ರಾಮನಗರ ಜಿಲ್ಲೆ ಮರುನಾಮಕರಣ ; ಸರ್ಕಾರದ ವಿರುದ್ದ ಎನ್‌ ಡಿ ಎ ವಾಗ್ದಾಳಿ

ಬೆಂಗಳೂರು:

    ರಾಮನಗರ ಜಿಲ್ಲೆಗೆ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡುವ ಸರ್ಕಾರದ ಪ್ರಸ್ತಾವನೆಯನ್ನು ಬಿಜೆಪಿ ಮತ್ತು ಜೆಡಿಎಸ್ ವಿರೋಧಿಸಿದ್ದು, ಕಾಂಗ್ರೆಸ್ ಸರ್ಕಾರ ತುಷ್ಟೀಕರಣ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದೆ. ಸರ್ಕಾರಗ ಪ್ರಸ್ತಾವನೆಗೆ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಮತ್ತು ಬಿಜೆಪಿ ನಾಯಕ ಆರ್ ಅಶೋಕ್ ಅವರು ವಿರೋಧ ವ್ಯಕ್ತಪಡಿಸಿದ್ದು, ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡುವ ಮೂಲಕ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

    ರಾಮನಗರದಲ್ಲಿ ‘ರಾಮ’ನಿದ್ದಾನೆ ಎಂಬ ದ್ವೇಷವೂ ಅಥವಾ ರಿಯಲ್ ಎಸ್ಟೇಟ್ ಕುಬೇರರಾಗುವ ದುರಾಸೆಯೋ? ರಾಮನಗರ ಜಿಲ್ಲೆಯ ಹೆಸರು ಬದಲಾವಣೆ ಮಾಡುವ ಕಾಂಗ್ರೆಸ್ ಸರ್ಕಾರದ ಸಂಚಿನ ಹಿಂದೆ ರಾಮ ದ್ವೇಷ, ರಿಯಲ್ ಎಸ್ಟೇಟ್ ಲಾಲಸೆ ಅಡಗಿರುವುದು ಸುಸ್ಪಷ್ಟವಾಗಿದೆ ಎಂದು ಕಿಡಿಕಾರಿದ್ದಾರೆ.

    ಡಿಸಿಎಂ ಡಿಕೆ.ಶಿವಕುಮಾರ್ ಅವರೇ, ಬ್ರ್ಯಾಂಡ್ ಬೆಂಗಳೂರು ಮಾಡುತ್ತೇವೆ ಎಂದು ಬೆಂಗಳೂರಿನ ಜನತೆಗೆ ಮೋಸ ಮಾಡಿದ್ದಾಯ್ತು. ಈಗ ಹೆಸರು ಬದಲಾವಣೆ ಮಾಡುವ ಮೂಲಕ ರಾಮನಗರದ ಜನತೆಯ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತೀದ್ದೀರಲ್ಲ ಇನ್ನೆಷ್ಟು ದಿನ ಹೀಗೆ ಜನರ ದಿಕ್ಕು ತಪ್ಪಿಸಿ ಕಾಲಹರಣ ಮಾಡುತ್ತೀರಿ? ಹೆಸರು ಬದಲಾವಣೆ ಮಾಡಿದ ಮಾತ್ರಕ್ಕೆ ಅಭಿವೃದ್ಧಿ ಆಗಿಬಿಡುತ್ತಾ?

    2007ರಲ್ಲಿ ರಾಮನಗರವನ್ನ ಪ್ರತ್ಯೇಕ ಜಿಲ್ಲೆ ಮಾಡಿದ್ದು ಅಂದಿನ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ. ತಮ್ಮ ತಮ್ಮನನ್ನ ಸೋಲಿಸಿದ ಬಿಜೆಪಿ – ಜೆಡಿಎಸ್ ಮೈತ್ರಿ ವಿರುದ್ಧ ದ್ವೇಷ ಸಾಧಿಸಲು ಹೆಸರು ಬದಲಾವಣೆ ಮಾಡುತ್ತಿದ್ದೀರಾ? ಸಿಎಂ ಸಿದ್ದರಾಮಯ್ಯ ಅವರೇ, ರಾಮನಗರದಲ್ಲಿ ರಾಮನ ಹೆಸರು ಇರಬಾರದೆಂದು ತಮ್ಮ ನಾಯಕ ರಾಹುಲ್ ಗಾಂಧಿ ಅವರು ಆದೇಶ ಮಾಡಿದ್ದಾರೆಯೇ? ಅಥವಾ ಮೈಸೂರಿನಲ್ಲಿ ಭೂಕಬಳಿಕೆ ಮಾಡಿದ್ದು ಸಾಲದು ಅಂತ ಈಗ ರಾಮಾನಗರದಲ್ಲೂ ರಿಯಲ್ ಎಸ್ಟೇಟ್ ದಂಧೆ ಶುರು ಮಾಡಲು ಹೊರಟಿದ್ದೀರಾ? ಎಂದು ಪ್ರಶ್ನಿಸಿದ್ದಾರೆ.

     ಅಶ್ವತ್ಥ್ ನಾರಾಯಣ್ ಅವರು ಮಾತನಾಡಿ, ರಾಮನಗರ ಜಿಲ್ಲೆಯಲ್ಲಿ ಶ್ರೀರಾಮನ ಹೆಸರಿರುವುದನ್ನು ಸಹಿಸಲಾಗದ, ತುಷ್ಟೀಕರಣ ರಾಜಕಾರಣಕ್ಕೆ ಜೋತು ಬಿದ್ದಿರುವ ಕಾಂಗ್ರೆಸ್ ನಾಯಕರು ಜಿಲ್ಲೆಯ ಹೆಸರನ್ನೇ ಬದಲಾಯಿಸಲು ಮುಂದಾಗಿದ್ದಾರೆಂದು ಹೇಳಿದ್ದಾರೆ.

     ಶ್ರೀರಾಮಚಂದ್ರರು ನೆಲೆಸಿದ್ದ ರಾಮಗಿರಿ ಬೆಟ್ಟವನ್ನು ನಾಡಪ್ರಭು ಕೆಂಪೇಗೌಡರು ಜೀರ್ಣೋದ್ದಾರ ಮಾಡಿದ್ದರು. ಈ ಪುಣ್ಯ ಭೂಮಿಯ ಪೌರಾಣಿಕ ಹಿನ್ನೆಲೆಯನ್ನು ಪ್ರೇರಣೆಯಾಗಿ ಪಡೆದ ಶ್ರೀ ಕೆಂಗಲ್ ಹನುಮಂತಯ್ಯ ಅವರು ಕ್ಲೋಸ್‌ ಪೇಟೆ ಎಂದು ಕರೆಯಲ್ಪಡುತ್ತಿದ್ದ ಈ ಪ್ರದೇಶಕ್ಕೆ ರಾಮನಗರ ಎಂದು ಮರುನಾಮಕರಣ ಮಾಡಿದರು. ಆದರೆ, ತಾವು ರಾಜಕೀಯವಾಗಿ ಪ್ರತಿನಿಧಿಸುವ ಜಿಲ್ಲೆಯನ್ನು ಅಭಿವೃದ್ಧಿ ಮಾಡಲಾಗದ ಡಿಕೆ.ಶಿವಕುಮಾರ್ ಅವರು ತಮ್ಮ ವೈಯಕ್ತಿಕ ಹಿತಾಸಕ್ತಿಯ ಪೂರೈಕೆಗಾಗಿ ಜಿಲ್ಲೆಯ ಹೆಸರನ್ನೇ ಬದಲಿಸಲು ಮುಂದಾಗಿದ್ದಾರೆ. ರಾಮ ನೆಲೆಸಿದ್ದ ಈ ಪುಣ್ಯಭೂಮಿಯನ್ನು ರೀಯಲ್ ಎಸ್ಟೇಟ್ ಮಾಫಿಯಾಗೆ ಬಳಸಿಕೊಳ್ಳುವ ದುರಾಲೋಚನೆಯನ್ನು ಬಲವಾಗಿ ವಿರೋಧಿಸುತ್ತೇವೆಂದು ತಿಳಿಸಿದ್ದಾರೆ.

     ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಮಾತನಾಡಿ, ಕಾಂಗ್ರೆಸ್ ನವರು ಈಗ ಜಿಲ್ಲೆಯ ಹೆಸರು ಬದಲಾವಣೆ ಮಾಡಬಹುದು, ಮತ್ತೆ ನಾನು ರಾಜ್ಯದಲ್ಲಿ ಅಧಿಕಾರಕ್ಕೆ ಬಂದೇ ಬರುತ್ತೇನೆ. ಆಗ ಇವರು ಇಟ್ಟಿರುವ ಹೆಸರನ್ನು ಕಿತ್ತೆಸೆಯುತ್ತೇನೆ ಎಂದು ಗುಡುಗಿದರು.

