ಕೊಪ್ಪಳ
ಅನ್ನದಾತರ ಬಹುದಿನಗಳ ಕನಸು ನನಸಾದಂತಾಗಿದೆ. ಕೃಷ್ಣಾ ನದಿ ನೀರು ಹರಿಸುವ ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾಗಿದೆ. ರಾಜ್ಯದ ಗಣಿ ಮತ್ತು ಭೂವಿಜ್ಞಾನ ಸಚಿವ ಹಾಲಪ್ಪ ಬಸಪ್ಪ ಆಚಾರ್ ಈ ಕ್ಷಣಕ್ಕೆ ಸಾಕ್ಷಿಯಾದರು.
ಯಲಬುರ್ಗಾ ತಾಲ್ಲೂಕಿನ ಹಗೆದಾಳನ ಜಾಕವೆಲ್ ಸಂಪ್ ವೀಕ್ಷಣೆ ಮಾಡಿದ ಬಳಿಕ ಸಚಿವ ಹಾಲಪ್ಪ ಬಸಪ್ಪ ಆಚಾರ್ ಪತ್ರಿಕಾಗೋಷ್ಠಿ ನಡೆಸಿದರು. “ಜಲಜಲ ಹರಿಯುವ ಬಿಸಿಲಿನ ಯಲಬುರ್ಗಾ ಭೂತಾಯೊಡಲಿಗೆ ಕೃಷ್ಣೆ ಹರಿದು ತಣಿಸಿದ್ದಾಳೆ. ಇದರಿಂದ ಕ್ಷೇತ್ರದ ಅನ್ನದಾತರ ಬಹುದಿನಗಳ ಕನಸು ನನಸಾದಂತಾಗಿದೆ. ಯಲಬುರ್ಗಾ ತಾಲೂಕಿಗೆ ಕೃಷ್ಣಾ ನದಿ ನೀರು ಹರಿಸುವ ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾಗಿದೆ” ಎಂದರು.
ಕೊಪ್ಪಳ ಏತ ನೀರಾವರಿ ಯೋಜನೆಯು ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3ರಡಿಯ ಒಂದು ಪ್ರಮುಖ ಉಪ ಯೋಜನೆ. ನಾರಾಯಣಪುರ ಜಲಾಶಯದ ಹಿನ್ನೀರಿನಿಂದ ನೀರನ್ನು ಎರಡು ಹಂತದಲ್ಲಿ ಲಿಫ್ಟ್ ಮಾಡಿ ಕೊಪ್ಪಳ ಬಾಗಲಕೋಟೆ ಮತ್ತು ಗದಗ ಜಿಲ್ಲೆಗಳ 1.12 ಲಕ್ಷ ಹೆಕ್ಟೇರ್ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಈ ಯೋಜನೆಯ ಮೂಲಕ ಕುಷ್ಟಗಿ ತಾಲೂಕಿನ 43,760 ಹೆಕ್ಟೇರ್, ಯಲಬುರ್ಗಾ ತಾಲೂಕಿನ 45,320 ಹೆಕ್ಟೇರ್, ಕೊಪ್ಪಳ ತಾಲೂಕಿನ 3,200 ಹೆಕ್ಟೇರ್ ಮತ್ತು ಕನಕಗಿರಿ ತಾಲೂಕಿನ 4,000 ಹೆಕ್ಟೇರ್ ಪ್ರದೇಶವು ನೀರಾವರಿ ಕ್ಷೇತ್ರವಾಗಿ ಪರಿವರ್ತನೆಯಾಗಲಿದೆ.