ಬೆಂಗಳೂರು:
ಮಹರ್ಷಿ ವಾಲ್ಮೀಕಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣ ಸಂಬಂಧ ಮಾಜಿ ಸಚಿವ ಬಿ.ನಾಗೇಂದ್ರ ಅವರ ಇಬ್ಬರು ಆಪ್ತರನ್ನು ವಿಶೇಷ ತನಿಖಾ ದಳ (ಎಸ್‌ಐಟಿ) ಬಂಧಿಸಿದೆ.
ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದಡಿ ನೆಕ್ಕಂಟಿ ನಾಗರಾಜ್ ಹಾಗೂ ಅವರ ಬಾಮೈದ ನಾಗೇಶ್ವರರಾವ್ ಅವರನ್ನು ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದಾರೆ.
ಕೊಪ್ಪಳ ಜಿಲ್ಲೆಯ ಕಾರಟಗಿ ತಾಲ್ಲೂಕಿನ ಮರ್ಲಾನಹಳ್ಳಿಯ ನೆಕ್ಕಂಟಿ ನಾಗರಾಜ್, ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಬಿ. ನಾಗೇಂದ್ರ ಅವರ ಆಪ್ತ. ನಿಗಮದ ಹಿಂದಿನ ವ್ಯವಸ್ಥಾಪಕ ನಿರ್ದೇಶಕ (ಎಂ.ಡಿ) ಜೆ.ಜಿ. ಪದ್ಮನಾಭ್ (55), ಲೆಕ್ಕಾಧಿಕಾರಿಯಾಗಿದ್ದ ಪರಶುರಾಮ್ ಜಿ. ದುರ್ಗಣ್ಣನವರ ಹಾಗೂ ಇತರರ ಜೊತೆ ಸೇರಿ ಕೃತ್ಯ ಎಸಗಿರುವುದು ಪುರಾವೆಗಳಿಂದ ಗೊತ್ತಾಗಿದೆ ಎಂದು ಎಸ್‌ಐಟಿ ಮೂಲಗಳು ಹೇಳಿವೆ. ಇದರೊಂದಿಗೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ.
ನಾಗರಾಜ್ ಅವರ ಬಾಮೈದನಾದ ನಾಗೇಶ್ವರರಾವ್, ಹೈದರಾಬಾದ್‌ನ ಫಸ್ಟ್ ಫೈನಾನ್ಸ್ ಕ್ರೆಡಿಟ್ ಕೋ–ಆಪರೇಟಿವ್ ಸೊಸೈಟಿಯ (ಎಫ್‌ಎಫ್‌ಸಿಸಿಎಸ್‌ಎಲ್) ಅಧ್ಯಕ್ಷ ಸತ್ಯನಾರಾಯಣ್ ಹಾಗೂ ಇತರರ ಜೊತೆ ಒಡನಾಟ ಹೊಂದಿದ್ದ. ಹಣ ಅಕ್ರಮ ವರ್ಗಾವಣೆ ಸಂಚಿನಲ್ಲಿ ಈತ ಪ್ರಮುಖ ಆರೋಪಿ. ಈತನೇ ಹೈದರಾಬಾದ್‌ನ ಹಲವರು ಕಂಪನಿಗಳ ಮುಖ್ಯಸ್ಥರನ್ನು ಪದ್ಮನಾಭ್ ಅವರಿಗೆ ಭೇಟಿ ಮಾಡಿಸಿದ್ದ. ನಂತರವೇ ಮಾತುಕತೆ ನಡೆದು, ಹಣ ಅಕ್ರಮವಾಗಿ ವರ್ಗಾವಣೆ ಮಾಡಲಾಗಿತ್ತು ಎಂದು ಹೇಳಲಾಗುತ್ತಿದೆ.
ಪದ್ಮನಾಭ್, ಪರಶುರಾಮ್ ಹಾಗೂ ಸತ್ಯನಾರಾಯಣ ಅವರನ್ನು ಈಗಾಗಲೇ ಬಂಧಿಸಲಾಗಿದೆ. ಇದೀಗ ನಾಗರಾಜ್ ಹಾಗೂ ನಾಗೇಶ್ವರರಾವ್ ಅವರನ್ನು ಸೆರೆ ಹಿಡಿಯಲಾಗಿದೆ. ಇವರಿಬ್ಬರೂ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ನೀಡುವಂತೆ ಕೋರಲಾಗುವುದು ಎಂದು ಎಸ್‌ಐಟಿ ಮೂಲಗಳು ಮಾಹಿತಿ ನೀಡಿವೆ.