ಚನ್ನಪಟ್ಟಣ ಹಾಗೂ ಸಂಡೂರು : ಇಬ್ಬರೂ ಅಭ್ಯರ್ಥಿಗಳ ಭವಿಷ್ಯ ಬದಲಿಸುವ ಚುನಾವಣೆ….!

ಬೆಂಗಳೂರು

   ಚನ್ನಪಟ್ಟಣ ಉಪಚುನಾವಣೆ ಅಖಾಡದಲ್ಲಿ ಬುಧವಾರ ಮಹತ್ವದ ಬೆಳವಣಿಗೆಯಾಗಿದ್ದು, ಮಾಜಿ ಸಚಿವ ಹಾಗೂ ಐದು ಬಾರಿ ಶಾಸಕರಾಗಿದ್ದ ಸಿಪಿ ಯೋಗೇಶ್ವರ್ ಬಿಜೆಪಿಗೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿದ್ದಾರೆ. ಸಂಜೆಯ ವೇಳೆಗೆ, ಎಐಸಿಸಿ ಚನ್ನಪಟ್ಟಣದಿಂದ ಅವರ ಉಮೇದುವಾರಿಕೆಯನ್ನು ಘೋಷಿಸಿದೆ. ಮತ್ತೊಂದೆಡೆ, ಬಳ್ಳಾರಿಯ ಸಂಸದ ಇ. ತುಕಾರಾಂ ಅವರ ಪತ್ನಿ ಇ ಅನ್ನಪೂರ್ಣ ಅವರು ಸಂಡೂರು (ಎಸ್‌ಟಿ) ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ಘೋಷಣೆ ಮಾಡಲಾಗಿದೆ. 

   ಅನ್ನಪೂರ್ಣ ಅವರು ಮೊದಲ ಬಾರಿಗೆ ಚುನಾವಣೆ ಸ್ಪರ್ಧಿಸುತ್ತಿದ್ದಾರೆ. ಯೋಗೇಶ್ವರ್ ಆರನೇ ಬಾರಿಗೆ ವಿಧಾನಸಭೆ ಪ್ರವೇಶಿಸಲು ಸ್ಪರ್ಧಿಸಿದ್ದಾರೆ. ಯೋಗೇಶ್ವರ್ ಅವರು ಇಂದು ನಾಮಪತ್ರ ಸಲ್ಲಿಸಲಿದ್ದಾರೆ.

   ಶಿಗ್ಗಾಂವಿ ಕ್ಷೇತ್ರದ ಅಭ್ಯರ್ಥಿಯನ್ನು ಕಾಂಗ್ರೆಸ್ ಇನ್ನೂ ಘೋಷಣೆ ಮಾಡಿಲ್ಲ. ನಾಮಪತ್ರ ಸಲ್ಲಿಸಲು ಅಕ್ಟೋಬರ್ 25 ಕೊನೆಯ ದಿನವಾಗಿದೆ. ಈ ಕ್ಷೇತ್ರದಲ್ಲಿ ವೀರಶೈವ ಲಿಂಗಾಯತ ಮತ್ತು ಮುಸ್ಲಿಂ ಮುಖಂಡರು ಆಯಾ ಸಮುದಾಯಕ್ಕೆ ಸೇರಿದ ಅಭ್ಯರ್ಥಿಗೆ ಟಿಕೆಟ್ ನೀಡಬೇಕೆಂಬ ಬೇಡಿಕೆ ಇಟ್ಟಿದ್ದು ಆಯ್ಕೆ ಕಗ್ಗಂಟಾಗಿದೆ. ಇಂದು ಅಭ್ಯರ್ಥಿಯನ್ನು ಘೋಷಿಸುವ ನಿರೀಕ್ಷೆಯಿದೆ.

  ಶಿಗ್ಗಾಂವಿ, ಸಂಡೂರು, ಮತ್ತು ಚನ್ನಪಟ್ಟಣ ವಿಧಾನಸಭೆ ಕ್ಷೇತ್ರಗಳು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ತುಕಾರಾಂ ಮತ್ತು ಜೆಡಿಎಸ್ ನಾಯಕ ಹೆಚ್​​ಡಿ ಕುಮಾರಸ್ವಾಮಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ರಾಜೀನಾಮೆ ನೀಡಿದ್ದರಿಂದ ತೆರವಾದ ಕ್ಷೇತ್ರಗಳಾಗಿವೆ.ನವೆಂಬರ್ 13 ರಂದು ಚುನಾವಣೆ ನಡೆಯಲಿದ್ದು, ನವೆಂಬರ್ 23 ರಂದು ಫಲಿತಾಂಶ ಪ್ರಕಟವಾಗಲಿದೆ.

   ಅತ್ತ ಬಿಜೆಪಿ-ಜೆಡಿಎಸ್​​ನಲ್ಲಿ ಚನ್ನಪಟ್ಟಣ ಟಿಕೆಟ್ ಗೊಂದಲ ಮುಂದುವರಿಯುತ್ತಿದ್ದಂತೆಯೇ ಕಾಂಗ್ರೆಸ್​​ನಲ್ಲಿ ತೆರೆ ಹಿಂದಿನ ತಂತ್ರಗಾರಿಕೆ ನಡೆಯುತ್ತಿತ್ತು. ಅದು ಯಾವಾಗ ಸಫಲ ಆಯಿತೋ, ಯೋಗೇಶ್ವರ್ ಆಪರೇಷನ್ ಪ್ರಸ್ತಾಪ ಮುಂದೆ ಬಂತು. ಕಳೆದ ಮೂರ್ನಾಲ್ಕು ದಿನಗಳಿಂದ ಸೈಲೆಂಟ್ ಆಗಿಯೇ ನಡೆಯುತ್ತಿದ್ದ ಈ ಕಾರ್ಯಾಚರಣೆ ಬುಧವಾರ ಬೇರೆಯದ್ದೇ ಸ್ವರೂಪ‌ ಪಡೆಯಿತು. ಅದರಂತೆ ಮೈಸೂರಲ್ಲೇ ಇದ್ದ ಸಿಎಂ ಸಿದ್ದರಾಮಯ್ಯ, ಏಕದಂ ಬೆಂಗಳೂರಿಗೆ ಬಂದರು. ತಡರಾತ್ರಿವರೆಗೂ ಕಾವೇರಿ ನಿವಾಸದಲ್ಲಿ ಆಪ್ತ ಸಚಿವರ ಜೊತೆ ಮಹತ್ವದ ಚರ್ಚೆ ನಡೆಸಿದರು. ಅದರಂತೆ ಬುಧವಾರ ಬೆಳಗ್ಗೆಯೇ ಡಿಸಿಎಂ ಡಿಕೆ ಶಿವಕುಮಾರ್ ನಿವಾಸದಲ್ಲಿ ಸಿಪಿ ಯೋಗೇಶ್ವರ್ ಪ್ರತ್ಯಕ್ಷರಾದರು. ಒಟ್ಟಿಗೆ ಮನೆಯಿಂದ ಹೊರಬಂದು ಒಂದೇ ಕಾರಲ್ಲಿ ಸಿಎಂ ಸಿದ್ದರಾಮಯ್ಯ ನಿವಾಸಕ್ಕೆ ಹೋದರು. ಅಲ್ಲಿ ಸಿಎಂ ಜೊತೆ ಮುಖಾಮುಖಿ ಭೇಟಿಯಾಗಿ ಪಕ್ಷ ಸೇರ್ಪಡೆ ಕುರಿತು ಚರ್ಚೆ ನಡೆಸಿದರು. ನಂತರ ಮಹತ್ವದ ಬೆಳವಣಿಗೆ ನಡೆದೇ ಬಿಟ್ಟಿತು.

Recent Articles

spot_img

Related Stories

Share via
Copy link