    ಕಾಂಗ್ರೆಸ್ ಸರ್ಕಾರ ಬಂದ ಮೇಲೆ ರಾಮನಗರ ಹೆಸರು ಬದಲಾವಣೆ ಮಾಡಲು ಹೊರಟಿದ್ದಾರೆ. ಇದನ್ನು ಯಾಕೆ ಮಾಡುತ್ತಿದ್ದಾರೆ ಎಂಬುದು ಗೊತ್ತಿಲ್ಲ. ಬೆಂಗಳೂರಿಗೆ ಸೇರ್ಪಡೆಯಾದರೆ ಮೂಟೆಗಟ್ಟಲೇ ಹಣವನ್ನು ತುಂಬಿಸಿಕೊಳ್ಳಬಹುದು ಎಂಬ ಉದ್ದೇಶ ಇರಬಹುದು. ನಾನು ರಾಮನಗರದ ನಾಲ್ಕೂ ತಾಲ್ಲೂಕುಗಳನ್ನು ಬೆಂಗಳೂರಿಗೆ ಸೇರಿಸುತ್ತೇನೆ. ಭೂಮಿ ಮಾರಾಟ ಮಾಡಬೇಡಿ ಎಂದು ಹೇಳಿದ್ದರು ಎಂದು ಹೆಸರು ಹೇಳದೆಯೇ ಡಿಸಿಎಂ ಡಿ.ಕೆ ಶಿವಕುಮಾರ್ ವಿರುದ್ಧ ಕಿಡಿಕಾರಿದರು. 

   ರಾಮನಗರ ಜಿಲ್ಲೆ ಮಾಡಿದ್ದ ಉದ್ದೇಶ ಆ ವ್ಯಕ್ತಿಗೆ ಏನು ಗೊತ್ತಿದೆ? ರಾಮನ ಹೆಸರು ಇರುವುದು ಒಂದು ಭಾಗ. ಈ ಜಿಲ್ಲೆಗೆ ತನ್ನದೇ ಆದ ಒಂದು ಇತಿಹಾಸ ಇದೆ. ಪುರಾಣ ಐತಿಹ್ಯವಿದೆ. ಈ ಹೆಸರಲ್ಲಿ ರಾಮನ ಹೆಸರು ಇದೆ. ರಾಮದೇವರಿಗೆ ಇವರು ಅಪಚಾರ ಮಾಡಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

   ಅಲ್ಲಿ ಇವರು ಯಾವ್ಯಾವ ಬೆಲೆ ಏರಿಕೆ ಮಾಡಿದ್ದಾರೆ ನೋಡಿದ್ದೇವೆ. ಭೂಮಿ ಲಪಾಟಿಸಿ ಯಾವುದರ ಬೆಲೆ ಏರಿಕೆ ಮಾಡಿದ್ದಾರೆ ಎನ್ನುವುದು ಕೂಡ ಗೊತ್ತಿದೆ. ಇದೆಲ್ಲ ಬಿಟ್ಟು ಅಭಿವೃದ್ಧಿ ಮಾಡುವುದನ್ನು ಅವರು ಕಲಿಯಲಿ. ನಾನು ಅಧಿಕಾರದಲ್ಲಿದ್ದಾಗ ರಾಮನಗರ ಜಿಲ್ಲೆ ಮಾಡಿದ್ದೆ. ಅದನ್ನು ತೆಗೆಯಬೇಕು ಎನ್ನುವುದು ಅವರ ಉದ್ದೇಶ. ದೇವೇಗೌಡರು, ನಾನು ಏನು ಅಭಿವೃದ್ಧಿ ಮಾಡಿದ್ದೇವೆ ಜನರಿಗೆ ಗೊತ್ತಿದೆ. ಅದಕ್ಕೆ ಇವರ ಸರ್ಟಿಫಿಕೇಟ್ ಬೇಕಿಲ್ಲ. ಹಿಂದೆ ಕನಕಪುರ, ಸಾತನೂರು ಹೇಗಿದ್ದವು, ಆಗ ಇವರು ಯಾರದೋ ಸೇವೆ ಮಾಡಿಕೊಂಡಿದ್ದರು ಎಂದು ಟೀಕಿಸಿದರು.

   ಈಗ ರಾಮನಗರ ಹೆಸರು ಬದಲಾಯಿಸಿದರೂ ಮುಂದೆ ನಾನು ಮತ್ತೆ ಅಧಿಕಾರಕ್ಕೆ ಬಂದೇ ಬರುತ್ತೇನೆ. ಆ ವಿಶ್ವಾಸ ನನಗೆ ಇದೆ. ನಾಲ್ಕು ತಾಲ್ಲೂಕು ಸೇರಿ ಬೆಂಗಳೂರು ದಕ್ಷಿಣ ಎಂದು ಮಾಡಲು ಹೊರಟಿದ್ದಾರೆ. ಈಗಾಗಲೇ ಬೆಂಗಳೂರು ದಕ್ಷಿಣ ಕ್ಷೇತ್ರ ಎಂದು ಇದೆ. ಹೆಸರು ಬದಲಾವಣೆ ಮಾಡಿದರೆ ಏನು ಸಿಗುತ್ತದೆ ಎಂಬುದನ್ನು ಅವರು ಜನರಿಗೆ ಹೇಳಬೇಕು. ಹೆಸರು ಬದಲಾವಣೆ ಮಾಡಿದರೆ ಎಲ್ಲ ಸರ್ಕಾರಿ ದಾಖಲೆಗಳಿಗೆ ತೊಂದರೆಯಾಗಲಿದೆ. ಜನರು ಕಚೇರಿಗಳಿಗೆ ಅಲೆಯಬೇಕಾಗುತ್ತದೆ ಎಂದರು.

