ಕೊಲ್ಹಾಪುರ:
ಜನರನ್ನು ಹೆದರಿಸಿ ಸಂವಿಧಾನ ಮತ್ತು ಸಂವಿಧಾನಿಕ ಸಂಸ್ಥೆಗಳನ್ನು ಧ್ವಂಸಗೊಳಿಸಿದ ನಂತರ ಶಿವಾಜಿ ಮಹಾರಾಜರ ಮುಂದೆ ತಲೆಬಾಗಿಸುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಪಶ್ಚಿಮ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಮರಾಠ ಸಾಮ್ರಾಜ್ಯದ ಸಂಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಅನಾವರಣಗೊಳಿಸಿ ಮಾತನಾಡಿದ ರಾಹುಲ್ ಗಾಂಧಿ, ಸಿಂಧುದುರ್ಗ ಜಿಲ್ಲೆಯ ರಾಜ್‌ಕೋಟ್ ಕೋಟೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ಅವರ ಪ್ರತಿಮೆ ಉರುಳಿಬಿದ್ದ ಘಟನೆಗೆ ಸಂಬಂಧಿಸಿದಂತೆ ಆಡಳಿತಾರೂಢ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡರು.
ಜನರನ್ನು ಹೆದರಿಸಿ, ದೇಶದ ಸಂವಿಧಾನ ಮತ್ತು ಸಂವಿಧಾನಿಕ ಸಂಸ್ಥೆಗಳನ್ನು ಧ್ವಂಸಗೊಳಿಸಿದ ನಂತರ ಶಿವಾಜಿ ಮಹಾರಾಜರ ಮುಂದೆ ತಲೆಬಾಗಿಸುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ರಾಹುಲ್ ಗಾಂಧಿ ಹೇಳಿದರು. ಶಿವಾಜಿ ಮಹಾರಾಜ್ ಮತ್ತು ಅವರ ಪ್ರತಿಮೆ ಕುಸಿತದಿಂದ ಗಾಯಗೊಂಡವರಿಗೆ ಕ್ಷಮೆಯಾಚಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.
“ಛತ್ರಪತಿ ಶಿವಾಜಿ ಮಹಾರಾಜರು ಕೇವಲ ಹೆಸರು ಅಥವಾ ರಾಜನಲ್ಲ. ಅವರು ನಮ್ಮ ಆರಾಧ್ಯ ದೈವ. ಇಂದು ನಾನು ಅವರ ಪಾದಗಳಿಗೆ ತಲೆಬಾಗಿ ನನ್ನ ದೇವರಲ್ಲಿ ಕ್ಷಮೆಯಾಚಿಸುತ್ತೇನೆ” ಎಂದು ಆಗಸ್ಟ್ 30 ರಂದು ಮಹಾರಾಷ್ಟ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮೋದಿ ಹೇಳಿದ್ದರು.