ಬೆಂಗಳೂರು:
ಸರ್ಜಾಪುರ ರಸ್ತೆಯ ದೊಡ್ಡ ಕನ್ನಹಳ್ಳಿಯ ಖಾಸಗಿ ಬ್ಯಾಂಕ್ ಎಟಿಎಂಗೆ ಮುಖಕ್ಕೆ ಬೆಡ್‌ಶೀಟ್ ಕಟ್ಟಿಕೊಂಡು ನುಗ್ಗಿ, ಯಂತ್ರವನ್ನು ಗ್ಯಾಸ್ ಕಟ್ಟರ್‌ನಿಂದ ಕತ್ತರಿಸಿ ದರೋಡೆ ಮಾಡಿದ ಪ್ರಕರಣ ರೋಚಕ ತಿರುವು ಪಡೆದುಕೊಂಡಿದೆ.16.50 ಲಕ್ಷ ರೂ. ಲಪಟಾಯಿಸಿದದ್ದ ಎಟಿಎಂ ಯಂತ್ರಕ್ಕೆ ಹಣ ತುಂಬುವ ಕಂಪನಿಯ ಐವರು ಸಿಬ್ಬಂದಿಗಳನ್ನು ಬೆಳ್ಳಂದೂರು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ಸೆಕ್ಯೂರ್ ವ್ಯಾಲ್ಯೂ ಇಂಡಿಯಾ ಲಿಮಿಟೆಡ್ ಕಂಪನಿಯ ಫೀಲ್ಡ್ ಆಪರೇಷನ್ ಮ್ಯಾನೇಜರ್ ಪ್ರತಾಪ್ (32), ಎಟಿಎಂ ಆಫೀಸರ್ ಪವನ್ ಕಲ್ಯಾಣ್ (28), ಎಟಿಎಂ ಇನ್‌ಚಾರ್ಜ್ ಧರ್ಮೇಂದ್ರ (52), ಮಡಿವಾಳ ಏರಿಯಾ ಬ್ರಾಂಚ್ ಹೆಡ್ ರಾಘವೇಂದ್ರ (36) ಹಾಗೂ ಅಸಿಸ್ಟೆಂಟ್ ಮ್ಯಾನೇಜರ್ ಮಹೇಶ್ (30) ಬಂಧಿತ ಆರೋಪಿಗಳು. ಆರೋಪಿಗಳಿಂದ 13.50 ಲಕ್ಷ ರೂ. ಜಪ್ತಿ ಮಾಡಲಾಗಿದೆ.
ಆರೋಪಿಗಳು ಜುಲೈ 1ರಂದು ಸರ್ಜಾಪುರ ರಸ್ತೆಯ ದೊಡ್ಡಕನ್ನಹಳ್ಳಿಯ ಆ್ಯಕ್ಸಿಸ್ ಬ್ಯಾಂಕ್ ಎಟಿಎಂ ಯಂತ್ರಕ್ಕೆ 16.50 ಲಕ್ಷ ರೂ. ತುಂಬಲು ಆರೋಪಿಗಳು ತೆರಳಿದ್ದರು. ಆದರೆ ಎಟಿಎಂ ಯಂತ್ರದಲ್ಲಿ ತಾಂತ್ರಿಕ ದೋಷದ ಕಾರಣ ಹಣ ತುಂಬದೆ ವಾಪಸ್ ಬಂದಿದ್ದರು. ಮತ್ತೆ ಜು.2ರಂದು ಹಣ ತುಂಬಲು ಹೋದಾಗಲೂ ಎಟಿಎಂ ಯಂತ್ರದಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಹಣ ತುಂಬಿರಲಿಲ್ಲ.
ಈ ತಾಂತ್ರಿಕ ದೋಷ ಹಾಗೂ ಹಣ ತುಂಬದೇ ಇರುವ ವಿಚಾರವನ್ನು ಆರೋಪಿಗಳು ಬ್ಯಾಂಕ್‌ಗೆ ತಿಳಿಸಿರಲಿಲ್ಲ. ಆದರೆ, ಈ ಎಟಿಎಂ ಯಂತ್ರ ದಲ್ಲಿ ಯಾವುದೇ ಹಣದ ವ್ಯವಹಾರ ನಡೆಯದೆ ಇರುವುದರಿಂದ ಅನುಮಾನಗೊಂಡ ಬ್ಯಾಂಕ್ ಅಧಿಕಾರಿಗಳು ಜು.6ರಂದು ಎಟಿಎಂ ಕೇಂದ್ರಕ್ಕೆ ಬಂದಾಗ ಎಟಿಎಂ ಯಂತ್ರವನ್ನು ಗ್ಯಾಸ್ ಕಟ್ಟರ್‌ನಿಂದ ಕತ್ತರಿಸಿ ದರೋಡೆ ಮಾಡಿರುವುದು ಬೆಳಕಿಗೆ ಬಂದಿದೆ.
ದರೋಡೆ ಘಟನೆ ಬೆಳಕಿಗೆ ಬಂದ ಬೆನ್ನಲ್ಲೇ ಆರೋಪಿಗಳು, ಈ ಎಟಿಎಂ ಕೇಂದ್ರಕ್ಕೆ ನಾವು ಜು.1ರಂದೇ 16.50 ಲಕ್ಷ ರೂ.ತುಂಬಿರುವುದಾಗಿ ಬ್ಯಾಂಕಿಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ ಬ್ಯಾಂಕ್ ಅಧಿಕಾರಿಗಳು ಎಟಿಎಂ ಯಂತ್ರದಲ್ಲಿ 16.56 ಲಕ್ಷ ರು. ದರೋಡೆಯಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು, ಎಟಿಎಂ ಕೇಂದ್ರದ ಸಿಸಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲನೆ ಮಾಡಿದಾಗ, ಇಬ್ಬರು ಜು.6ರ ಮುಂಜಾನೆ 3 ಗಂಟೆಗೆ ಮುಖಕ್ಕೆ ಬೆಡ್‌ಶೀಟ್ ಸುತ್ತಿಕೊಂಡು ಎಟಿಎಂ ಕೇಂದ್ರ ಪ್ರವೇಶಿಸಿ, ಸಿಸಿ ಕ್ಯಾಮೆರಾಗಳಿಗೆ ಕಪ್ಪು ಬಣ್ಣದ ದ್ರಾವಣ ಸ್ಪ್ರೆ ಮಾಡಿರುವುದು ಸೆರೆಯಾಗಿತ್ತು. ಬಳಿಕ ಗ್ಯಾಸ್ ಕಟ್ಟರ್‌ನಿಂದ ಎಟಿಎಂ ಯಂತ್ರ ಕತ್ತರಿಸಿ ಹಣ ದರೋಡೆ ಮಾಡಿರುವುದು ತಿಳಿದುಬಂದಿದೆ.
ತನಿಖೆ ಮುಂದುವರಿಸಿದ ಪೊಲೀಸರಿಗೆ, ಎಟಿಎಂ ಕೇಂದ್ರದ ಜು.1ರ ಸಿಸಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲನೆ ಮಾಡಿದಾಗ, ಅಂದು ಎಟಿಎಂ ಕೇಂದ್ರಕ್ಕೆ ಬಂದಿದ್ದು ಹಣ ತುಂಬದೇ ವಾಪಸ್ ಆಗಿರುವುದು ಕಂಡು ಬಂದಿದೆ. ಬಳಿಕ ಅನುಮಾನಗೊಂಡು ಐವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಎಟಿಎಂ ಯಂತ್ರಕ್ಕೆ ಹಣ ತುಂಬದೇ ತಾವೇ ಹಣ ತೆಗೆದುಕೊಂಡು ಹೋಗಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಈ ನಡುವೆ ಎಟಿಎಂ ಯಂತ್ರ ಗ್ಯಾಸ್ ಕಟ್ಟರ್‌ನಿಂದ ಕತ್ತರಿಸಿ ದರೋಡೆ ಮಾಡಿದವರಿಗಾಗಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಪೊಲೀಸರು ತನಿಖೆ ನಡೆಸಿದಾಗ ಕಳ್ಳರು ಎಟಿಎಂ ಯಂತ್ರದಲ್ಲಿದ್ದ 6,800 ರೂ. ಮಾತ್ರ ದರೋಡೆ ಮಾಡಿರುವುದು ಪತ್ತೆಯಾಗಿತ್ತು. ಮತ್ತಷ್ಟು ತನಿಖೆ ಕೈಗೊಂಡಾಗ, ಸೆಕ್ಯೂರ್ ವ್ಯಾಲ್ಯೂ ಕಂಪನಿಯ ಸಿಬ್ಬಂದಿ 16.50 ಲಕ್ಷ ರೂ. ಹಣವನ್ನು ಎಟಿಎಂ ಯಂತ್ರಕ್ಕೆ ತುಂಬಿಸಿರಲಿಲ್ಲ. ಆ ನಂತರ ನಡೆದಿದ್ದ ಎಟಿಎಂ ದರೋಡೆ ಕೃತ್ಯದ ಲಾಭ ಪಡೆದುಕೊಂಡಿದ್ದ ಎಟಿಎಂ ನಿರ್ವಹಣಾ ಕಂಪನಿ ನೌಕರರು ಒಟ್ಟು 16.50 ಲಕ್ಷ ರೂ.ಗಳನ್ನು ಲಪಟಾಯಿಸಿ ಕಳ್ಳರ ಮೇಲೆ ಎತ್ತಿ ಹಾಕಿ ಬ್ಯಾಂಕ್‌ಗೆ ಸುಳ್ಳು ಮಾಹಿತಿ ನೀಡಿರುವುದು ತನಿಖೆಯಲ್ಲಿ ಬಯಲಾಗಿದೆ.