ಪಶ್ಚಿಮ ಏಷ್ಯಾ ಬಿಕ್ಕಟ್ಟು! ರಫ್ತಿನ ಮೇಲೆ ಬಿತ್ತು ನೇರ ಹೊಡೆತ

ಬೆಂಗಳೂರು

    ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷ ಮತ್ತು ಮುಂಬರುವ ಅಮೆರಿಕ ಚುನಾವಣೆಗಳು ಕರ್ನಾಟಕದ ರಫ್ತಿನ ಮೇಲೆ ಪರಿಣಾಮ ಬೀರಿವೆ! ಆಟೋಮೊಬೈಲ್ ಉತ್ಪನ್ನಗಳು, ಇಂಜಿನಿಯರಿಂಗ್ ಮತ್ತು ಏರೋಸ್ಪೇಸ್ ಉಪಕರಣಗಳು, ಕಬ್ಬಿಣದ ಉತ್ಪನ್ನಗಳನ್ನು ತಯಾರಿಸುವ ಕಂಪನಿಗಳಿಗೆ ಹಿನ್ನಡೆಯಾಗಿವೆ ಎಂದು ವರದಿಯಾಗಿದೆ. ಇಲ್ಲಿನ ಕೈಗಾರಿಕೋದ್ಯಮಿಗಳ ಪ್ರಕಾರ, ರಷ್ಯಾ ಉಕ್ರೇನ್ ಯುದ್ಧ, ಇಸ್ರೇಲ್-ಪ್ಯಾಲೆಸ್ಟೈನ್ ಮತ್ತು ಇಸ್ರೇಲ್-ಇರಾನ್ ಸಂಘರ್ಷಗಳು ರಾಜ್ಯದ ರಫ್ತಿನ ಮೇಲೆ ಪ್ರಭಾವ ಬೀರಿವೆ. ಆದಾಗ್ಯೂ, ಇಸ್ರೇಲ್‌ಗೆ ರಕ್ಷಣಾ ವಸ್ತುಗಳ ರಫ್ತು ಬಹುಪಟ್ಟು ಹೆಚ್ಚಾಗಿದೆ ಎನ್ನಲಾಗಿದೆ.

   ಪಶ್ಚಿಮ ಏಷ್ಯಾದಲ್ಲಿನ ಬಿಕ್ಕಟ್ಟು ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿಯಿಂದ ಸ್ವೀಡನ್, ಜರ್ಮನಿ ಮತ್ತು ಜೆಕ್ ಗಣರಾಜ್ಯಕ್ಕೆ ಆಟೋಮೊಬೈಲ್ ಘಟಕಗಳ ರಫ್ತಿನ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರಿದೆ ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟದ ಮಾಜಿ ಅಧ್ಯಕ್ಷ ಸಿಆರ್ ಜನಾರ್ದನ ತಿಳಿಸಿರುವುದಾಗಿ ‘ದಿ ನ್ಯೂ ಇಂಡಿಯನ್ ಎಕ್ಸ್​​ಪ್ರೆಸ್’ ವರದಿ ಮಾಡಿದೆ. ಜಾಗತಿಕವಾಗಿ ಏರೋಸ್ಪೇಸ್ ಉದ್ಯಮದಿಂದ ಹೆಚ್ಚು ಬೇಡಿಕೆಯಿರುವ ಕೈಗಾರಿಕೋದ್ಯಮಿಯೊಬ್ಬರ ಮೇಲೆ ಪಶ್ಚಿಮ ಏಷ್ಯಾ ಬಿಕ್ಕಟ್ಟು ಎಷ್ಟು ಕೆಟ್ಟದಾಗಿ ಪರಿಣಾಮ ಬೀರಿತು ಎಂದರೆ, ಅವರು ತಮ್ಮ ವ್ಯವಹಾರವನ್ನೇ ರಕ್ಷಣಾ ಕ್ಷೇತ್ರಕ್ಕೆ ಬದಲಾಯಿಸಿದ್ದಾರೆ ಎಂದು ಸಿಆರ್ ಜನಾರ್ದನ ಹೇಳಿದ್ದಾರೆ.

   ನಾವು ಯುಎಸ್, ಯುರೋಪ್ ಮತ್ತು ಸ್ವಿಟ್ಜರ್‌ಲ್ಯಾಂಡ್‌ನ ಸಾರಿಗೆ ವ್ಯವಸ್ಥೆಗಳಿಗೆ ಏರೋಸ್ಪೇಸ್ ಹೈಡ್ರಾಲಿಕ್ ಉಪಕರಣಗಳು ಮತ್ತು ಯಾಂತ್ರಿಕ ಘಟಕಗಳನ್ನು ಪೂರೈಸುತ್ತೇವೆ. ಪಶ್ಚಿಮ ಏಷ್ಯಾದ ಬಿಕ್ಕಟ್ಟಿನಿಂದಾಗಿ ಸಮುದ್ರದ ಮೂಲಕ ಸಾಗಣೆ ವೆಚ್ಚ ಹೆಚ್ಚಾಗಿದೆ. ಆರ್ಡರ್‌ಗಳ ಪ್ರಮಾಣವು ಶೇ 30 ರಿಂದ 40 ರಷ್ಟು ಕಡಿಮೆಯಾಗಿದೆ ಎಂದು ಪೀಣ್ಯದ ಅಕ್ಯುಟೆಕ್ ಎಂಟರ್‌ಪ್ರೈಸಸ್‌ನ ಎಂಜೆ ಪ್ರಸಾದ್ ತಿಳಿಸಿರುವುದಾಗಿ ವರದಿ ಉಲ್ಲೇಖಿಸಿದೆ. 

   ಕಳೆದ ವಾರ ನಮ್ಮ ವಿದೇಶಿ ವಿನಿಮಯ ಸಂಗ್ರಹವು 3.5 ಶತಕೋಟಿ ಡಾಲರ್​​​ಗಳಷ್ಟು ಕಡಿಮೆಯಾಗಿದೆ. ಇದು ರಫ್ತು ವಹಿವಾಟಿನ ಕುಸಿತದ ಸೂಚನೆಯಾಗಿದೆ. ವಾರಕ್ಕೆ 701 ಶತಕೋಟಿ ಡಾಲರ್​​ನಿಂದ ಇದು ಕುಸಿಯುತ್ತಾ ಸಾಗಿದೆ. ಸಾಮಾನ್ಯವಾಗಿ ವಿದೇಶಿ ವಿನಿಮಯ ಸಂಗ್ರಹ ವಾರದಿಂದ ವಾರ ಬೆಳವಣಿಗೆ ಕಾಣುತ್ತದೆ. ಆದರೆ ಈಗ ಪರಿಸ್ಥಿತಿ ಭಿನ್ನವಾಗಿದೆ ಎಂದು ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟದ (ಎಫ್‌ಐಸಿಸಿಐ) ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸದಸ್ಯ ಡಾ ಜಾಕೋಬ್ ಕ್ರಾಸ್ತಾ ಹೇಳಿದ್ದಾರೆ.