   ಜಿಲ್ಲೆಗೆ ಹೆಸರು ಬದಲಾಯಿಸುವುದು ಅನಗತ್ಯ ಎಂದು ಒತ್ತಿ ಹೇಳಿದ ಅವರು; ರಾಮನಗರ-ಚನ್ನಪಟ್ಟಣ ಅವಳಿ ನಗರ ಮಾಡಿದ್ದರೆ ಒಂದು ಹೆಸರು ಅವರಿಗೆ ಬಂದಿರುತ್ತಿತ್ತು. ಅದರ ಬದಲು ಜಿಲ್ಲೆಯ ಹೆಸರನ್ನೇ ಅಳಿಸಿ ಹಾಕಲು ಹುನ್ನಾರ ನಡೆಸಿದ್ದಾರೆ ಎಂದು ಕಿಡಿಕಾರಿದರು.

   ನಿಖಿಲ್ ಕುಮಾರಸ್ವಾಮಿಯವರು ಮಾತನಾಡಿ, ಕೇವಲ ಕೆಲವರನ್ನು ತುಷ್ಟೀಕರಣ ಮಾಡಲಿಕ್ಕೆ ಮಾತ್ರ ರಾಮನಗರ ಹೆಸರನ್ನು ಬದಲಾವಣೆ ಮಾಡಲಾಗುತ್ತಿದೆ. ಪುರಾಣ ಪ್ರಸಿದ್ಧವಾದ ರಾಮನಗರ ಹೆಸರನ್ನು ಕಿತ್ತುಹಾಕಿ ಅದನ್ನು ಬೆಂಗಳೂರು ದಕ್ಷಿಣ ಎಂದು ಮಾಡುವುದರಲ್ಲಿ ಯಾವ ಹಿಡೆನ್ ಅಜೆಂಡಾ ಅಡಗಿದೆಯೋ ಗೊತ್ತಿಲ್ಲ. ಆದರೆ ಯಾರನ್ನು ಓಲೈಸಲು ರಾಮನಗರ ಹೆಸರಿಗೆ ಗೇಟ್ ಪಾಸ್ ನೀಡಲಾಗುತ್ತಿದೆ ಎನ್ನುವ ಒಳಗುಟ್ಟು ಮಾತ್ರ ರಟ್ಟಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

   ರಿಯಲ್ ಎಸ್ಟೇಟ್ ದಂಧೆಕೋರರಿಗೆ ಜಿಲ್ಲೆಯನ್ನು ಸ್ವರ್ಗವನ್ನಾಗಿ ಮಾಡುವುದು ಈ ಷಡ್ಯಂತ್ರದ ಕರಾಳಮುಖ. ಕೆಲವರ ತುಷ್ಟೀಕರಣದ ಮತ್ತೊಂದು ಮುಖ. ರಾಜಕೀಯವಾಗಿ ಬಹಳ ಎತ್ತರದ ಸ್ಥಾನದಲ್ಲಿರುವ ರಾಮನಗರ ಜಿಲ್ಲೆಯ ಹೆಗ್ಗುರುತನ್ನೇ ಸರ್ವನಾಶ ಮಾಡುವ ಹುನ್ನಾರ ನಡೆದಿದೆ ಎಂದು ಕಟುವಾಗಿ ಟೀಕಿಸಿದರು.

   ವಿಧಾನಸೌಧದ ಶಿಲ್ಪಿ ಕೆಂಗಲ್ ಹನುಮಂತಯ್ಯನವರು, ಈ ದೇಶದ ಪ್ರಧಾನಿಗಳಾಗಿದ್ದ ಹೆಚ್.ಡಿ.ದೇವೇಗೌಡರು, ಎರಡು ಬಾರಿ ರಾಜ್ಯ ಮುಖ್ಯಮಂತ್ರಿಗಳಾಗಿದ್ದ ಹೆಚ್.ಡಿ.ಕುಮಾರಸ್ವಾಮಿ ಅವರು ರಾಮನಗರ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದರು. ಜಿಲ್ಲೆಯ ಹೆಸರು ಬದಲಿಸಲು ಹೊರಟವರು ಮೊದಲು ಈ ಇತಿಹಾಸ ಅರಿತರೆ ಒಳ್ಳೆಯದು. ನಮ್ಮ ರಾಮನಗರ ನಮ್ಮ ಹೆಮ್ಮೆ ಎಂದು ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap