ಕೆರೆ ತುಂಬಿದ್ದು ಪಕ್ಷಗಳ ಶ್ರಮದಿಂದಲ್ಲ

ತುಮಕೂರು:

ಶಿರಾ ತಾಲ್ಲೂಕಿನ ಮದಲೂರು ಕೆರೆ ತುಂಬಿ ಕೋಡಿ ಬಿದ್ದಿರುವುದು ವರುಣನ ಕೃಪೆಯಿಂದಲೆ ಹೊರತು, ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳ ಶ್ರಮದಿಂದಲ್ಲ ಎಂದು ಭಾರತ ಕಮ್ಯೂನಿಸ್ಟ್ ಪಕ್ಷ ಸಿಪಿಐ ಜಿಲ್ಲಾ ಕಾರ್ಯದರ್ಶಿ ಗಿರೀಶ್ ಮಾರ್ಮಿಕವಾಗಿ ನುಡಿದರು.

ಮದಲೂರು ಕೆರೆಗೆ ಪಕ್ಷದ ಕಾರ್ಯಕರ್ತರೊಂದಿಗೆ ಭೇಟಿ ನೀಡಿ, ಬಾಗಿನ ಅರ್ಪಿಸಿ ಮಾತನಾಡಿದ ಅವರು, ಶಿರಾ ಉಪಚುನಾವಣೆ ಸೇರಿದಂತೆ ಸದಾಕಾಲ ಸುದ್ದಿಯ ಕೇಂದ್ರವಾಗಿದ್ದ, ಮದಲೂರು ಕೆರೆ ನಿಜಕ್ಕೂ ತುಂಬಿ ಕೋಡಿ ಬಿದ್ದಿರುವುದು ತಮಿಳುನಾಡಿನಲ್ಲಿ ಪದೇ ಪದೇ ಉಂಟಾದ ವಾಯುಭಾರ ಕುಸಿತದ ಪರಿಣಾಮ ಬಂದ ಮಳೆಯಿಂದಾಗಿ ಎಂಬುದು ಜನ ಸಾಮಾನ್ಯನಿಗೂ ತಿಳಿದಿರುವ ಸಾಮಾನ್ಯ ಸಂಗತಿ. ಆದರೆ ಸತ್ಯವನ್ನು ಮರೆಮಾಚಿ ಬಾಗಿನ ಅರ್ಪಿಸುವುದರಲ್ಲೆ ಸಂತಸಪಡುತ್ತಿರುವ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳ ಮುಖಂಡರ ನಡೆ ಅಕ್ಷಮ್ಯ ಎಂದರು.

ರಾಜ್ಯಾದ್ಯಂತ ವಾಯುಭಾರ ಕುಸಿತದಿಂದ ಒಂದು ವಾರಕ್ಕೂ ಹೆಚ್ಚು ಕಾಲ ಸುರಿದ ಮಳೆಯಿಂದಾಗಿ ರಾಜ್ಯದ ಬಹುತೇಕ ಕೆರೆ-ಕಟ್ಟೆ ನದಿಗಳೆಲ್ಲಾ ತುಂಬಿ ಹರಿದಿರುವುದು ನಿತ್ಯ ಸುದ್ದಿಯಾಗಿದೆ. ಇದರಂತೆ ಮದಲೂರು ಕೆರೆ ಕೂಡ ಕೋಡಿ ಬಿದ್ದಿರುವುದು ಆಶ್ಚರ್ಯವೇನಲ್ಲ ಎಂದು ಗಿರೀಶ್ ಅಭಿಪ್ರಾಯಪಟ್ಟರು.

ಸಿರಾ ಜೆಡಿಎಸ್ ಶಾಸಕ ಬಿ.ಸತ್ಯನಾರಾಯಣರ ನಿಧನದ ಹಿನ್ನೆಲೆಯಲ್ಲಿ ನಡೆದ ಉಪಚುನಾವಣೆ ವೇಳೆ ಮದಲೂರು ಕೆರೆಗೆ ನೀರು ತುಂಬಿಸುವ ಕುರಿತು ರಾಜಕೀಯ ಪಕ್ಷಗಳು ಜಿದ್ದಾಜಿದ್ದಿಗೆ ಬಿದ್ದಂತೆ ಪರಸ್ಪರ ಆರೋಪ, ಪತ್ಯಾರೋಪ ಮಾಡಿದ್ದು ಈಗಾಗಲೇ ತಿಳಿದಿರುವ ಸಂಗತಿ. ಉಪಚುನಾವಣೆ ನಂತರ ಕೆರೆಗೆ ನೀರು ಹರಿಸಲು ಸಾಧ್ಯವೇ ಇಲ್ಲವೆಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ನೀಡಿದ ಹೇಳಿಕೆ ರಾಜ್ಯಮಟ್ಟದಲ್ಲಿ ಸುದ್ದಿಯಾಗಿ ಸಿರಾ ಬಿಜೆಪಿ ಶಾಸಕ ರಾಜೇಶ್‍ಗೌಡ ಹಾಗೂ ರಾಜ್ಯ ಬಿಜೆಪಿ ಸರ್ಕಾರ ಮುಜುಗರ ಅನುಭವಿಸುವಂತಾಯಿತು ಎಂದರು.

ರೈತರಾದ ರಾಮಾಂಜಿನಪ್ಪ ಮದಲೂರು, ವೀರಣ್ಣ ತಿಮ್ಮಸಾಗರ, ತಿಮ್ಮರಾಜು ಹುಳಿಗೆರೆ, ಲೇಪಾಕ್ಷಿಗೌಡ ಮದಲೂರು, ತಿಮ್ಮಣ್ಣ   ಮದಲೂರು, ನಾಗಣ್ಣ ಮದಲೂರು, ಇವರುಗಳನ್ನು ಸನ್ಮಾನಿಸಲಾಯಿತು. ಎ.ಐ.ಕೆ.ಎಸ್.ನ ಪ್ರಧಾನ ಕಾರ್ಯದರ್ಶಿ ಗುರುಸಿದ್ದಪ್ಪ, ಪ್ರೇಮ್‍ಕುಮಾರ್, ಸಿಪಿಐ ಮುಖಂಡರಾದ ವಸಂತರಾಜು, ಗೋವಿಂದರಾಜು, ಲೋಕೇಶ್, ರಂಗನಾಥಪ್ಪ, ಲಿಂಗಪ್ಪ ಲಕ್ಕೋನಹಳ್ಳಿ, ತಾಲ್ಲೂಕು ಕಾರ್ಯದರ್ಶಿ ಭೂತರಾಜು ಮತ್ತಿತರರು ಉಪಸ್ಥಿತರಿದ್ದರು.

ಶ್ವೇತ ಪತ್ರ ಹೊರಡಿಸಲಿ
ಮದಲೂರು ಕೆರೆ ತುಂಬಿಸಿದ ಕೀರ್ತಿ ಪಡೆಯಲು ಬಾಗಿನ ಅರ್ಪಿಸುವ ನಾಟವಾಡುತ್ತಿರುವ ಹಾಲಿ, ಮಾಜಿ, ಶಾಸಕರು, ಸಚಿವರು ಎಲ್ಲಾ ರಾಜಕೀಯ ಪಕ್ಷಗಳ ರಾಜಕೀಯ ಮುಖಂಡರು ಹಾಗೂ ಧಾರ್ಮಿಕ ಮುಖಂಡರು ಮದಲೂರು ಕೆರೆ ತುಂಬಿದ್ದು ಹೇಗೆ ಎಂಬುದರ ಬಗ್ಗೆ ಆತ್ಮಾವಲೋಕನ ಮಾಡಿಕೊಂಡು ಶ್ವೇತ ಪತ್ರ ಹೊರಡಿಸಲು ಸರ್ಕಾರವನ್ನು ಒತ್ತಾಯಿಸಲಿ. ಮೊದಲು ಮದಲೂರು ಕೆರೆಗೆ ಹೇಮಾವತಿ ನೀರನ್ನು ಕಾನೂನುಬದ್ದವಾಗಿ ನಿಗದಿಪಡಿಸಲಾಗಿದೆಯೆ ಎಂಬುದನ್ನು ಮೂರು ಪಕ್ಷಗಳ ನಾಯಕರು ಸ್ಪಷ್ಟಪಡಿಸಲಿ ಎಂದು ಗಿರೀಶ್ ಹೇಳಿದ್ದಾರೆ.

 

24 ಟಿಎಂಸಿ ನೀರು ಈವರೆಗೂ ಬಂದಿಲ್ಲ

ಜಿಲ್ಲೆಗೆ ನಿಗದಿಯಾಗಿರುವ 24 ಟಿಎಂಸಿ ಹೇಮಾವತಿ ನೀರು ಈವರೆಗೆ ಯಾವ ವರ್ಷವೂ ಸಂಪೂರ್ಣವಾಗಿ ಹರಿದಿಲ್ಲ ಎಂಬುದು ಬಹಿರಂಗ ಸತ್ಯ. ಈ ಕುರಿತು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳು ಚಕಾರವೆತ್ತಲು ಸಿದ್ದವಿಲ್ಲ. ಮೊದಲು ನೈತಿಕತೆ ಇದ್ದರೆ ಈ ಮೂರು ಪಕ್ಷಗಳು 24 ಟಿಎಂಸಿ ನೀರು ಹರಿಸಲು ಸರ್ಕಾರದ ವಿರುದ್ಧ ಹೋರಾಟ ಮಾಡಲಿ ಜೊತೆಗೆ ಜಿಲ್ಲಾದ್ಯಂತ ಕೆರೆ ಹೂಳೆತ್ತುವ ಕಾಮಗಾರಿಯಲ್ಲಿ ನಡೆದಿರುವ ಅಕ್ರಮ, ಮರಳು ಮಾಪಿಯಾ, ವಿರುದ್ಧ ಕಾನೂನು ಪ್ರಕಾರ ಕ್ರಮ ಜರುಗಿಸಿ ಮಾದರಿಯಾಗಲಿ.

ಗಿರೀಶ್,ಸಿಪಿಐ ಜಿಲ್ಲಾ ಕಾರ್ಯದರ್ಶಿ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap