ಸರ್ಕಾರದ ಮೀಸಲಾತಿ ಕುರಿತ ತೀರ್ಮಾನಗಳು ಪ್ರಾಮಾಣಿಕವಲ್ಲ : ಸಿದ್ದರಾಮಯ್ಯ

ಬೆಂಗಳೂರು

     ಬೊಮ್ಮಾಯಿ ಸರ್ಕಾರದ ಮೀಸಲಾತಿ ಕುರಿತ ತೀರ್ಮಾನಗಳು ಪ್ರಾಮಾಣಿಕವಲ್ಲ. ಎಲ್ಲವೂ ಚುನವಣಾ ಗಿಮಿಕ್ಕುಗಳು ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ. ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ರಾಜ್ಯ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ಮೀಸಲಾತಿಯ ಕುರಿತು ತೆಗೆದುಕೊಂಡ ತೀರ್ಮಾನಗಳು ಸಮುದಾಯಗಳಲ್ಲಿ ಹಲವು ರೀತಿಯ ಗೊಂದಲ, ಅಶಾಂತಿಯನ್ನು ಹುಟ್ಟು ಹಾಕಿವೆ.

    ಮುಖ್ಯಮಂತ್ರಿಗಳು ಮೀಸಲಾತಿಯ ಸಮಸ್ಯೆಯನ್ನು ಬಗೆಹರಿಸಿದ್ದೇನೆಂದು ಹೇಳಿದ್ದಾರೆ. ಆದರೆ ಸಮಸ್ಯೆಯನ್ನು ಪರಿಹರಿಸುವ ಬದಲಿಗೆ ಹೆಚ್ಚಿಸುವ ಕೆಲಸವನ್ನು ಬಿಜೆಪಿ ಸರ್ಕಾರ ಮಾಡಿದೆ ಎಂಬುದು ಜನರ ಪ್ರತಿಕ್ರಿಯೆಗಳನ್ನು ನೋಡಿದ ಮೇಲೆ ಸ್ಪಷ್ಟವಾಗುತ್ತಿದೆ ಎಂದಿದ್ದಾರೆ.

       ಪರಿಶಿಷ್ಟ ಜಾತಿಗಳ ಬಹುಪಾಲು ಮುಖಂಡರು ಸರ್ಕಾರದ ಈ ನಿರ್ಧಾರವನ್ನು ವಿರೋಧಿಸಿದ್ದಾರೆ. ಸರ್ಕಾರ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಡಿಲ್ಲ. ನಾಗಮೋಹನ ದಾಸ್ ಅವರ ಸಮಿತಿಯ ಶಿಫಾರಸ್ಸುಗಳಂತೆ ಮೀಸಲಾತಿ ಹೆಚ್ಚಿಸುವ ಕುರಿತು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಂಡು 6 ತಿಂಗಳುಗಳಾಗುತ್ತಾ ಬಂದಿದೆ. ಅದನ್ನು ಲೋಕಸಭೆಯ ಅಧಿವೇಶನ ಮುಗಿಯುವಾಗ ಶೆಡ್ಯೂಲ್ 9 ಕ್ಕೆ ಸೇರಿಸಿ ಎಂದು ಇದೆ 23 ನೆ ತಾರೀಖು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ರಾಜ್ಯದಲ್ಲಿ ಚುನಾವಣೆ ಘೋಷಣೆಯಾಗುವುದಕ್ಕೆ ಕೆಲವೆ ದಿನಗಳಿರುವಾಗ ಒಳಮೀಸಲಾತಿಯ ನಾಟಕ ಆಡುತ್ತಿದೆ ಎಂದಿದ್ದಾರೆ.

