದ ಮೊದಲ ಪ್ರಜೆಯಿಂದ ಹಿಡಿದು ಸಮಾಜದ ಕಟ್ಟಕಡೆಯ ವ್ಯಕ್ತಿಯ ವ್ಯಕ್ತಿತ್ವದ ನಿರ್ಮಾತೃ. ಪ್ರತೀ ತಾಲೂಕಿನಲ್ಲಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯವು ತನ್ನ ವ್ಯಾಪ್ತಿಯ ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದರು.
ಶಿಕ್ಷಕರು, ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಬೇಕಾದರೆ ಅವರ ಮೇಲಾಧಿಕಾರಿಗಳು ಅಷ್ಟೇ ಪ್ರಾಮಾಣಿಕವಾಗಿದ್ದು, ಸ್ಪೂರ್ತಿ ನೀಡುವಂತಹ ಪರಿಸರ ಸೃಷ್ಟಿಮಾಡಬೇಕು.
-ಬಿ.ಸಿ.ನಾಗೇಶ್, ಶಿಕ್ಷಣ ಸಚಿವರು.
ಖಾಸಗಿ ಶಾಲೆ ಆಡಳಿತ ಮಂಡಳಿಯವರ ಬಹಿಷ್ಕಾರ
ಬಿಇಓ ಕಚೇರಿಯನ್ನು ಉದ್ಘಾಟನೆ ಕಾರ್ಯಕ್ರಮಕ್ಕೆ ತುಮಕೂರಿನ ಅನುದಾನ ರಹಿತ ಶಾಲಾ ಆಡಳಿತ ಮಂಡಳಿ ಒಕ್ಕೂಟವನ್ನು ಉಪೇಕ್ಷಿಸಲಾಗಿದೆ ಎಂದುಆರೋಪಿಸಿ ಆಡಳಿತ ಮಂಡಳಿಯವರು ಕಾರ್ಯಕ್ರಮವನ್ನು ಬಹಿಷ್ಕರಿಸಿದ್ದರು. ಶಿಕ್ಷಣ ಇಲಾಖೆಯ ಬಹುತೇಕ ಕಾರ್ಯಕ್ರಮದಲ್ಲಿ ಖಾಸಗಿ ಶಾಲಾ, ಶಿಕ್ಷಣ ಸಂಸ್ಥೆಗಳ ಸಹಾಯ, ಸಹಕಾರ ಪಡೆಯುವ ಸಾರ್ವಜನಿಕ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಉದ್ಘಾಟನೆಗೂ ಖಾಸಗಿ ಶಾಲೆಗಳ ಒಕ್ಕೂಟದಿಂದ ಸಹಕಾರ ಪಡೆದಿದೆ.
ಆದರೆ ಆಹ್ವಾನ ಪತಿಕೆಯಲ್ಲಿ ಮಾತ್ರ ಅನುದಾನ ರಹಿತ ಖಾಸಗಿ ಶಾಲಾ ಶಿಕ್ಷಣ ಸಂಸ್ಥೆಗಳ ಹೆಸರನ್ನು ಮುದ್ರಿಸಿದೆ ಉಪೇಕ್ಷಿಸಿದ ಕಾರಣ ನಾವು ಕಾರ್ಯಕ್ರಮವನ್ನು ಖಂಡಿಸಿದ್ದೇವೆ ಎಂದು ಒಕ್ಕೂಟದ ಅಧ್ಯಕ್ಷ ಡಾ.ಹಾಲನೂರು ಎಸ್.ಲೇಪಾಕ್ಷಿ ತಿಳಿಸಿದರು. ಶಿಕ್ಷಣ ಸಚಿವರ ಆಗಮನ ತಡವಾದ ಕಾರಣ ನಿಗದಿತ ಸಮಯಕ್ಕೆ ಆಗಮಿಸಿದ್ದ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಉದ್ಘಾಟನೆಯಲ್ಲಿ ಭಾಗಿಯಾಗದೆ ನಿರ್ಗಮಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