  ‘ನಾವು ತೈಲ ಮತ್ತು ನೈಸರ್ಗಿಕ ಅನಿಲ ಉದ್ಯಮದಲ್ಲಿ ಪಂಪ್‌ಗಳಿಗೆ ಬಳಸುವ ಕಬ್ಬಿಣದ ಉತ್ಪನ್ನವನ್ನು ಉತ್ತರ ಅಮೆರಿಕ ಮತ್ತು ಯುರೋಪ್‌ಗೆ ರಫ್ತು ಮಾಡುತ್ತೇವೆ. ಈ ವಸ್ತುಗಳು ಸೂಯೆಜ್ ಕಾಲುವೆಯ ಮೂಲಕ ಹಡಗುಗಳಲ್ಲಿ ರಫ್ತಾಗುತ್ತವೆ. ಪಶ್ಚಿಮ ಏಷ್ಯಾದ ಬಿಕ್ಕಟ್ಟು ನೇರವಾಗಿ ಸರಕುಗಳ ಸಾಗಣೆಯ ಮೇಲೆ ಪರಿಣಾಮ ಬೀರಿದೆ. ಸರಕು ಸಾಗಾಟ ನಿಧಾನಗೊಂಡಿರುವುದು ರಫ್ತಿನ ಮೇಲೆ ಪರಿಣಾಮ ಬೀರಿದೆ’ ಎಂದು ಬೆಳಗಾವಿ ಬೆಳಗಾವಿಯ ಫೆರೋಕಾಸ್ಟ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಸಚಿನ್ ಸಬ್ನಿಸ್ ತಿಳಿಸಿದ್ದಾರೆ. 

   ಪ್ರತಿ ತಿಂಗಳು 100 ಟನ್‌ಗಳಷ್ಟು ಉತ್ಪನ್ನಗಳು ರಫ್ತಾದರೆ, ಕಳೆದ ನಾಲ್ಕು ತಿಂಗಳಲ್ಲಿ ಕೇವಲ 60 ಟನ್‌ಗಳಿಗೆ ಇಳಿಕೆಯಾಗಿದೆ. ಮುಂದಿನ ತಿಂಗಳು ನಡೆಯಲಿರುವ ಯುಎಸ್ ಚುನಾವಣೆಗಳು ಆ ದೇಶದಿಂದ ರಫ್ತು ಆರ್ಡರ್​​​ಗಳನ್ನು ಕಡಿಮೆ ಮಾಡಿದೆ. ಇನ್ನೊಂದು ಸಮಸ್ಯೆ ಎಂದರೆ, ಕಂಟೈನರ್‌ಗಳ ಕೊರತೆ ಎಂದು ಸಚಿನ್ ಸಬ್ನಿಸ್ ಹೇಳಿದ್ದಾರೆ.

   ನಾವು ಆಟೋಮೊಬೈಲ್ ಮತ್ತು ಹೈಡ್ರಾಲಿಕ್ ಘಟಕಗಳನ್ನು ಯುಎಸ್‌ನಲ್ಲಿ ವಿತರಿಸುವ ಕಂಪನಿಗೆ ರಫ್ತು ಮಾಡುತ್ತೇವೆ. ನನ್ನ ವ್ಯವಹಾರದಲ್ಲಿ ಶೇ 30 ರಷ್ಟು ಕುಸಿತವಾಗಿದೆ ಎಂದು ಬೆಳಗಾವಿಯ ಮಹಾಲಕ್ಷ್ಮಿ ಇಂಜಿನಿಯರಿಂಗ್‌ನ ಉದಯ್ ಜೋಶಿ ತಿಳಿಸಿದ್ದಾರೆ. ನಮ್ಮ ವ್ಯವಹಾರಕ್ಕೆ ಇರಾನ್-ಇಸ್ರೇಲ್ ಬಿಕ್ಕಟ್ಟು ಪರಿಣಾಮ ಬೀರುವುದಿಲ್ಲ. ಆದಾಗ್ಯೂ, ಭಾರತವು ರಷ್ಯಾದಿಂದ ಪೆಟ್ರೋಲಿಯಂ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವುದರಿಂದ ರಷ್ಯಾ-ಉಕ್ರೇನ್ ಯುದ್ಧವು ವ್ಯವಹಾರದ ಮೇಲೆ ಪರಿಣಾಮ ಬೀರಿದೆ ಎಂದು ಎಲ್‌ಪಿಜಿ ವ್ಯವಹಾರದಲ್ಲಿರುವ ಎಂಡಿ ಬಾಲಕೃಷ್ಣನ್ ತಿಳಿಸಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.

 

Recent Articles

spot_img

Related Stories

Share via
Copy link
Powered by Social Snap