     ಬಿಜೆಪಿ ಸರ್ಕಾರಕ್ಕೆ ನೈಜ ಕಾಳಜಿ ಇದ್ದರೆ ಪರಿಶಿಷ್ಟ ಜಾತಿಯ ಎಲ್ಲ ಜಾತಿಗಳ ಮುಖಂಡರುಗಳ ಜೊತೆ ಚರ್ಚಿಸಿ ಎಲ್ಲರ ಹಿತಾಸಕ್ತಿಗಳನ್ನು ಪರಿಗಣಿಸಿ ತೀರ್ಮಾನ ತೆಗೆದುಕೊಳ್ಳಬೇಕಾಗಿತ್ತು.  ಮೀಸಲಾತಿಯನ್ನು ಕೇವಲ ನಾಲ್ಕೇ ದಿನಗಳಲ್ಲಿ ಮುಗಿದು ಸಂವಿಧಾನಕ್ಕೆ ತಿದ್ದುಪಡಿ ತಂದು ಅನುಷ್ಠಾನ ಮಾಡಲಾಯಿತು. ಈಗಲೂ ಮೀಸಲಾತಿಯ ಹೆಚ್ಚಳ ಮತ್ತು ಒಳಮೀಸಲಾತಿಯ ಕುರಿತು ಅಷ್ಟೆ ಕಾಳಜಿ ಮತ್ತು ಬದ್ಧತೆಯನ್ನು ತೋರಿಸಬೇಕೆಂದು ಹಲವು ಮುಖಂಡರುಗಳು ಒತ್ತಾಯಿಸುತ್ತಿದ್ದಾರೆ.

    ಇಷ್ಟನ್ನು ಮಾಡದೆ ಹೋದರೆ ಸರ್ಕಾರ ಕೇವಲ ಚುನಾವಣಾ ಗಿಮಿಕ್ಕು ಮಾಡುತ್ತಿದೆ. ಸರ್ಕಾರಕ್ಕೆ ಪ್ರಾಮಾಣಿಕ ಕಾಳಜಿ ಇಲ್ಲ ಎಂಬುದು ಸ್ಪಷ್ಟವಾಗುತ್ತದೆ. ಸರ್ಕಾರಕ್ಕೆ ನಿಜವಗಿಯೂ ಸಂವಿಧಾನದ ಆಶಯಗಳಲ್ಲಿ ನಂಬಿಕೆ ಇದ್ದರೆ, ಅದಕ್ಕೆ ಕರುಣೆ, ತಾಯ್ತನದ ಗುಣಗಳು ಇದ್ದಿದ್ದರೆ  EWS ಶೇ.10 ರಷ್ಟು ಜನಸಂಖ್ಯೆ ಇಲ್ಲದ ಕಾರಣ ಅದರಲ್ಲಿನ ಕೆಲವು ಪರ್ಸೆಂಟ್ ಮೀಸಲಾತಿಯನ್ನು ಉಳಿದ ಹಿಂದುಳಿದ ವರ್ಗಗಳಿಗೆ ಹಂಚಿಕೆ ಮಾಡಬಹುದಾಗಿತ್ತು.

    ಹಾಗೆ ಮಾಡುವುದರಿಂದ ಹಲವು ಸಮಸ್ಯೆಗಳು ಬಗೆಹರಿಯುತ್ತಿದ್ದವು. ನಾನು ಸರ್ಕಾರಕ್ಕೆ ಹಲವು ಬಾರಿ ಇದೆ ಸಲಹೆ ಕೊಟ್ಟಿದ್ದೆ. ಆದರೆ ಇದನ್ನೆಲ್ಲ ಕಾಲ ಕೆಳಕ್ಕೆ ಹಾಕಿಕೊಂಡು ಹೊಸಕಿ ಹಾಕಲಾಗಿದೆ. ಸರ್ಕಾರದ ಅಮಾನವೀಯ ನಿರ್ಧಾರದಿಂದ ಅತಿ ಹೆಚ್ಚು ಅನ್ಯಾಯಕ್ಕೆ ಒಳಗಾಗಿರುವವರು ಪ್ರವರ್ಗ-1, ಪ್ರವರ್ಗ- 2 ಗಳಲ್ಲಿ ಹಿಂದುಳಿದವರು ಮತ್ತು ಪ್ರವರ್ಗ- 2 ಬಿರಲ್ಲಿದ್ದ ಮುಸ್ಲಿಮರು. ಈ ಮೂರೂ ಪ್ರವರ್ಗಗಳಲ್ಲಿ ಶೇ.48-50 ರಷ್ಟು ಜನಸಂಖ್ಯೆ ಇದೆಯೆಂದು ಹಲವು ವರದಿಗಳು ಹೇಳಿವೆ. ಇಷ್ಟು ಜನಸಂಖ್ಯೆಗೆ ಈಗ ಕೇವಲ ಶೇ.19 ರಷ್ಟು ಮಾತ್ರ ಮೀಸಲಾತಿ ಇದೆ ಎಂದು ಹೇಳಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link