ಬೆಂಗಳೂರು-ಚೆನ್ನೈ ರೈಲು ವೇಗ ಹೆಚ್ಚಳ….!

ಬೆಂಗಳೂರು

   ಬೆಂಗಳೂರು-ಚೆನ್ನೈ ನಡುವಿನ ಪ್ರಯಾಣದ ಅವಧಿಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ನೈಋತ್ಯ ರೈಲ್ವೆಯು ಗುರುವಾರ  ರೈಲುಗಳನ್ನು ಗಂಟೆಗೆ 110 ರಿಂದ 130 ಕಿಮೀ ವೇಗದಲ್ಲಿ ಓಡಿಸುವ ಪರೀಕ್ಷೆ ಕೈಗೊಂಡಿತು. ಬೆಂಗಳೂರು-ಜೋಲಾರಪಟ್ಟಿ ಮಾರ್ಗದಲ್ಲಿ ರೈಲು ಗಂಟೆಗೆ 130 ಕಿಮೀ ವೇಗದಲ್ಲಿ ಸಂಚರಿಸುವ ಮೂಲಕ ಪ್ರಾಯೋಗಿ ಸಂಚಾರ ಯಶಸ್ವಿಯಾಯಿತು.

   ರೈಲು ಕೆಎಸ್​ಆರ್​ ಬೆಂಗಳೂರಿನಿಂದ ಬೆಳಗ್ಗೆ 8:05 ರಿಂದ ಹೊರಟು ಜೋಲಾರಪಟ್ಟಿಯನ್ನು ಅದೇ ದಿನ ಬೆಳಗ್ಗೆ 9:28ಕ್ಕೆ ತಲುಪಿತು. ನಂತರ ಜೋಲಾರಪಟ್ಟಿಯಿಂದ ರೈಲು ಮಧ್ಯಾಹ್ನ 2:30ಕ್ಕೆ ಹೊರಟು ಕೆಎಸ್​ಆರ್​ ಬೆಂಗಳೂರನ್ನು ಅದೇ ದಿನ ಸಂಜೆ 4:03 ನಿಮಿಷಕ್ಕೆ ತಲುಪಿತು ಎಂದು ಬೆಂಗಳೂರು ರೈಲ್ವೆ ವಿಭಾಗ ತಿಳಿಸಿದೆ.

   ಕಳೆದ ವರ್ಷ ಜೋಲಾರ್​ಪಟ್ಟಿ-ಚೆನ್ನೈ ನಡುವಿನ ಮಾರ್ಗದಲ್ಲಿ ರೈಲನ್ನು ಗಂಟಗೆ 130 ಕಿಮೀ ವೇಗದಲ್ಲಿ ಓಡಿಸುವ ಕಾಮಗಾರಿ ಪೂರ್ಣಗೊಂಡಿತ್ತು. ಈ ಮಾರ್ಗದಲ್ಲಿ ರೈಲು ಸಂಚಾರಕ್ಕೆ ಅನುಮತಿ ಸಿಕ್ಕಿತ್ತು. ಈಗ ಬೆಂಗಳೂರು-ಜೋಲಾರ್​​ಪಟ್ಟಿ ರೈಲುಗಳ ವೇಗ ಹೆಚ್ಚಿಸುವ ಕಾಮಗಾರಿ ಪೂರ್ಣಗೊಂಡಿದ್ದು, ಪ್ರಯೋಗಿಕ ಪರೀಕ್ಷೆ ನಡೆಸಲಾಗಿದೆ. 

   ಕೆಎಸ್​ಆರ್​ ಬೆಂಗಳೂರು-ಚೆನ್ನೈ ಸೆಂಟ್ರಲ್ 359 ಕಿಮೀ ಮಾರ್ಗದಲ್ಲಿ ಎರಡು ವಂದೇ ಭಾರತ್​ ಮತ್ತು ಎರಡು ಶತಾಬ್ದಿ ರೈಲುಗಳು ಸಂಚರಿಸುತ್ತವೆ. ಮಧ್ಯಾಹ್ನ ಬೆಂಗಳೂರಿನಿಂದ ಹೊರಡುವ ವಂದೇ ಭಾರತ್ (ರೈಲು ಸಂಖ್ಯೆ 20608) ಚೆನ್ನೈ ತಲುಪಲು 4 ಗಂಟೆ 25 ನಿಮಿಷ ಸಮಯ ತೆಗೆದುಕೊಳ್ಳುತ್ತದೆ. ಬೆಳಗ್ಗೆ ಬೆಂಗಳೂರಿನಿಂದ ಹೊರಡುವ ರೈಲು (20663) 4 ಗಂಟೆ 35 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಆದರೆ, ಈ ಪ್ರಾಯೋಗಿಕ ಸಂಚಾರ ಯಶಸ್ವಿಯಿಂದ ಬೆಂಗಳೂರು-ಚೆನ್ನೈ ನಡುವಿನ ವಂದೇ ಭಾರತ್​ ರೈಲುಗಳ ಸಂಚಾರ ಅವಧಿ 25 ನಿಮಿಷ ಕಡಿಮೆಯಾಗಿ, 4 ಗಂಟೆ ಆಗಲಿದೆ.

   ಬೆಳಗ್ಗೆ ಬೆಂಗಳೂರಿನಿಂದ ಹೊರಡುವ ಶತಾಬ್ದಿ ರೈಲು (12028) ಚೆನ್ನೈ ತಲುಪಲು ಐದು ಗಂಟೆ ಸಮಯ ತೆಗೆದುಕೊಳ್ಳುತ್ತದೆ. ಸಂಜೆ ವಾಪಸ್​​ ಬರುವಾಗ 5 ಗಂಟೆ 10 ನಿಮಿಷ ಸಮಯ ತೆಗೆದುಕೊಳ್ಳುತ್ತದೆ. ಈ ಪ್ರಾಯೋಗಿಕ ಸಂಚಾರ ಯಶಸ್ವಿಯಿಂದ ಈ ಮಾರ್ಗದ ಶತಾಬ್ದಿ ಸಂಚಾರದ ಅವಧಿ ಸುಮಾರು 20 ನಿಮಿಷ ಕಡಿಮೆಯಾಗಿ, 5 ಗಂಟೆಗಳಿಗೆ ಬರಲಿದೆ. ಪ್ರಯಾಣದ ಅವಧಿ ಕಡಿಮೆ ಮಾಡುವುದರಿಂದ ಎರಡೂ ನಗರಗಳಿಗೆ ಅನುಕೂಲಾಗಿದೆ.

Recent Articles

spot_img

Related Stories

Share via
Copy link