ಹುಬ್ಬಳ್ಳಿ ಬಾಲಕಿ ಹತ್ಯೆ ಕೇಸ್‌ ಸಹ ಸಿಐಡಿ ತನಿಖೆಗೆ…!

ಬೆಂಗಳೂರು :

    ಹುಬ್ಬಳ್ಳಿಯಲ್ಲಿ 5 ವರ್ಷದ ಬಾಲಕಿಯ ಹತ್ಯೆ ಮಾಡಿದ  ಪ್ರಕರಣವನ್ನು ಸಿಐಡಿ ತನಿಖೆಗೆ   ನೀಡಿ ರಾಜ್ಯ ಸರ್ಕಾರ  ಆದೇಶ ಹೊರಡಿಸಿದೆ. ಹುಬ್ಬಳ್ಳಿಯಲ್ಲಿ 5 ವರ್ಷದ ಬಾಲಕಿಯನ್ನು ಬಿಹಾರ ಮೂಲದ ರಿತೇಶ್ ಎಂಬಾತ ಹೊತ್ತೊಯ್ದು ಅತ್ಯಾಚಾರಗೈದು ಹತ್ಯೆಗೈದಿದ್ದ. ನಂತರ ಈತನನ್ನು ಪೊಲೀಸರು ಎನ್‌ಕೌಂಟರ್‌   ಮಾಡಿದ್ದರು. ಈ ಎನ್‌ಕೌಂಟರ್ ಪ್ರಕರಣವನ್ನು ರಾಜ್ಯ ಸರ್ಕಾರವು ಸಿಐಡಿ ತನಿಖೆಗೆ ವಹಿಸಿ ಆದೇಶಿಸಿತ್ತು. ಇದೀಗ ಬಾಲಕಿ ಹತ್ಯೆ ಪ್ರಕರಣವನ್ನೂ ಸಿಐಡಿ ತನಿಖೆಗೆ ವರ್ಗಾಯಿಸಿ ಆದೇಶ ಹೊರಡಿಸಿದೆ.

    ಹುಬ್ಬಳ್ಳಿಯ 5 ವರ್ಷದ ಬಾಲಕಿ ಅತ್ಯಾಚಾರ- ಹತ್ಯೆಯಿಂದ ಇಡೀ ರಾಜ್ಯವೇ ಬೆಚ್ಚಿ ಬಿದ್ದಿತ್ತು. ವಲಸಿಗ ಕಾರ್ಮಿಕರಿಂದ ರಾಜ್ಯದಲ್ಲಿ ಅಪರಾಧಗಳು ಹೆಚ್ಚುತ್ತಿವೆ ಎಂಂಬ ಅಂಶದತ್ತ ಗಮನ ಸೆಳೆದಿತ್ತು. ಈ ಪ್ರಕರಣದ ಆರೋಪಿ ಬಿಹಾರ ಮೂಲದ ರಿತೇಶ್ ಬಂಧನಕ್ಕೆ ತೆರಳಿದ್ದ ವೇಳೆಯಲ್ಲಿ ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದ. ಈ ವೇಳೆಯಲ್ಲಿ ಪೊಲೀಸರು ಆತ್ಮರಕ್ಷಣೆಗಾಗಿ ಆರೋಪಿ ರಿತೇಶ್‌ಗೆ ಗುಂಡೇಟು ನೀಡಿದ್ದರು. ಪಿಎಸ್ಐ ಅನ್ನಪೂರ್ಣ ಅವರು ಫೈರಿಂಗ್ ಮಾಡಿದ ಗುಂಡು, ಆರೋಪಿ ರಿತೇಶ್ ಎದೆಗೆ ಬಿದ್ದಿತ್ತು. ಆರೋಪಿ ರಿತೇಶ್ ಸಾವನ್ನಪ್ಪಿದ್ದ.

    ಇದು ಪೊಲೀಸರಿಂದ ನಡೆದ ಕೊಲೆ ಎಂದು ಮಾನವ ಹಕ್ಕು ಸಂಘಟನೆಗಳು ತಗಾದೆ ತೆಗೆದಿದ್ದವಲ್ಲದೆ ನ್ಯಾಯಾಂಗ ಪ್ರಕರಣ ದಾಖಲಿಸಿದ್ದವು. ನಂತರ ಈ ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ವಹಿಸಿ ಆದೇಶಿಸಿತ್ತು.