ಶ್ರೀನಗರ:
ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕ ಕೃತ್ಯಗಳು ಮುಂದುವರೆದಿದೆ. ರಜೌರಿಯಲ್ಲಿ ಭಯೋತ್ಪಾದಕರು ಸೋಮವಾರ (ಜು.22) ರಂದು ಬೆಳಿಗ್ಗೆ ಭದ್ರತಾ ಪೋಸ್ಟ್ ಗಳ ಮೇಲೆ ದಾಳಿ ನಡೆಸಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ಅಧಿಕಾರಿಗಳ ಪ್ರಕಾರ, ಶಂಕಿತ ಉಗ್ರರು ಗುಂಧಾ ಪ್ರದೇಶದಲ್ಲಿರುವ ಸೆಕ್ಯುರಿಟಿ ಪೋಸ್ಟ್ ಮೇಲೆ ಬೆಳಿಗ್ಗೆ 4 ಗಂಟೆ ವೇಳೆಗೆ ದಾಳಿ ನಡೆಸಿದ್ದಾರೆ. ಉಗ್ರರ ದಾಳಿಗೆ ಭದ್ರತಾ ಸಿಬ್ಬಂದಿ ಪ್ರತಿ ದಾಳಿ ನಡೆಸಿದ್ದಾರೆ. ಗುಂಡಿನ ಚಕಮಕಿಯ ನಂತರ, ಕಾರ್ಡನ್ ಮತ್ತು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಇತ್ತೀಚೆಗೆ ಜಮ್ಮು-ಕಾಶ್ಮೀರದ ಕುಪ್ವಾರದಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಆಸ್ಟ್ರಿಯಾದಲ್ಲಿ ತಯಾರಿಸಲಾಗಿದ್ದ ಸ್ಟೇಯರ್ ಅಸಾಲ್ಟ್ ರೈಫಲ್ ಪತ್ತೆಯಾಗಿತ್ತು.