ಕರ್ನಾಟಕ ಮಾಡೆಲ್‌ ಅನುಸರಿಸಲು ಮುಂದಾಯ್ತು ತೆಲಂಗಾಣ….!

ಬೆಂಗಳೂರು:

     ತೆಲಂಗಾಣ ರಾಜ್ಯ ದಕ್ಷಿಣ ವಿದ್ಯುತ್ ವಿತರಣಾ ಕಂಪನಿಯ (TSSPDCL) ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಮುಷರಫ್ ಅಲಿ ಫರುಕಿ ಮತ್ತು ಅವರ ತಂಡವು, ತೆಲಂಗಾಣದಲ್ಲಿ ಉಚಿತ ವಿದ್ಯುತ್ ಯೋಜನೆಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಬೆಸ್ಕಾಂ ನಿಗಮ ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳಿಂದ ಯೋಜನೆ ಕುರಿತು ಮಾಹಿತಿ ಪಡೆದುಕೊಂಡಿದೆ.

    ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾದ ಮಹಾಂತೇಶ ಬೀಳಗಿ, ಬೆಸ್ಕಾಂನ ಹಣಕಾಸು ನಿರ್ದೇಶಕರಾದ ದರ್ಶನ್ ಜೆ. ಬೆಸ್ಕಾಂನ ಐಟಿ ಹಾಗೂ ಕಂದಾಯ ವಿಭಾಗದ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಯೋಜನೆ ಕುರಿತು ತೆಲಂಗಾಣ ಅಧಿಕಾರಿಗಳು ಸಭೆ ನಡೆಸಿ ಗೃಹಜ್ಯೋತಿ ಬಗ್ಗೆ ಮಾಹಿತಿ ಪಡೆದಿದ್ದಾರೆ.

    ಗೃಹ ಜ್ಯೋತಿ ಯೋಜನೆ ಜಾರಿಗಾಗಿ ಇಂಧನ ಇಲಾಖೆಯ ಅಧಿಕಾರಿಗಳು ಮತ್ತು ಬೆಸ್ಕಾಂ ಪಂಜಾಬ್, ದೆಹಲಿ ಮತ್ತು ತಮಿಳುನಾಡಿನ ಯೋಜನೆಗಳನ್ನು ಅಧ್ಯಯನ ನಡೆಸಿತ್ತು. ನಂತರ ಯೋಜನೆ ಜಾರಿಗೆ ತನ್ನದೇ ಆದ ತಂತ್ರವನ್ನು ರೂಪಿಸಿತ್ತು. ಯೋಜನೆಯಡಿಯಲ್ಲಿ ರಾಜ್ಯದಲ್ಲಿ ಜನರಿಗೆ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಇತ್ತೀಚೆಗಷ್ಟೇ ನಡೆದ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರವು ಗೃಹಜ್ಯೋತಿ ಯೋಜನೆ ನಿಯಮದಲ್ಲಿ ಬದಲಾವಣೆಗಳನ್ನು ತಂದಿತ್ತು.

    ಮಾಸಿಕ 48 ಯೂನಿಟ್‌ಗಿಂತ ಕಡಿಮೆ ವಿದ್ಯುತ್‌ ಬಳಸುವವರಿಗೆ ‘ಗೃಹಜ್ಯೋತಿ’ ಯೋಜನೆಯಡಿ ಶೇ. 10ರಷ್ಟು ಹೆಚ್ಚುವರಿ ವಿದ್ಯುತ್‌ ಉಚಿತ ನೀಡುವ ಬದಲಿಗೆ 10 ಯೂನಿಟ್‌ ಹೆಚ್ಚುವರಿ ವಿದ್ಯುತ್‌ ಉಚಿತವಾಗಿ ನೀಡುವುದಾಗಿ ತಿಳಿಸಿತ್ತು. ಇದೆಲ್ಲವನ್ನೂ ತೆಲಂಗಾಣ ರಾಜ್ಯದ ಅಧಿಕಾರಿಗಳಿಗೆ ವಿವರಿಸಲಾಗಿದೆ ಎಂದು ಮಹಾಂತೇಶ ಬೀಳಗಿ ಅವರು ಹೇಳಿದ್ದಾರೆ.

    ತೆಲಂಗಾಣ ರಾಜ್ಯದಲ್ಲಿ ಇತ್ತೀಚೆಗಷ್ಟೇ ಚುನಾವಣೆ ನಡೆದಿತ್ತು. ಚುನಾವಣೆ ವೇಳೆ ಕರ್ನಾಟಕದಲ್ಲಿ ಘೋಷಣೆ ಮಾಡಿದಂತೆ 6 ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಲಾಗಿತ್ತು.ತೆಲಂಗಾಣ ಮುಖ್ಯಮಂತ್ರಿಯಾಗುತ್ತಿದ್ದಂತೆ  ಚುನಾವಣಾ ಪೂರ್ವ ಭರವಸೆ ನೀಡಿದ್ದ ಎಲ್ಲ ಆರೂ ಗ್ಯಾರಂಟಿಗಳನ್ನು ಜಾರಿಗೆ ತರಲು ಸಿಎಂ ರೇವಂತ್ ರೆಡ್ಡಿ ಅವರು ಒಪ್ಪಿಗೆ ನೀಡಿದ್ದರು.

    ಆ ಪೈಕಿ, ಹೆಣ್ಣು ಮಕ್ಕಳಿಗೆ ಉಚಿತ ಬಸ್ ಸೇವೆ ಮತ್ತು ಬಡವರಿಗೆ ಹತ್ತು ಲಕ್ಷ ರೂ.ವರೆಗೂ ವಿಮೆ ಒದಗಿಸುವ ಯೋಜನೆಗಳಿಗೆ ಮೊದಲ ಹಂತದಲ್ಲಿ ಡಿ. 9ರಂದು ಚಾಲನೆ ನೀಡಿದ್ದರು. ಇದೀಗ ಗೃಹ ಜ್ಯೋತಿ ಯೋಜನೆ ಜಾರಿಗೆ ತರಲು ಸಿದ್ಧತೆ ನಡೆಸುತ್ತಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap