7ನೇ ವೇತನ ಆಯೋಗದ ಅವಧಿ ವಿಸ್ತರಿಸಿದ ಸರ್ಕಾರ…..!

ಬೆಂಗಳೂರು

      ರಾಜ್ಯ ಸರ್ಕಾರಿ ನೌಕರರ ವೇತನ ಶ್ರೇಣಿಗಳನ್ನು ಪರಿಷ್ಕರಿಸಲು ರಾಜ್ಯ ಸರ್ಕಾರ ಸುಧಾಕರ್ ರಾವ್ ಅಧ್ಯಕ್ಷತೆಯ 7ನೇ ರಾಜ್ಯ ವೇತನ ಆಯೋಗವನ್ನು ರಚನೆ ಮಾಡಿದೆ. ಈ ಆಯೋಗದ ಅವಧಿ ನವೆಂಬರ್ 19ಕ್ಕೆ ಅಂತ್ಯಗೊಳ್ಳಲಿದೆ.

    ಕರ್ನಾಟಕ ಸರ್ಕಾರಕ್ಕೆ 7ನೇ ರಾಜ್ಯ ವೇತನ ಆಯೋಗ ನವೆಂಬರ್‌ನಲ್ಲಿ ವರದಿ ನೀಡಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಈಗ ಸರ್ಕಾರ ರಾಜ್ಯ 7ನೇ ವೇತನ ಆಯೋಗದ ಅವಧಿಯನ್ನು ಮತ್ತೆ ಆರು ತಿಂಗಳು ವಿಸ್ತರಣೆ ಮಾಡಲಿದೆ ಎಂಬ ಸುದ್ದಿ ಹಬ್ಬಿದೆ. 

    ಸೆಪ್ಟೆಂಬರ್ 29ರಂದು ವೇತನ ಆಯೋಗದ ಅಧ್ಯಕ್ಷ ಸುಧಾಕರ್ ರಾವ್ ಹಾಗೂ ಸದಸ್ಯರ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿಯಾಗಿ ವಿವಿಧ ವಿಚಾರಗಳ ಕುರಿತು ಚರ್ಚೆ ನಡೆಸಿತ್ತು. ಹಣಕಾಸು ಖಾತೆ ಸಚಿವರೂ ಸಹ ಮುಖ್ಯಮಂತ್ರಿಗಳೇ ಆಗಿರುವುದರಿಂದ ಆಯೋಗ ವರದಿ ನೀಡುವ ಕುರಿತು ಚರ್ಚೆ ಮಾಡಲಾಗಿತ್ತು.

     ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವಿದ್ದಾಗ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ಸರ್ಕಾರಿ ನೌಕರರ ವೇತನ ಮತ್ತು ಭತ್ಯೆಗಳ ಪರಿಷ್ಕರಣೆ ಕುರಿತಂತೆ ರಾಜ್ಯ ಸರ್ಕಾರಿ ನೌಕರರ ಬೇಡಿಕೆಗಳನ್ನು ಪರಿಶೀಲಿಸಿ 6 ತಿಂಗಳ ಕಾಲಮಿತಿಯಲ್ಲಿ ವರದಿಯನ್ನು ಸಲ್ಲಿಸಲು, ತ್ರಿಸದಸ್ಯರ 7ನೇ ರಾಜ್ಯ ವೇತನ ಆಯೋಗ ರಚನೆ ಮಾಡಲಾಗಿತ್ತು.

     ಮೇ ತಿಂಗಳಿನಲ್ಲಿ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಮುಗಿದು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿತು. ಹೊಸ ಸರ್ಕಾರ ಆಯೋಗ ವರದಿ ನೀಡಲು ನಿಗದಿಪಡಿಸಿರುವ ಕಾಲಾವಧಿಯನ್ನು ದಿನಾಂಕ 19/5/2023ರಿಂದ 6 ತಿಂಗಳು ವಿಸ್ತರಣೆ ಮಾಡಿ ಆದೇಶ ಹೊರಡಿಸಿತ್ತು. ಈ ಆದೇಶ ನವೆಂಬರ್ 19ರ ತನಕ ಜಾರಿಯಲ್ಲಿರುತ್ತದೆ.

    ಕರ್ನಾಟಕ ಸರ್ಕಾರ ರಚನೆ ಮಾಡಿರುವ 7ನೇ ರಾಜ್ಯ ವೇತನ ಆಯೋಗಕ್ಕೆ ಸುಧಾಕರ್ ರಾವ್ ಅಧ್ಯಕ್ಷರು. ಪಿ. ಬಿ. ರಾಮಮೂರ್ತಿ, ಶ್ರೀಕಾಂತ್ ಬಿ. ವನಹಳ್ಳಿ, ಹೆಪ್ಸಿಬಾ ರಾಣಿ ಕೊರ್ಲಪಾಟಿ ಆಯೋಗದಲ್ಲಿದ್ದಾರೆ. ಸರ್ಕಾರ ಈಗ ಆಯೋಗದ ಕಾಲಾವಧಿಯನ್ನು ಮತ್ತೆ 6 ತಿಂಗಳು ವಿಸ್ತರಣೆ ಮಾಡಲಿದೆ ಎಂಬ ಸುದ್ದಿ ಹಬ್ಬಿದೆ. ಇನ್ನು ಈ ಕುರಿತು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ. ಎಸ್. ಷಡಾಕ್ಷರಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

