ಏರ್‌ಪೋರ್ಟ್‌ಗಳಿಗೆ ಬಾಂಬ್‌ ಬೆದರಿಕೆ; ಯುವತಿ ಅರೆಸ್ಟ್!

ಉಡುಪಿ:

    ಕರ್ನಾಟಕದ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು ಸೇರಿ ದೇಶದ 11 ರಾಜ್ಯಗಳ ಹಲವು ಸಂಸ್ಥೆಗಳಿಗೆ ಬಾಂಬ್ ಬೆದರಿಕೆ ಸಂದೇಶ  ಕಳುಹಿಸಿದ್ದ ಯುವತಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಚೈನ್ನೈ ಮೂಲದ ರೀನಾ ಜೊಶಿಲ್ಡಾ ಬಂಧಿತ ಅರೋಪಿ. ಈಕೆಯನ್ನು ಗುಜರಾತ್​ನ ಅಹಮದಾಬಾದ್ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಚೆನ್ನೈಯಲ್ಲಿ ಎಂಎನ್‌ಸಿ ಕಂಪನಿ ಡೆಲಾಯಿಟ್ ಉದ್ಯೋಗಿಯಾದ ರೀನಾ ಜೊಶಿಲ್ಡಾ, ಹುಸಿ ಬಾಂಬ್ ಬೆದರಿಕೆ ಸಂದೇಶಗಳನ್ನು ಕಳುಹಿಸುತ್ತಿದ್ದಳು.

    ಆರೋಪಿ ರೀನಾ ಉಡುಪಿ ನಗರದ ವಿದ್ಯೋದಯ ಪಬ್ಲಿಕ್ ಸ್ಕೂಲ್​ಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆಯೊಡ್ಡಿದ್ದಳು. ಹೀಗಾಗಿ ತನಿಖೆಗಾಗಿ ಆರೋಪಿಯನ್ನು ಅಹಮದಾಬಾದ್ ಪೊಲೀಸರಿಂದ ಉಡುಪಿ ಪೊಲೀಸರು ಕಸ್ಟಡಿಗೆ ಪಡೆಯುವ ಸಾಧ್ಯತೆ ಇದೆ. ಜೂನ್ 16ರಂದು ಉಡುಪಿಯ ವಿದ್ಯೋದಯ ಪಬ್ಲಿಕ್ ಸ್ಕೂಲ್‌ಗೆ ಹುಸಿ ಬಾಂಬ್ ಬೆದರಿಕೆ ಸಂದೇಶ ಬಂದಿತ್ತು.

   ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ, ಶಾಲೆಗಳು, ಆಸ್ಪತ್ರೆಗಳು ಸೇರಿ 11 ರಾಜ್ಯಗಳ ವಿವಿಧ ಸಂಸ್ಥೆಗಳಿಗೆ ಆರೋಪಿ‌ ಯುವತಿ ಒಟ್ಟು 21 ಬಾಂಬ್‌ ಬೆದರಿಕೆ ಸಂದೇಶ ಕಳುಹಿಸಿದ್ದಳು. ಚೆನ್ನೈನ ಡೆಲಾಯಿಟ್ ಕಂಪನಿಯ ಸೀನಿಯರ್ ಕನ್ಸಲ್ಟಂಟ್ ಆಗಿರುವ ರೀನಾ ಜೊಶಿಲ್ಡಾ, ಸಹೋದ್ಯೋಗಿಯನ್ನು ಪ್ರೀತಿಸುತ್ತಿದ್ದಳು. ಆತ ಮದುವೆಯಾಗಲು ನಿರಾಕರಿಸಿದ್ದಕ್ಕೆ ಬಾಂಬ್‌ ಬೆದರಿಕೆ ಸಂದೇಶಗಳನ್ನು ಕಳುಹಿಸಿದ್ದಾಳೆ. ಅಲ್ಲದೇ ಆಕೆಯ ಸಂದೇಶಗಳ ಪೈಕಿ ಒಂದರಲ್ಲಿ ಇತ್ತೀಚೆಗೆ ಅಹಮದಾಬಾದ್‌ನಲ್ಲಿ ನಡೆದ ಏರ್‌ ಇಂಡಿಯಾ ವಿಮಾನ ದುರಂತದ ಹೊಣೆಯನ್ನು ಹೊತ್ತಿರುವುದಾಗಿ ಯುವತಿ ತಿಳಿಸಿದ್ದಾಳೆ ಎಂದು ಪೋಲೀಸರು ತಿಳಿಸಿದ್ದಾರೆ. 

   ‘ನಿಮ್ಮ ಶಾಲೆಯಲ್ಲಿ ಬಾಂಬ್ ಸ್ಫೋಟಿಸಿದರೆ ಮಕ್ಕಳು ಸಾಯುತ್ತಾರೆ. ಮಕ್ಕಳು ಸತ್ತರೆ ಮಾತ್ರ ಪೋಷಕರು ಪ್ರತಿಭಟನೆ ಮಾಡುತ್ತಾರೆ. ಪೊಲೀಸರು ಸರಿಯಾದ ತನಿಖೆ ನಡೆಸಿ ಹೈದರಾಬಾದಿನ ಅತ್ಯಾಚಾರ ಸಂತ್ರಸ್ತೆಗೆ ನ್ಯಾಯ ಒದಗಿಸುತ್ತಾರೆ’ ಎಂದು ಇ-ಮೇಲ್ ಸಂದೇಶದಲ್ಲಿ ಉಲ್ಲೇಖಿಸಲಾಗಿತ್ತು. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗುಜರಾತ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಆರೋಪಿ ಇದೇ ರೀತಿಯ ಇ-ಮೇಲ್ ಸಂದೇಶ ಕಳುಹಿಸಿದ್ದಳು. ಶಾಲೆಗಳು, ಆಸ್ಪತ್ರೆಗಳು ಮತ್ತು ಕ್ರೀಡಾಂಗಣಗಳಿಗೆ ಬಾಂಬ್ ಬೆದರಿಕೆ ಹಾಕಿದ್ದಳು.

   ಸದ್ಯ, ಗುಜರಾತಿನ ಅಹಮದಾಬಾದ್ ಪೊಲೀಸರಿಂದ ಆರೋಪಿ ರೀನಾ ಜೋಶಿಲ್ಡ ವಿಚಾರಣೆ ನಡೆಯುತ್ತಿದೆ. ಆಕೆಯನ್ನು ಉಡುಪಿಯ ಶಾಲೆಗೆ ಬಾಂಬ್ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿ ಕಸ್ಟಡಿ ನೀಡಲು ಉಡುಪಿ ಪೊಲೀಸರು ಮನವಿ ಮಾಡಿದ್ದಾರೆ. ಅಹಮದಾಬಾದ್ ಪೊಲೀಸರಿಗೆ ಪತ್ರ ಬರೆದಿದ್ದಾರೆ.

   ಅಹಮದಾಬಾದ್ ಪೊಲೀಸರ ತನಿಖೆ ಮುಗಿದ ನಂತರ ಆರೋಪಿಯನ್ನು ನಮ್ಮ ವಶಕ್ಕೆ ನೀಡುವ ಸಾಧ್ಯತೆ ಇದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕ‌ರ್ ಮಾಹಿತಿ ನೀಡಿದ್ದಾರೆ.

Recent Articles

spot_img

Related Stories

Share via
Copy link