ಬೆಂಗಳೂರು:
ಕೋವಿಡ್-19 ಲಾಕ್ ಡೌನ್ ಸಮಯದಲ್ಲಿ ಬೆಂಗಳೂರಿನ ಪಾದರಾಯನಪುರದಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ 375 ಮಂದಿ ವಿರುದ್ಧದ ಪ್ರಕರಣವನ್ನು ಹೈಕೋರ್ಟ್ ರದ್ದುಗೊಳಿಸಿದೆ.
ನವಾಜ್ ಪಾಷಾ ಮತ್ತಿತರರು ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಮೂರ್ತಿ ಕೆ ನಟರಾಜನ್ ಅವರ ನೇತೃತ್ವದ ಏಕಸದಸ್ಯ ಪೀಠವು ಮಾನ್ಯ ಮಾಡಿದೆ. ಅಕ್ರಮವಾಗಿ ಗುಂಪುಗೂಡಿ ಬಿಬಿಎಂಪಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದರೆ ಎನ್ನಲಾದ ಆರೋಪದಡಿ ದಾಖಲಿಸಿದ್ದ ಕ್ರಿಮಿನಲ್ ಪ್ರಕರಣಗಳನ್ನು ನ್ಯಾಯಾಲಯವು ರದ್ದುಪಡಿಸಿದೆ.
ಸಾಕ್ಷಿಗಳ ಹೇಳಿಕೆಗಳನ್ನು ಒಂದೇ ರೀತಿಯಲ್ಲಿ ದಾಖಲಿಸಲಾಗಿದೆ. ಪೊಲೀಸರು 120ಕ್ಕೂ ಅಧಿಕ ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದರೂ ಸಹ ಗಲಭೆ ನಡೆದಿದೆ ಎನ್ನಲಾದ ಸಮಯದಲ್ಲಿ ಯಾವುದೇ ಆಸ್ತಿ ಪಾಸ್ತಿ ನಷ್ಟವಾಗಿಲ್ಲ, ಪೊಲೀಸರು ಯಾವುದೇ ವಸ್ತು ವಶಪಡಿಸಿಕೊಂಡಿಲ್ಲ ಎಂದು ಆದೇಶದಲ್ಲಿ ಹೇಳಲಾಗಿದೆ.
ಭಾರತೀಯ ದಂಡ ಸಂಹಿತೆ ಸೆಕ್ಷನ್ 172ರಿಂದ 188ರವರೆಗೆ ಮತ್ತು ವಿಪತ್ತು ನಿರ್ವಹಣಾ ಕಾಯಿದೆ ವಿವಿಧ ಸೆಕ್ಷನ್ ಉಲ್ಲಂಘಿಸಲಾಗಿದೆ ಎಂದು ಹೇಳಲಾಗಿದೆ. ಆದರೆ ಸಕ್ಷಮ ಪ್ರಾಧಿಕಾರ ದೂರು ದಾಖಲಿಸಿಲ್ಲ. ಬಿಬಿಎಂಪಿ ಅಧಿಕಾರಿಗಳು ಪಾದರಾಯನಪುರಕ್ಕೆ ಸೀಲ್ ಡೌನ್ ಮಾಡಲು ಹೋದಾಗ 51 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿತ್ತು ಎಂದು ಹೇಳುತ್ತಾರೆ. ಆದರೆ, ಯಾರಿಗೆ ಸೋಂಕು ತಗುಲಿತ್ತು ಎಂಬ ಬಗ್ಗೆ ಯಾವುದೇ ವಿವರಗಳನ್ನು ಆರೋಪ ಪಟ್ಟಿಯಲ್ಲಿ ದಾಖಲಿಸಿಲ್ಲ” ಎಂದು ನ್ಯಾಯಾಲಯ ಹೇಳಿದೆ.
ಬಿಬಿಎಂಪಿ ಅಧಿಕಾರಿಗಳು ಆ ಪ್ರದೇಶವನ್ನು ಸೀಲ್ ಡೌನ್ ಮಾಡಲು ಮುಂದಾದಾಗ ಅಲ್ಲಿನ ಜನರು ಹಾಲು, ತರಕಾರಿ ಮತ್ತಿತರ ಅಗತ್ಯ ವಸ್ತುಗಳನ್ನು ತರಲು ತೊಂದರೆ ಆಗಬಹುದು ಎಂದು ಪ್ರತಿರೋಧ ಮಾಡಿರಬಹುದು, ಆಗ ಒಂದು ರೀತಿಯ ಬಿಗುವಿನ ವಾತಾವರಣ ನಿರ್ಮಾಣವಾಗಿರಬಹುದು. ಅಲ್ಲದೇ, ಮ್ಯಾಜಿಸ್ಟ್ರೇಟ್ ಐಪಿಸಿ ಸೆಕ್ಷನ್ 188ರ ಅಡಿ ಸಂಜ್ಞೇ ತೆಗೆದುಕೊಳ್ಳಲು ನಿರ್ಬಂಧವಿದೆ. ಆದರೂ ಸಂಜ್ಞೇ ತೆಗೆದುಕೊಂಡು ಮುಂದುವರಿದಿರುವುದು ಸರಿಯಲ್ಲ, ಹೀಗಾಗಿ ಆರೋಪಿಗಳ ವಿರುದ್ಧದ ಪ್ರಕರಣಗಳನ್ನು ರದ್ದುಗೊಳಿಸಲಾಗಿದೆ” ಎಂದು ಆದೇಶಿಸಿದೆ.
ಪ್ರಾಸಿಕ್ಯೂಷನ್ ಪರ ವಾದ ಮಂಡಿಸಿದ್ದ ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕ ಬಿ ಎನ್ ಜಗದೀಶ್ ಅವರು 2020ರ ಏಪ್ರಿಲ್ 19ರಂದು ಸಂಜೆ ಸಮಯದಲ್ಲಿ ಬಿಬಿಎಂಪಿ ಅಧಿಕಾರಿಗಳು ಕೋವಿಡ್ ಸೋಂಕು ತಗುಲಿದ್ದ 58 ಮಂದಿಯನ್ನು ವಶಕ್ಕೆ ತೆಗೆದಕೊಳ್ಳಲು ಪಾದರಾಯನಪುರದಲ್ಲಿ ಹೋಗಿದ್ದಾಗ ಅಲ್ಲಿ ಅಕ್ರಮವಾಗಿ ಗುಂಪು ಗೂಡಿದ್ದವರು ಕೈಯಲ್ಲಿ ಚಾಕು, ದೊಣ್ಣೆ ಮತ್ತು ರಾಡ್‌ಗಳನ್ನು ಹಿಡಿದುಕೊಂಡು ಆಶಾ ಕಾರ್ಯಕರ್ತರು, ವೈದ್ಯಾಕಾರಿಗಳು ಹಾಗೂ ಬಿಬಿಎಂಪಿ ಅಕಾರಿಗಳ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ್ದರು” ಎಂದು ವಾದಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