ಭೋಪಾಲ್:
ಥಲಸೀಮಿಯಾ ಮೂಳೆ ಮಜ್ಜೆ ಕಾಯಿಲೆಯಿಂದ ಬಳಲುತ್ತಿದ್ದ ಐದು ಮಕ್ಕಳಿಗೆ ನೀಡಲಾಗುತ್ತಿದ್ದ ಜೀವ ರಕ್ಷಿಸುವ ಚಿಕಿತ್ಸೆ ದುರಂತಕ್ಕೆ ಕಾರಣವಾಗಿದೆ. ಮಧ್ಯಪ್ರದೇಶದಲ್ಲಿ ಈ ದುರ್ಘಟನೆ ನಡೆದಿದ್ದು, ಇದು ಅತ್ಯಂತ ಗಂಭೀರ ಆರೋಗ್ಯ ವೈಫಲ್ಯವಾಗಿದೆ. ಸತ್ನಾದ ಸರ್ಕಾರಿ ಆಸ್ಪತ್ರೆಗಳಲ್ಲಿ ನಡೆದ ರಕ್ತ ವರ್ಗಾವಣೆಯ ವೇಳೆ ಮಕ್ಕಳಿಗೆ ಎಚ್‌ಐವಿ ಸೋಂಕಿತ ರಕ್ತವನ್ನು ನೀಡಲಾಗಿದೆ. ಈ ಘಟನೆಯು ನಿರ್ಲಕ್ಷ್ಯದ ಪ್ರಶ್ನೆಗಳನ್ನು ಹುಟ್ಟುಹಾಕುವುದಲ್ಲದೆ, ರಕ್ತದ ಸುರಕ್ಷತೆ, ಮೇಲ್ವಿಚಾರಣೆ ಮತ್ತು ಹೊಣೆಗಾರಿಕೆಯ ವ್ಯವಸ್ಥೆಯ ಕುಸಿತವನ್ನು ಸೂಚಿಸುತ್ತದೆ.
ನಿಯಮಿತ ರಕ್ತ ವರ್ಗಾವಣೆ ಮಾಡಲೇಬೇಕಿದ್ದ ಈ ಮಕ್ಕಳಿಗೆ ಒಟ್ಟು 189 ಯೂನಿಟ್ ರಕ್ತವನ್ನು ನೀಡಲಾಗಿತ್ತು. ಈ ರಕ್ತವನ್ನು ಮೂರು ವಿಭಿನ್ನ ರಕ್ತ ಬ್ಯಾಂಕ್‌ಗಳಿಂದ ಸಂಗ್ರಹಿಸಲಾಗಿದ್ದು, ಇದರ ಮೂಲಕ ಅವರು 150ಕ್ಕೂ ಹೆಚ್ಚು ದಾನಿಗಳಿಂದ ರಕ್ತವನ್ನು ಪಡೆದರು. ಇದರಿಂದ ಅಪಾಯದ ವ್ಯಾಪ್ತಿ ಬಹಳಷ್ಟು ವಿಸ್ತರಿಸಿತು. ಜಿಲ್ಲಾ ಮಟ್ಟದ ತನಿಖೆ ಇದೀಗ ಅಂತಿಮಗೊಂಡಿದ್ದು, ದಾನಿಗಳ ರಕ್ತದ ಮೂಲಕವೇ ಮಕ್ಕಳಿಗೆ ಎಚ್‌ಐವಿ ಸೋಂಕು ತಲುಪಿದೆ ಎಂದು ದೃಢಪಡಿಸಿದೆ. ಇದು ರಕ್ತ ತಪಾಸಣಾ ಪ್ರೋಟೋಕಾಲ್‌ಗಳಲ್ಲಿ ಸಂಭವಿಸಿದ ವೈಫಲ್ಯವನ್ನು ತೋರಿಸುತ್ತದೆ.
ಈ ಪ್ರಕರಣದಲ್ಲಿ ಸಾರ್ವಜನಿಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ರಕ್ತ ನಿಧಿಯ ಉಸ್ತುವಾರಿ ಅಧಿಕಾರಿ ಮತ್ತು ಇಬ್ಬರು ಲ್ಯಾಬ್ ತಂತ್ರಜ್ಞರನ್ನು ಅಮಾನತುಗೊಳಿಸಿದೆ. ಸತ್ನಾ ಜಿಲ್ಲಾ ಆಸ್ಪತ್ರೆಯ ಮಾಜಿ ಸಿವಿಲ್ ಸರ್ಜನ್‌ಗೆ ಶೋಕಾಸ್ ನೋಟಿಸ್ ನೀಡಿದೆ. ಮಾಜಿ ಸಿವಿಲ್ ಸರ್ಜನ್ ಡಾ. ಮನೋಜ್ ಶುಕ್ಲಾ ಅವರಿಗೆ ಲಿಖಿತ ವಿವರಣೆಯನ್ನು ಸಲ್ಲಿಸಲು ಸೂಚಿಸಲಾಗಿದೆ ಮತ್ತು ವಿವರಣೆ ತೃಪ್ತಿಕರವಾಗಿಲ್ಲದಿದ್ದರೆ ಕಠಿಣ ಇಲಾಖಾ ಕ್ರಮದ ಎಚ್ಚರಿಕೆ ನೀಡಲಾಗಿದೆ.
ಆಯುಷ್ಮಾನ್ ಭಾರತ್‌ನ ಡಾ. ಯೋಗೇಶ್ ಭರ್ಸತ್ ಅವರ ಅಧ್ಯಕ್ಷತೆಯಲ್ಲಿ ರಚಿಸಲಾದ ಏಳು ಸದಸ್ಯರ ತನಿಖಾ ಸಮಿತಿಯ ಪ್ರಾಥಮಿಕ ತನಿಖಾ ವರದಿಯ ಆಧಾರದ ಮೇಲೆ ಅವರ ವಿರುದ್ಧ, ರೋಗಶಾಸ್ತ್ರಜ್ಞ ಮತ್ತು ರಕ್ತ ಬ್ಯಾಂಕ್ ಉಸ್ತುವಾರಿ ಡಾ. ದೇವೇಂದ್ರ ಪಟೇಲ್ ಮತ್ತು ಪ್ರಯೋಗಾಲಯ ತಂತ್ರಜ್ಞರಾದ ರಾಮ್ ಭಾಯ್ ತ್ರಿಪಾಠಿ ಮತ್ತು ನಂದಲಾಲ್ ಪಾಂಡೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ಈ ಮಕ್ಕಳಲ್ಲಿ ಮೊದಲ HIV-ಪಾಸಿಟಿವ್ ಪ್ರಕರಣ ಈ ವರ್ಷದ ಮಾರ್ಚ್‌ನಲ್ಲಿ ಬೆಳಕಿಗೆ ಬಂದಿತು. ಏಪ್ರಿಲ್ ವೇಳೆಗೆ, ಅನೇಕ ಮಕ್ಕಳಲ್ಲಿ ಸೋಂಕು ದೃಢಪಟ್ಟಿತ್ತು. ಆದರೆ, ಹಲವಾರು ತಿಂಗಳುಗಳವರೆಗೆ ಈ ಮಾಹಿತಿಯು ಆಸ್ಪತ್ರೆ ಆಡಳಿತ ಅಥವಾ ಜಿಲ್ಲಾ ಅಧಿಕಾರಿಗಳನ್ನು ತಲುಪಲಿಲ್ಲ. ಈ ಅವಧಿಯಲ್ಲಿ, ರಕ್ತನಿಧಿಗಳ ತುರ್ತು ಲೆಕ್ಕಪರಿಶೋಧನೆಯನ್ನು ಪ್ರಾರಂಭಿಸಲಾಗಿಲ್ಲ. ಸಾರ್ವಜನಿಕರಿಗೆ ಯಾವುದೇ ಎಚ್ಚರಿಕೆಯನ್ನು ಸಹ ನೀಡಲಾಗಿಲ್ಲ.
ಮಾರ್ಚ್ 20 ರಂದು 15 ವರ್ಷದ ಥಲಸ್ಸೆಮಿಯಾ ರೋಗಿಗೆ ಎಚ್‌ಐವಿ ಪಾಸಿಟಿವ್ ಕಂಡುಬಂತು. ಮಾರ್ಚ್ 26 ಮತ್ತು 28 ರ ನಡುವೆ, ಇನ್ನೂ ಇಬ್ಬರು ಮಕ್ಕಳು ಸೋಂಕಿಗೆ ಒಳಗಾಗಿರುವುದು ಕಂಡುಬಂದಿದೆ. ಏಪ್ರಿಲ್ 3 ರಂದು, ನಾಲ್ಕನೇ ಪ್ರಕರಣ ಬೆಳಕಿಗೆ ಬಂದಿತು. ಆಘಾತಕಾರಿ ಸಂಗತಿಯೆಂದರೆ, ಈ ಬಗ್ಗೆ ತಿಳಿದರೂ ಆಸ್ಪತ್ರೆ ಆಡಳಿತ ಮತ್ತು ಜಿಲ್ಲಾ ಅಧಿಕಾರಿಗಳು ಸುಮಾರು ಒಂಬತ್ತು ತಿಂಗಳ ಕಾಲ ಮೌನವಾಗಿದ್ದರು ಎಂದು ಆರೋಪಿಸಲಾಗಿದೆ.
ಇದೀಗ ಮಕ್ಕಳ ಪೋಷಕರು ತಲೆ ಮೇಲೆ ಕೈಹೊತ್ತು ಕೂರುವಂತಾಗಿದೆ. ಒಂದು ರೋಗಕ್ಕೆ ಚಿಕಿತ್ಸೆ ನೀಡುತ್ತಿರುವಾಗಗಲೇ ಆಸ್ಪತ್ರೆಯ ಬೇಜವಾಬ್ದಾರಿಯಿಂದ ಮಕ್ಕಳಲ್ಲಿ ಎಚ್ಐವಿ ಕಾಣಿಸಿಕೊಂಡಿರುವುದು ನಿಜಕ್ಕೂ ಆಘಾತಕಾರಿ. ತಮ್ಮ ಮಗಳಿಗೆ ಒಂಬತ್ತನೇ ವಯಸ್ಸಿನಲ್ಲಿ ಥಲಸ್ಸೆಮಿಯಾ ಇರುವುದು ಪತ್ತೆಯಾಯಿತು. ಅಂದಿನಿಂದ ಸಂಪೂರ್ಣವಾಗಿ ರಕ್ತ ವರ್ಗಾವಣೆಯ ಮೇಲೆ ಅವಲಂಬಿತವಾಗಿದ್ದೇವೆ ಎಂದು ಪೋಷಕರಲ್ಲೊಬ್ಬರು ಹೇಳಿದರು. ಆಕೆ ಎಚ್‌ಐವಿ ಸೋಂಕಿಗೆ ಒಳಗಾಗಿರುವ ಬಗ್ಗೆ ಕೇವಲ ಮೂರು ತಿಂಗಳ ಹಿಂದೆಯಷ್ಟೇ ತಿಳಿದುಕೊಂಡಿದ್ದಾಗಿ ಅವರು ಹೇಳಿದರು.