    “6ನೇ ವೇತನ ಪರಿಷ್ಕರಣೆಯನ್ನು ತ್ವರಿತವಾಗಿ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೇ ತಿಂಗಳು ವರದಿ ಪಡೆದು, ಶೀಘ್ರ ಜಾರಿಗೊಳಿಸುವ ಭರವಸೆ ಇದೆ” ಎಂದು ಹೇಳಿದ್ದಾರೆ. 7ನೇ ರಾಜ್ಯ ವೇತನ ಆಯೋಗ ಈಗ ಸರ್ಕಾರಕ್ಕೆ ವರದಿ ನೀಡಿದರೆ ವೇತನ ಪರಿಷ್ಕರಣೆಗೆ ವಾರ್ಷಿಕ ಸುಮಾರು 12 ರಿಂದ 18 ಸಾವಿರ ಕೋಟಿ ರೂ. ಅಗತ್ಯವಿದೆ ಎಂದು ಅಂದಾಜಿಸಲಾಗಿದೆ.

    ಈಗಾಗಲೇ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುತ್ತಿರುವ ಕರ್ನಾಟಕ ಸರ್ಕಾರ ಆಯೋಗದ ಅವಧಿ ಇನ್ನು 6 ತಿಂಗಳು ವಿಸ್ತರಣೆ ಮಾಡಿ 2024ರಲ್ಲಿ ವರದಿಯನ್ನು ಸ್ವೀಕಾರ ಮಾಡುವ ನಿರೀಕ್ಷೆ ಇದೆ. ಸರ್ಕಾರ ಈಗಾಗಲೇ ರಾಜ್ಯ ಸರ್ಕಾರಿ ನೌಕರರು ಮುಷ್ಕರ ಆರಂಭಿಸಿದಾಗ ಏಪ್ರಿಲ್ 1ರಿಂದ ಅನ್ವಯವಾಗುವಂತೆ ಮೂಲ ವೇತನದ ಶೇ 17ರಷ್ಟು ಮಧ್ಯಂತರ ಪರಿಹಾರವನ್ನು ನೀಡಿದೆ. ಬಜೆಟ್‌ನಲ್ಲಿ ನಿರೀಕ್ಷೆ ಮಾಡಿದ ಆದಾಯ ಸಂಗ್ರಹಕ್ಕೆ ಸರ್ಕಾರ ಮುಂದಾಗಿದ್ದು, ವೇತನ ಆಯೋಗದ ವರದಿಯನ್ನು ಮುಂದಿನ 2024-25ನೇ ಸಾಲಿನ ಬಜೆಟ್ ಸಮಯದಲ್ಲಿ ಸ್ವೀಕಾರ ಮಾಡಲಾಗುತ್ತದೆ.

    ವೇತನ ಆಯೋಗ ಕರ್ನಾಟಕ ಸರ್ಕಾರದ ಪರಿಶೀಲನಾರ್ಹ ಅಂಶಗಳ ಕುರಿತು ಈಗಾಗಲೇ ಆದೇಶ ಹೊಡಿಸಿದೆ. ರಾಜ್ಯ ಸರ್ಕಾರಿ ನೌಕರರ ಸಂಘ, ಸಚಿವಾಲಯ ನೌಕರರ ಸಂಘ ಸೇರಿದಂತೆ ವಿವಿಧ ಸಂಘಗಳು, ನೌಕರರ ಸಂಘಟನೆಗಳ ಜೊತೆ ಸಭೆಯನ್ನು ನಡೆಸಿ ಆಯೋಗದ ವರದಿ ಶಿಫಾರಸು ಸಿದ್ಧಗೊಳಿಸಿತ್ತು. ಆದರೆ ಆಯೋಗದ ವರದಿ ವಿಸ್ತರಣೆ ಮಾಡುವ ಪ್ರಸ್ತಾವನೆ ಸಿದ್ಧವಾಗಿದೆ. ಮೂಲಗಳ ಪ್ರಕಾರ 7ನೇ ವೇತನ ಆಯೋಗದ ಅವಧಿ ವಿಸ್ತರಣೆ ಮಾಡುವ ಕುರಿತು ಆರ್ಥಿಕ ಇಲಾಖೆ ಕಡತ ಸಿದ್ಧಪಡಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಿ ಮಾಡಿದ ಬಳಿಕ ಅಂತಿಮವಾಗಿ ಆದೇಶ ಪ್ರಕಟವಾಗಲಿದೆ. ಆಯೋಗದ ಅವಧಿಯನ್ನು ಮತ್ತೆ ಆರು ತಿಂಗಳು ವಿಸ್ತರಣೆ ಮಾಡುವ ನಿರೀಕ್ಷೆ ಇದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap