3300 ವೆಚ್ಚದಲ್ಲಿ ಹೊಸ ಘಟಕ ಸ್ಥಾಪನೆಗೆ ಮುಂದಾದ ಟೊಯೋಟ

ಬೆಂಗಳೂರು:

     ಟೊಯೋಟಾ ಕಿರ್ಲೋಸ್ಕರ್‌ ಮೋಟಾರ್‌ ಕಂಪನಿಯು ಬಿಡದಿಯಲ್ಲಿ 3,300 ಕೋಟಿ ರೂ. ವೆಚ್ಚದಲ್ಲಿ ತನ್ನ ಮೂರನೇ ಕಾರು ಉತ್ಪಾದನಾ ಘಟಕವನ್ನು ಆರಂಭಿಸಲಿದ್ದು, ಈ ಸಂಬಂಧ ರಾಜ್ಯ ಸರ್ಕಾರ ಮತ್ತು ಕಂಪನಿ ಮಂಗಳವಾರ ಒಡಂಬಡಿಕೆಗೆ ಸಹಿ ಮಾಡಿದೆ.

    ಒಡಂಬಡಿಕೆ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಉಪಸ್ಥಿತರಿದ್ದರು. ಸರ್ಕಾರದ ಪರವಾಗಿ ಕೈಗಾರಿಕಾ ಇಲಾಖೆಯ ಆಯುಕ್ತೆ ಗುಂಜನ್‌ ಕೃಷ್ಣ ಮತ್ತು ಟೊಯೋಟಾ ಪರವಾಗಿ ಕಂಪನಿಯ ಉಪಾಧ್ಯಕ್ಷ ಸುದೀಪ್‌ ದಳವಿ ಅಂಕಿತ ಹಾಕಿ, ಒಡಂಬಡಿಕೆ ಪತ್ರವನ್ನು ವಿನಿಮಯ ಮಾಡಿಕೊಂಡರು.

     ಬಳಿಕ ಮಾತನಾಡಿದ ಸಚಿವ ಪಾಟೀಲ್‌ ಅವರು, ʻಟೊಯೋಟಾ ರಾಜ್ಯದಲ್ಲಿ ನೆಲೆಯೂರಿ 25 ವರ್ಷಗಳು ತುಂಬಿವೆ. ಈ ಸಂದರ್ಭದಲ್ಲೇ ಕಂಪನಿಯು ನೂತನ ಉತ್ಪಾದನಾ ಘಟಕ ಸ್ಥಾಪನೆಗೆ ಮುಂದಾಗಿರುವುದು ಸ್ವಾಗತಾರ್ಹವಾಗಿದೆ. ಇದರಿಂದ ಸ್ಥಳೀಯ ಮಟ್ಟದಲ್ಲಿ ಉತ್ಪಾದನಾ ಚಟುವಟಿಕೆಗಳಿಗೆ ಉತ್ತೇಜನ ಸಿಗಲಿದ್ದು, ನೂತನ ತಂತ್ರಜ್ಞಾನಾಧಾರಿತ ಕಾರುಗಳು ಎಲ್ಲರಿಗೂ ಸುಲಭವಾಗಿ ಲಭ್ಯವಾಗಲಿವೆʼ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಟೊಯೋಟಾ ಕಂಪನಿಯ ಎರಡು ಉತ್ಪಾದನಾ ಘಟಕಗಳು ಈಗಾಗಲೇ ಬಿಡದಿಯಲ್ಲಿ ಸಕ್ರಿಯವಾಗಿವೆ. ಉದ್ದೇಶಿತ ಮೂರನೇ ಘಟಕದಲ್ಲಿ ವರ್ಷಕ್ಕೆ ಹೆಚ್ಚುವರಿಯಾಗಿ 1 ಲಕ್ಷ ಕಾರುಗಳನ್ನು ಉತ್ಪಾದಿಸುವ ಸಾಮರ್ಥ್ಯವಿದ್ದು, ಇದರಿಂದ ಅಂದಾಜು 2 ಸಾವಿರ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದರು.

     ಸರ್ಕಾರವು ಕೈಗಾರಿಕಾ ರಂಗದ ಬೆಳವಣಿಗೆಗೆ ಆದ್ಯ ಗಮನ ಕೊಟ್ಟಿದ್ದು, ವಿದ್ಯುತ್‌ ಚಾಲಿತ ವಾಹನಗಳ ವಲಯ ಸೇರಿದಂತೆ ಒಟ್ಟು 9 ವಲಯಗಳಿಗೆ ಅನ್ವಯವಾಗುವಂತೆ ವಿಷನ್‌ ಗ್ರೂಪ್‌ಗಳನ್ನು ರಚಿಸಿದೆ. ಇವುಗಳಲ್ಲಿ ಗಣ್ಯ ಉದ್ಯಮಿಗಳೇ ಇದ್ದು, ರಾಜ್ಯಕ್ಕೆ ಬಂಡವಾಳ ಹೂಡಿಕೆಯನ್ನು ಆಕರ್ಷಿಲಾಗುವುದು. ಜತೆಗೆ ಕರ್ನಾಟಕ ಇನ್ವೆಸ್ಟ್‌ಮೆಂಟ್‌ ಫೋರಂ ಮತ್ತು ಸ್ಟ್ರಾಟೆಜಿಕ್‌ ಇನ್ವೆಸ್ಟ್‌ಮೆಂಟ್ ಫೋರಂ ಎರಡಕ್ಕೂ ಹೊಸ ರೂಪ ನೀಡಲಾಗಿದೆ ಎಂದು ವಿವರಿಸಿದರು.

     ನಾವು ಇಂಧನ ಭದ್ರತೆಯನ್ನು ಸುಧಾರಿಸುವ ಮೂಲಕ, ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವ ಮತ್ತು ಕಾರ್ಬನ್ ನ್ಯೂಟ್ರಾಲಿಟಿಯನ್ನು ಸಾಧಿಸುವ ಮೂಲಕ ಭಾರತಕ್ಕೆ ಉತ್ತಮ ಪರಿಹಾರಗಳನ್ನು, ವಿಶ್ವ ದರ್ಜೆಯ ಸ್ಥಳೀಯ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುತ್ತೇವೆ ಎಂದು ಯೋಶಿಮುರಾ ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap