ಚಿಕ್ಕಬಳ್ಳಾಪುರ:
ಅಧಿಕಾರಕ್ಕಾಗಿ ಅವಕಾಶವಾದಿ ರಾಜಕಾರಣ ಮಾಡಿದ್ದ ಬಿಜೆಪಿ ಮತ್ತು ಜೆಡಿಎಸ್ ‘ಹನಿಮೂನ್’ ಮುಕ್ತಾಯ ಹಂತಕ್ಕೆ ಬಂದಿದೆ. ನಾನೊಂದು ತೀರ-ನೀನೊಂದು ತೀರದಂತೆ ನಡೆದುಕೊಳ್ಳುತ್ತಿವೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಅಭಿಪ್ರಾಯಪಟ್ಟರು.
ನಗರದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ನಿರ್ಮಾಣವಾಗಿರುವ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದ ಕಟ್ಟಡವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು. ಎರಡು ಪಕ್ಷಗಳು ಮೈತ್ರಿ ಮಾಡಿಕೊಂಡಿದ್ದರೂ ಪ್ರತ್ಯೇಕ ಪ್ರತಿಭಟನೆಗಳನ್ನು ಕೈಗೊಂಡಿವೆ.
ಬಿಜೆಪಿಯ ಜನಕ್ರೋಶ ಯಾತ್ರೆ ಮತ್ತು ಜೆಡಿಎಸ್‌ನ ಪೋಸ್ಟರ್ ಅಭಿಯಾನವು ಮೈತ್ರಿಕೂಟದಲ್ಲಿ ಎಲ್ಲವೂ ಸರಿಯಿಲ್ಲ ಎಂದು ಸ್ಪಷ್ಟವಾಗಿ ಸೂಚಿಸುತ್ತದೆ. ಕೇವಲ ಅಧಿಕಾರಕ್ಕಾಗಿ ಮೈತ್ರಿ ಮಾಡಿಕೊಳ್ಳಲಾಯಿತು ಮತ್ತು ಈಗ ಅದು ಬಿರುಕು ಬಿಡುತ್ತಿದೆ.
ಜೆಡಿಎಸ್ ಕಾರ್ಯಕರ್ತರು ಗೊಂದಲಕ್ಕೊಳಗಾಗಿದ್ದಾರೆ. ಬಿಜೆಪಿ ನಿಧಾನವಾಗಿ ಜೆಡಿಎಸ್‌ನಿಂದ ದೂರ ಸರಿಯಲು ಪ್ರಯತ್ನಿಸುತ್ತಿದೆ” ಎಂದು ಅವರು ಗುರುವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು. ತತ್ವ-ಸಿದ್ಧಾಂತದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಉತ್ತರ ಮತ್ತು ದಕ್ಷಿಣ ಧೃವಗಳಾಗಿವೆ. ಕೇವಲ ಅಧಿಕಾರಕ್ಕಾಗಿ ಮಾಡಿಕೊಂಡಿದ್ದ ಹೊಂದಾಣಿಕೆ ಕೊನೆಯಾಗುತ್ತಿದೆ. ಬಿಜೆಪಿಗೆ ಕುಮಾರಸ್ವಾಮಿ ಅವರನ್ನು ಕಂಡರೆ ಭಯ. ಅವರ ಜತೆ ಹೊಂದಾಣಿಕೆ ಮುಂದುವರಿಸಿದರೆ ಮುಂದೆ ಎಲ್ಲವನ್ನು ಅವರೇ ಕಬಳಿಸುತ್ತಾರೆ ಎಂಬ ಭಯ ಕಾಡುತ್ತಿದೆ.
ಜೆಡಿಎಸ್ ಪಕ್ಷವನ್ನು ದೂರವಿಟ್ಟು ಹೋರಾಟ ಮಾಡುತ್ತಿವೆ. ಬಂದ ದಾರಿಗೆ ಸುಂಕವಿಲ್ಲ ಎಂದು ಜೆಡಿಎಸ್ ಕೂಡ ಪ್ರತ್ಯೇಕವಾಗಿ ಹೋರಾಟ ಹಮ್ಮಿಕೊಳ್ಳುತ್ತಿದೆ ಎಂದರು.ಅಭಿವೃದ್ಧಿ ಕಾರ್ಯಗಳು ಮತ್ತು ಖಾತರಿ ಯೋಜನೆಗಳಿಂದಾಗಿ ರಾಜ್ಯದ ಜನರು ಕಾಂಗ್ರೆಸ್ ಸರ್ಕಾರದ ಬಗ್ಗೆ ಸಂತೋಷವಾಗಿದ್ದಾರೆ ಎಂದು ಹೇಳಿದರು. “ಅಭಿವೃದ್ಧಿ ಕಾರ್ಯಗಳ ಬಗ್ಗೆ ಸರ್ಕಾರವನ್ನು ದೂಷಿಸಲು ವಿರೋಧ ಪಕ್ಷಕ್ಕೆ ಯಾವುದೇ ಅಧಿಕಾರವಿಲ್ಲ ಎಂದು ಅವರು ಹೇಳಿದರು.
