ಮುಂಬೈ:
ಡಿ.06 ರಂದು ಬಾಬ್ರಿ ಮಸೀದಿ ಧ್ವಂಸಗೊಂಡ ದಿನವಾಗಿದ್ದು, ಶಿವಸೇನೆ (ಯುಟಿಬಿ) ಈ ದಿನದ ಅಂಗವಾಗಿ ಪ್ರಕಟಿಸಿದ್ದ ಪೋಸ್ಟ್ ಈಗ ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿಯಲ್ಲಿ ಬಿರುಕು ಮೂಡುವಂತೆ ಮಾಡಿದೆ.ಬಾಬ್ರಿ ಮಸೀದಿ ಧ್ವಂಸಗೊಂಡಿದ್ದನ್ನು ಹೊಗಳಿ ಪತ್ರಿಕೆಯಲ್ಲಿ ಜಾಹಿರಾತನ್ನು ಶಿವಸೇನೆ (ಯುಟಿಬಿ) ಬಣ ಪ್ರಕಟ ಮಾಡಿತ್ತು. ಇದನ್ನು ಪ್ರತಿಭಟಿಸಿ ಸಮಾಜವಾದಿ ಪಕ್ಷ ಎಂವಿಎ ಮೈತ್ರಿಕೂಟ ತೊರೆದಿದೆ.
ಮಹಾರಾಷ್ಟ್ರ ಎಸ್‌ಪಿ ಘಟಕದ ಮುಖ್ಯಸ್ಥ ಅಬು ಅಜ್ಮಿ, “ಬಾಬರಿ ಮಸೀದಿ ಧ್ವಂಸಕ್ಕೆ ಕಾರಣರಾದವರನ್ನು ಅಭಿನಂದಿಸಿ ಶಿವಸೇನೆ (ಯುಬಿಟಿ) ಜಾಹೀರಾತನ್ನು ಪ್ರಕಟಿಸಿದೆ. ಅವರ (ಉದ್ಧವ್ ಠಾಕ್ರೆ ಅವರ ಸಹಾಯಕ) ಸಹ ಧ್ವಂಸವನ್ನು ಶ್ಲಾಘಿಸಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ, ಆದ್ದರಿಂದ ನಾವು ಎಂವಿಎ ತೊರೆಯುತ್ತಿದ್ದೇವೆ. ನಾನು (ಸಮಾಜವಾದಿ ಪಕ್ಷದ ಅಧ್ಯಕ್ಷ) ಅಖಿಲೇಶ್ ಸಿಂಗ್ ಯಾದವ್ ಅವರೊಂದಿಗೆ ಮಾತನಾಡುತ್ತಿದ್ದೇನೆ” ಎಂದು ಅಜ್ಮಿ ಪಿಟಿಐಗೆ ತಿಳಿಸಿದ್ದಾರೆ.
ಬಾಬರಿ ಮಸೀದಿ ಧ್ವಂಸಕ್ಕೆ ಸಂಬಂಧಿಸಿದಂತೆ ಸೇನಾ (ಯುಬಿಟಿ) ಎಂಎಲ್‌ಸಿ ಮಿಲಿಂದ್ ನಾರ್ವೇಕರ್ ಅವರ ಪೋಸ್ಟ್‌ಗೆ ಪ್ರತಿಕ್ರಿಯೆಯಾಗಿ ಎಂವಿಎ ತೊರೆಯುವ ಸಮಾಜವಾದಿ ಪಕ್ಷದ ನಿರ್ಧಾರ ಘಟನೆಯ 32 ನೇ ವಾರ್ಷಿಕ ದಿನದಂದು ಬಂದಿದೆ. ನಾರ್ವೇಕರ್ ಧ್ವಂಸದ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದನ್ನು ಮಾಡಿದವರ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಶಿವಸೇನೆ ಸಂಸ್ಥಾಪಕ ಬಾಳ್ ಠಾಕ್ರೆ ಬರೆದಿದ್ದಾರೆ.
ಪೋಸ್ಟ್‌ನಲ್ಲಿ ಉದ್ಧವ್ ಠಾಕ್ರೆ, ಆದಿತ್ಯ ಠಾಕ್ರೆ ಮತ್ತು ನಾರ್ವೇಕರ್ ಅವರ ಚಿತ್ರಗಳನ್ನು ಸಹ ಬಳಸಲಾಗಿತ್ತು. “ಎಂವಿಎಯಲ್ಲಿ ಯಾರಾದರೂ ಅಂತಹ ಭಾಷೆಯಲ್ಲಿ ಮಾತನಾಡಿದರೆ, ಬಿಜೆಪಿ ಮತ್ತು ಅವರ ನಡುವಿನ ವ್ಯತ್ಯಾಸವೇನು? ನಾವು ಅವರೊಂದಿಗೆ ಏಕೆ ಉಳಿಯಬೇಕು? ಎಂದು ಅಜ್ಮಿ ಪ್ರಶ್ನಿಸಿದ್ದಾರೆ.
ಅಬು ಅಜ್ಮಿ ನಂತರ X ನಲ್ಲಿ ಬರೆದಿದ್ದಾರೆ, “ಸಮಾಜವಾದಿ ಪಕ್ಷವು ಎಂದಿಗೂ ಕೋಮುವಾದಿ ಸಿದ್ಧಾಂತದೊಂದಿಗೆ ಉಳಿಯಲು ಸಾಧ್ಯವಿಲ್ಲ, ಆದ್ದರಿಂದ ನಾವು ಮಹಾ ವಿಕಾಸ್ ಅಘಾಡಿಯಿಂದ ನಮ್ಮನ್ನು ಪ್ರತ್ಯೇಕಿಸಿಕೊಳ್ಳುತ್ತೇವೆ.” ಎಂದು ಅಜ್ಮಿ ಹೇಳಿದ್ದಾರೆ.
ಮಹಾರಾಷ್ಟ್ರ ವಿಧಾನಸಭೆಯಲ್ಲಿ ಸಮಾಜವಾದಿ ಪಕ್ಷ ಇಬ್ಬರು ಶಾಸಕರನ್ನು ಹೊಂದಿದೆ. ಎಂವಿಎ ಪಕ್ಷಗಳು ಇಂದು ಪ್ರಮಾಣ ವಚನ ಸ್ವೀಕಾರ ಸಮಾರಂಭದಿಂದ ಹೊರಗುಳಿದಿದ್ದರೂ, ರಾಜ್ಯಾಧ್ಯಕ್ಷ ಅಬು ಅಸಿಮ್ ಅಜ್ಮಿ ಮತ್ತು ಪಕ್ಷದ ನಾಯಕ ರೈಸ್ ಶೇಖ್ ಅವರು ಬಹಿಷ್ಕಾರದ ಕರೆಯನ್ನು ಧಿಕ್ಕರಿಸಿ ಪ್ರಮಾಣ ವಚನ ಸ್ವೀಕರಿಸಿದರು.