ಬೆಂಗಳೂರು:
ರಾಜ್ಯದ ತಂಬಾಕು ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಯುವ ಜನತಾದಳ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರ ನೇತೃತ್ವದ ನಿಯೋಗ ಮಾಡಿದ್ದ ಮನವಿಗೆ ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ.
ಈ ಬಗ್ಗೆ ನಿಖಿಲ್ ಕುಮಾರಸ್ವಾಮಿಯವರು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಹುಣಸೂರು, ಪಿರಿಯಾಪಟ್ಟಣ, ಹೆಚ್.ಡಿ.ಕೋಟೆ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಬೆಳೆಯಲಾಗಿರುವ ಪರವಾನಗಿ ರಹಿತ ತಂಬಾಕು ಬೆಳೆಗಾರರಿಗೂ ಮಾರಾಟಕ್ಕೆ ಅವಕಾಶ ನೀಡಿಕೆ ಹಾಗೂ ಆ ಬೆಳೆಗಾರರಿಗೆ ವಿಧಿಸಲಾಗುತ್ತಿದ್ದ ದಂಡ ಮನ್ನಾ ಮಾಡುವ ನಿರ್ಧಾರ ಕೈಗೊಂಡಿರುವ ಕೇಂದ್ರದ ವಾಣಿಜ್ಯ ಮತ್ತು ಕೈಗಾರಿಕೆ ಖಾತೆ ಸಚಿವರಾದ ಪಿಯೂಷ್ ಗೋಯಲ್ ಅವರಿಗೆ ಧನ್ಯವಾದ ಹೇಳಿದ್ದಾರೆ.
ಕೇಂದ್ರದ ಆದೇಶದ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಅವರು, ಕಳೆದ 2024 ಡಿ.2ರಂದು ನವದೆಹಲಿಯಲ್ಲಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಕೇಂದ್ರದ ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಪಿಯೂಷ್ ಗೋಯಲ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿತ್ತು. ಡಿ.21ರಂದು ವಾಣಿಜ್ಯ ಇಲಾಖೆಯ ಉನ್ನತ ಅಧಿಕಾರಿಗಳ ಜೊತೆ ಮಹತ್ವದ ಸಭೆಯನ್ನು ನಡೆಸಲಾಗಿತ್ತು ಎಂದು ತಿಳಿಸಿದ್ದಾರೆ.
ಅಂದು ಸಚಿವರನ್ನು ಭೇಟಿ ಮಾಡಿದ ನಿಯೋಗದಲ್ಲಿ ಮೈಸೂರು-ಕೊಡಗು ಲೋಕಸಭೆ ಕ್ಷೇತ್ರದ ಸಂಸದ ಯದುವೀರ್, ಮಾಜಿ ಸಚಿವ ಸಾ.ರಾ.ಮಹೇಶ್, ಹುಣಸೂರು ಶಾಸಕ ಜಿ.ಟಿ.ಹರೀಶ್ ಗೌಡ ಹಾಗೂ ತಂಬಾಕು ಬೆಳೆಗಾರರು ಜೊತೆಯಲಿದ್ದರು ಎಂದು ತಿಳಿಸಿದ್ದಾರೆ.
ರಾಜ್ಯದ ತಂಬಾಕು ಬೆಳೆಗಾರ ರೈತರು ಕಳೆದ ವರ್ಷ ಮೇ, ಜುಲೈ ತಿಂಗಳಲ್ಲಿ ವಿಪರೀತ ಮಳೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದರು. ರಾಜ್ಯದಲ್ಲಿ ಬೆಳೆಯಲಾಗುವ ಎಫ್‌ಸಿವಿ ತಂಬಾಕು ಬೆಳೆಯ ಇಳುವರಿ ಗಣನೀಯವಾಗಿ ಕಡಿಮೆಯಾಗಿತ್ತು ಹಾಗೂ ತಂಬಾಕು ಎಲೆಗಳ ಗುಣಮಟ್ಟಕ್ಕೆ ದೊಡ್ಡ ಮಟ್ಟದಲ್ಲಿ ಹಾನಿಯಾಗಿತ್ತು. ಇದರಿಂದಾಗಿ ಬೆಳೆಗಾರರು ಭಾರೀ ನಷ್ಟಕ್ಕೆ ತುತ್ತಾಗಿದ್ದರು. ಕೇಂದ್ರ ಸರಕಾರ ಇದೀಗ ನೆರವಿಗೆ ಧಾವಿಸಿರುವ ಪರಿಣಾಮ ಸಾವಿರಾರು ಬೆಳೆಗಾರರಿಗೆ ಅನುಕೂಲವಾಗಲಿದೆ ಎಂದಿದ್ದಾರೆ
ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ ರೈತಪರವಾದ ಅನೇಕ ಐತಿಹಾಸಿಕ ನಿರ್ಧಾರಗಳನ್ನು ಕೈಗೊಂಡಿದ್ದು, ಅದರಲ್ಲಿ ರಾಜ್ಯದ ತಂಬಾಕು ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸಿರುವುದು ಕೂಡ ಒಂದಾಗಿದೆ. ಕೇಂದ್ರದ ಈ ನಿರ್ಧಾರದ ಮೂಲಕ ತಂಬಾಕು ಮಂಡಳಿಯ ಹರಾಜು ಕೇಂದ್ರಗಳಲ್ಲಿ ನೋಂದಾಯಿತ ಬೆಳೆಗಾರರಿಂದ ಹೆಚ್ಚುವರಿ ತಂಬಾಕು ಮತ್ತು ನೋಂದಾಯಿಸದಿರುವ ಬೆಳೆಗಾರರಿಂದ ಅನಧಿಕೃತ ತಂಬಾಕು ಮಾರಾಟಕ್ಕೆ ಅನುಮತಿ ನೀಡಲಿದೆ. ಅಲ್ಲದೇ ಯಾವುದೇ ಹೆಚ್ಚುವರಿ ಸೇವಾ ಶುಲ್ಕಗಳಿಲ್ಲದೆ ಬೆಳೆಗಾರರು ನ್ಯಾಯಯುತವಾಗಿ ಮಾರುಕಟ್ಟೆ ಬೆಲೆಯನ್ನು ಪಾರದರ್ಶಕವಾಗಿ ಪಡೆಯಬಹುದಾಗಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಎಫ್‌ಸಿವಿ ತಂಬಾಕನ್ನು 53,325 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. 40,487 ನೋಂದಾಯಿತ ಹಾಗೂ 12,838 ಪರವಾನಗಿ ರಹಿತ ಬೆಳೆಗಾರರು ಬೆಳೆಯುತ್ತಿದ್ದಾರೆ. ಕೇಂದ್ರದ ನಿರ್ಧಾರದಿಂದಾಗಿ ಪ್ರಮುಖವಾಗಿ 12,838 ತಂಬಾಕು ಬೆಳೆಗಾರರಿಗೆ ಅನುಕೂಲವಾಗಲಿದೆ. ಕರ್ನಾಟಕದ ತಂಬಾಕು ಬೆಳೆಗಾರರ ಸಂಕಷ್ಟ ನಿವಾರಿಸಲು ಕೇಂದ್ರ ಐತಿಹಾಸಿಕ ನಿರ್ಧಾರ ಕೈಗೊಂಡಿದೆ ಎಂದು ಅವರು ತಿಳಿಸಿದ್ದಾರೆ.
