ಕಾರ್‌ ಪೂಲಿಂಗ್‌ : ಸಂಸದರು ಕ್ಷಮೆ ಕೇಳಬೇಕು : ಎಸ್‌ ನಟರಾಜ

ಬೆಂಗಳೂರು

    ನಗರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಖಾಸಗೀ ಸಾರಿಗೆ ಮಾಲೀಕರ ಒಕ್ಕೂಟದ ಅಧ್ಯಕ್ಷ ಎಸ್.ನಟರಾಜ ಶರ್ಮ ಮಾತನಾಡಿ, ನಗರದಲ್ಲಿ ಕಾರ್ ಪೂಲಿಂಗ್ ಹೆಸರಿನಲ್ಲಿ ಅಕ್ರಮವಾಗಿ ಸಂಚಾರ ಸೇವೆಯನ್ನು ನೀಡುತ್ತಿದ್ದು, ಇದನ್ನು ನಿರ್ಬಂಧಿಸಬೇಕು ಎಂದು ಪ್ರತಿಭಟನೆಗಳನ್ನು ಮಾಡಲಾಗುತ್ತಿದೆ. ಆದರೆ, ಸಂಸದ ತೇಜಸ್ವಿ ಸೂರ್ಯ ಅವರು ಮೋಟಾರ್ ವಾಹನ ಕಾಯ್ದೆ ಉಲ್ಲಂಘನೆ ಮಾಡಿ ಓಡಿಸುತ್ತಿರುವ ವಾಹನಗಳಿಗೆ ಕಾರ್ ಪೂಲಿಂಗ್ ಅವಕಾಶವನ್ನು ಕಲ್ಪಿಸಿ ಎಂದು ಒತ್ತಾಯಿಸುತ್ತಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.

  ತೇಜಸ್ವಿ ಸೂರ್ಯ ಬರೆದಿರುವ ಪತ್ರದಲ್ಲಿ ಕಾನೂನುಬಾಹಿರವಾಗಿ ಸೇವೆಯಲ್ಲಿ ತೊಡಗಿರುವ ಹಲವು ಅಗ್ರಗೇಟರ್ ಕಂಪನಿಗಳ ಹೆಸರುಗಳನ್ನು ನಮೂದಿಸಲಾಗಿದೆ. ಈ ಅಗ್ರಗೇಟರ್ ಕಂಪನಿಗಳು ಈಗಾಗಲೇ ಹಲವು ವರ್ಷಗಳಿಂದ ನಮ್ಮ ನಾಡಿನ ಅಸಂಘಟಿತ ವರ್ಗಕ್ಕೆ ಸೇರಿದ ಚಾಲಕ ಮತ್ತು ಮಾಲೀಕರಿಂದ ಮಿತಿ ಇಲ್ಲದ ಕಮಿಷನ್ ಪಡೆದು ಹಗಲು ದರೋಡೆ ಮಾಡಿವೆ. ಅಲ್ಲದೆ, ಈಗ ಸ್ವಂತ ಉಪಯೋಗಕ್ಕಾಗಿ ನೋಂದಣಿ ಮಾಡಿರುವ ವಾಹನಗಳಲ್ಲಿಯೂ ಸೇವೆಯನ್ನು ನೀಡಲು ಪ್ರಾರಂಭಿಸಿವೆ. ಈ ರೀತಿ ಸೇವೆ ನೀಡುವುದು ಕಾನೂನುಬಾಹಿರವೆಂದು ತಿಳಿದಿದ್ದರೂ ಸಂಸದರು ಪತ್ರವನ್ನು ಬರೆದಿದ್ದಾರೆ.

    ಉದ್ಯಮಿ ಮೋಹನ್ ದಾಸ್ ಪೈ ಸಾರಿಗೆ ಕ್ಷೇತ್ರದಲ್ಲಿ ಜೂಮ್ ಕಾರ್ಸ್, ಟ್ರಿಪ್ ಫ್ಯಾಕ್ಟ್ರಿ ಎಂಬ ಕಂಪೆನಿಗಳಲ್ಲಿ ತಮ್ಮ ಶೇರ್‍ಗಳನ್ನು ಹೊಂದಿರುತ್ತಾರೆ. ಇವರೂ ಸಂಸದ ತೇಜಸ್ವಿ ಸೂರ್ಯರಿಗೆ ಬೆಂಬಲಕ್ಕೆ ನಿಂತು ಅವರ ಹೇಳಿಕೆಗಳನ್ನು ಸಮರ್ಥಿಸುತ್ತಿದ್ದಾರೆ. ಈ ಮೂಲಕ ಬಡ ಆಟೋ ರಿಕ್ಷಾ ಚಾಲಕರ ಮತ್ತು ಮಾಲೀಕರಿಗೆ ಅವರು ವಿರುದ್ಧವಾಗಿದ್ದಾರೆ. ಅಲ್ಲದೆ ಜೂಮ್ ಕಾರ್ ಕಂಪನಿಯಲ್ಲಿ ಮಾಡಿರುವ ಹೂಡಿಕೆಯಲ್ಲಿ ಆದ ನಷ್ಟದ ಹತಾಶತೆಯನ್ನು ಈ ರೀತಿ ತೋರಿಸುತ್ತಿದ್ದಾರೆ ಎಂದು ಆರೋಪಿಸಿದ ಎಸ್. ನಟರಾಜ ಶರ್ಮ, ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟ ಸೂಕ್ತ ಸಮಯದಲ್ಲಿ ಸಂಸದ ಮತ್ತು ಉದ್ಯಮಿಮಗೆ ಕಾನೂನಿನ ಅಡಿಯಲ್ಲಿ ಉತ್ತರವನ್ನು ನೀಡುತ್ತದೆ ಎಂದು ಎಚ್ಚರಿಕೆ ನೀಡಿದರು.

    ರಸ್ತೆ ತೆರಿಗೆ, ಸಮಯಕ್ಕೆ ಫಿಟ್ನೆಸ್, ವಿಮೆ, ಬ್ಯಾಂಕ್ ನಿಂದ ಸಾಲ ಪಡೆದು ಕಾನೂನಿನ ಅಡಿಯಲ್ಲಿ ಪರವಾನಿಗೆ ಪಡೆದು ಸ್ವಾಭಿಮಾನದಿಂದ ಸ್ವಯಂ ಉದ್ಯೋಗವನ್ನು ಸೃಷ್ಟಿಸಿಕೊಂಡು ಸೇವೆಯನ್ನು ನೀಡುತ್ತಿರುವವ ಆಟೋ ಮತ್ತು ಟ್ಯಾಕ್ಸಿ ಚಾಲಕರ ಬಗ್ಗೆ ಕಾಳಜಿ ಇಲ್ಲದೆ ತೇಜಸ್ವಿ ಸೂರ್ಯ ಪತ್ರವನ್ನು ಬರೆದಿದ್ದಾರೆ. ಕರ್ನಾಟಕ ರಾಜ್ಯ ಮೋಟಾರ್ ನಿಯಮಗಳನ್ನು ಬದಲಾಯಿಸಿ ನಗರದಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಕಾರ್ ಪೂಲಿಂಗ್‍ಗೆ ಅವಕಾಶ ನೀಡಬೇಕು ಎಂದು ಪ್ರತಿಪಾದಿಸುತ್ತಿರುವುದು ಅವೈಜ್ಞಾನಿಕ ಕ್ರಮವಾಗಿದೆ ಎಂದು ತಿಳಿಸಿದರು.

    ಸಂಸದರ ಹೇಳಿಕೆಯನ್ನು ಖಂಡಿಸಿ, ಅವರ ನಡೆ ಬಗ್ಗೆ ಪ್ರಧಾನಿಗೆ, ಕೇಂದ್ರ ಮಂತ್ರಿಗಳಿಗೆ, ಲೋಕಸಭಾ ಸ್ಪೀಕರ್‍ ರಿಗೆ ತಿಳಿ ಹೇಳಲು ಸಾರಿಗೆ ಸಂಘಟನೆಗಳ ಒಕ್ಕೂಟ ಪತ್ರವನ್ನು ಬರೆದಿರುತ್ತದೆ. ಅದೇ ರೀತಿ ಅ.13ರೊಳಗೆ ಸಂಸದರು ತಮ್ಮ ಹೇಳಿಕೆಯನ್ನು, ಪತ್ರವನ್ನು ವಾಪಸ್ ಪಡೆಯದೇ ಇದ್ದಲ್ಲಿ ಮುಂದಿನ ಚುನಾವಣೆಯವರೆಗೂ ತೇಜಸ್ವಿ ಸೂರ್ಯ ಏರ್ ಪೋರ್ಟ್, ಸೇರಿ ನಗರದ ಯಾವುದೇ ಸ್ಥಳದಲ್ಲಿ ಕಂಡಾಗ ಸಾರಿಗೆ ಸಂಘಟನೆಗಳ ಅಡಿಯಲ್ಲಿ ಬರುವ ಸದಸ್ಯರು ಕಪ್ಪು ಬಟ್ಟೆ ಪ್ರದರ್ಶಿಸುವ ಮೂಲಕ ತಮ್ಮ ಧಿಕ್ಕಾರ ಸೂಚಿಸುತ್ತಾರೆ ಎಂದು ಎಚ್ಚರಿಕೆ ನೀಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap