ಮಾ.11 : ಬೆಂಗಳೂರು-ಮೈಸೂರು ಹೆದ್ದಾರಿ ಪ್ರಧಾನಿ ಲೋಕಾರ್ಪಣೆ

ಬೆಂಗಳೂರು :

      ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಮಾರ್ಚ್ 11 ರಂದು ಪ್ರಧಾನಿ ನರೇಂದ್ರಮೋದಿ ಅವರಿಂದ ಲೋಕಾರ್ಪಣೆಯಾಗಲಿದೆ. ವಿಕಾಸಸೌಧದಲ್ಲಿಂದು ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರ ಜತೆ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಡಾ.ಅಶ್ವಥ್ಥನಾರಾಯಣ ಈ ವಿಷಯ ತಿಳಿಸಿದರು.

     ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಬಹುತೇಕ ಪೂರ್ಣಗೊಂಡಿದ್ದು ಮಾರ್ಚ್ 11 ರಂದು ಮಂಡ್ಯ ಜಿಲ್ಲೆಯ ಮದ್ದೂರಿನ ಬಳಿ ನಡೆಯುವ ಸಮಾರಂಭದಲ್ಲಿ ಪ್ರಧಾನಿ ನರೇಂದ್ರಮೋದಿ ಅವರು ಉದ್ಘಾಟಿಸಲಿದ್ದಾರೆ ಎಂದು ವಿವರಿಸಿದರು.

     ಹೆದ್ದಾರಿಗೆ ಅಂಟಿಕೊಂಡಂತೆ ಆರೋಗ್ಯ ನಗರ ಆರಂಭವಾಗಲಿದ್ದು ಇದಕ್ಕೆ ಬೇಕಾದ ಪೂರ್ವಭಾವಿ ಪ್ರಕ್ರಿಯೆ ಪೂರ್ಣಗೊಂಡಿದ್ದು ಪ್ರಧಾನಿ ನರೇಂದ್ರಮೋದಿಯವರು ಇದಕ್ಕೆ ಅಡಿಗಲ್ಲು ಹಾಕಲಿದ್ದಾರೆ. ಇದೇ ರೀತಿ ಆರೋಗ್ಯ ವಿಶ್ವವಿದ್ಯಾನಿಲಯವೂ ನಿರ್ಮಾಣಗೊಳ್ಳುತ್ತಿದ್ದು ಇದಕ್ಕೆ ಅಗತ್ಯವಾದ ಪ್ರಕ್ರಿಯೆಗಳು ಬಹುತೇಕ ಪೂರ್ಣಗೊಂಡಿವೆ. ಆರೋಗ್ಯ ನಗರ ಮತ್ತು ಆರೋಗ್ಯ ವಿಶ್ವವಿದ್ಯಾನಿಲಯಕ್ಕೆ ಅಗತ್ಯವಾದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಯಿಂದ ಹಿಡಿದು ಯೋಜನೆಗೆ ಅಗತ್ಯವಾದ ಹಣಕಾಸಿನ ನೆರವನ್ನು ಒದಗಿಸುವ ತನಕ ಎಲ್ಲ ಕಾರ್ಯಗಳು ಪೂರ್ಣಗೊಂಡಿವೆ ಎಂದು ಇದೇ ಸಂದರ್ಭದಲ್ಲಿ ಅವರು ವಿವರಿಸಿದರು.

     ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಏಕಕಾಲಕ್ಕೆ ಹಲವು ಪ್ರಯೋಜನಗಳನ್ನು ಒದಗಿಸಲಿದ್ದು ಆಯಾ ಭಾಗಗಳ ಜನರಿಗೆ ಅಲ್ಲಿಯೇ ಅಗತ್ಯವಾದ ಸೌಕರ್ಯಗಳು ಲಭ್ಯವಾಗಲಿವೆ. ರಾಜ್ಯದ ಎಲ್ಲ ಪ್ರದೇಶಗಳಲ್ಲೂ ಆರ್ಥಿಕ ಚಟುವಟಿಕೆಗಳು ಬಲಗೊಳ್ಳಬೇಕು ಮತ್ತು ಅಲ್ಲಿಯೇ ಜನರಿಗೆ ಅಗತ್ಯವಾದ ಎಲ್ಲ ಸೌಲಭ್ಯಗಳು ಸಿಗಬೇಕು. ಉದ್ಯೋಗಾವಕಾಶಗಳು ಸೃಷ್ಟಿಯಾಗಬೇಕು ಎಂಬುದು ನಮ್ಮ ನಿಲುವು. ಬೆಂಗಳೂರು-ಮೈಸೂರು ನಡುವಣ ಅಂತರವನ್ನು ತೊಂಭತ್ತು ನಿಮಿಷಗಳಲ್ಲಿ ಕ್ರಮಿಸಬಹುದಾದ ದಶಪಥ ಯೋಜನೆ ರಾಜ್ಯದ ಆರ್ಥಿಕ ಚಟುವಟಿಕೆಗಳಿಗೆ ಮೈಲುಗಲ್ಲಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link