ತೆರಿಗೆ ಪಾಲಿನಲ್ಲಿ ರಾಜ್ಯಕ್ಕೆ ಅನ್ಯಾಯ : ಸಿದ್ದರಾಮಯ್ಯ

ಬೆಂಗಳೂರು:

   ಅನುದಾನದ ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿದ್ದು, ತಾರತಮ್ಯವಾಗಿದೆ. 15ನೇ ಹಣಕಾಸಿನ ಆಯೋಗದಲ್ಲಿ ಕರ್ನಾಟಕಕ್ಕೆ ಆದ ಅನ್ಯಾಯವನ್ನು ಕೇಂದ್ರ ಸರ್ಕಾರ ಸರಿಪಡಿಸಿಲ್ಲ ಎಂದು ಸಿದ್ದರಾಮಯ್ಯ ಅವರು ಕಿಡಿಕಾರಿದ್ದಾರೆ.ರಾಜ್ಯೋತ್ಸವದ ಹಿನ್ನೆಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿದರು.

    ಬಳಿಕ ರಾಜ್ಯದ ಜನತೆಯನ್ನುದ್ದೇಶಿಸಿ ಭಾಷಣ ಮಾಡಿದ ಅವರು, ರಾಜ್ಯಗಳ ಏಕೀಕರಣ ಆಗಿ 68 ವರ್ಷಗಳು ತುಂಬಿವೆ, 69ಕ್ಕೆ ಕಾಲಿಟ್ಟಿದ್ದೇವೆ. 1953 ರಲ್ಲಿ ಫಜಲ್ ಅಲಿ ನೇತೃತ್ವದಲ್ಲಿ ರಾಜ್ಯಗಳ ಪುನರ್ವಿಂಗಡಣೆ ಸಮಿತಿ ರಚಿಸಲಾಯಿತು. ಇವರು ಕೊಟ್ಟ ವರದಿ‌ ಆಧಾರದಲ್ಲಿ ಭಾಷಾವಾರು ರಾಜ್ಯಗಳ ವಿಂಗಡಣೆ ಆಯಿತು. ಆ ದಿನವನ್ನು ನಾವೆಲ್ಲರೂ ಇಡೀ ದೇಶದಲ್ಲಿ ರಾಜ್ಯಗಳ ಏಕೀಕರಣ ದಿನವಾಗಿ ಆಚರಿಸುತ್ತೇವೆ.

    1973ರವರೆಗೆ ರಾಜ್ಯ ಕರ್ನಾಟಕ ಆಗಿರಲಿಲ್ಲ, ಮೈಸೂರು ರಾಜ್ಯ ಆಗಿತ್ತು. ನಮ್ಮ ರಾಜ್ಯಕ್ಕೆ ಕರ್ನಾಟಕ ಅಂತ 1973 ನವೆಂಬರ್ 1 ರಂದು ಹೆಸರು ಇಡಲಾಯಿತು. ನಾಮಕರಣ ಆಗಿ 51 ವರ್ಷ ತುಂಬುತ್ತಿದೆ. ನಾಮಕರಣ ಆಗಿ 50 ವರ್ಷ ಆದಾಗ ಬಿಜೆಪಿ ಸರ್ಕಾರ ರಾಜ್ಯದಲ್ಲಿತ್ತು, ಆದರೆ, ಅವರು 50ನೇಯ ವರ್ಷದ ಆಚರಣೆ ಮಾಡಲಿಲ್ಲ. ನಾವು ಬಂದ ಮೇಲೆ ಇಡೀ ವರ್ಷ ಸಂಭ್ರಮದಿಂದ ಆಚರಣೆ ಮಾಡಿದೆವು ನಾವು ವ್ಯವಹಾರದಲ್ಲಿ ಭಾಷೆ ಬಳಕೆ ಜೊತೆಗೆ ಬೇರೆಯವರ ಜತೆಗೂ ಕನ್ನಡದಲ್ಲೇ ಮಾತಾಡುವ ಶಪಥ ಮಾಡಬೇಕು ಎಂದು ಕರೆ ನೀಡಿದರು.

    ಬೇರೆ ಭಾಷಿಕರಿಗೂ ಕನ್ನಡ ಕಲಿಸುವ ಕೆಲಸ ಮಾಡಬೇಕು. ಯಾವುದೇ ಧರ್ಮ, ಭಾಷೆ, ಪ್ರಾಂತ್ಯದವರಾಗಲಿ, ಕರ್ನಾಟಕದಲ್ಲಿ ಇರುವವರೆಲ್ಲರೂ ಕನ್ನಡಿಗರೇ, ಈ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸ ಇದೆ, ಕನ್ನಡ ಶಾಸ್ತ್ರೀಯ ಭಾಷೆಯಾಗಿದೆ. ನಾವು ನಮ್ಮ ಭಾಷೆಯನ್ನು ಯಾವುದೇ ಕಾರಣಕ್ಕೂ ಬಲಿ ಕೊಟ್ಟು ಉದಾರಿಗಳಾಗಬಾರದು. ಭಾಷೆ ವ್ಯಾಮೋಹವೂ ಅತಿಯಾಗಿರಬಾರದು, ಆದರೆ, ಕನ್ನಡ ಅಭಿಮಾನ ಬಿಟ್ಟುಕೊಡಬಾರದು. ಕನ್ನಡದ ಬಗ್ಗೆ ಅಭಿಮಾನ ಇರಬೇಕು, ಬೇರೆ ರಾಜ್ಯಗಳಲ್ಲಿ ದುರಾಭಿಮಾನ ಇರುತ್ತದೆ. ಆದರೆ, ನಮ್ನ ರಾಜ್ಯದಲ್ಲಿ ಅಭಿಮಾನ ಇದೆ.

   ಅಭಿಮಾನ ಇದ್ದರೆ ಮಾತ್ರ ಕನ್ನಡ ಉಳಿಸಲು ಬೆಳೆಸಲು ಸಾಧ್ಯ. ಯಾರಿಗೆ ಕನ್ನಡ ಬರಲ್ಲ, ಅವರಿಗೆ ಕನ್ನಡ ಕಲಿಸುವ ಕೆಲಸ ಮಾಡಬೇಕು. ಸಾಮಾಜಿಕ ಜಾಲತಾಣಗಳಲ್ಲಿ, ಕನ್ನಡ ಮತ್ತೆ ಕನ್ನಡಿಗರಿಗೆ ಹೀಯಾಳಿಸುವ ಪ್ರವೃತ್ತಿ ಬೆಳೆಯುತ್ತಿದೆ. ಇದು ನಾಡದ್ರೋಹ, ಇಂತವರ ವಿರುದ್ಧ ಸರ್ಕಾರ ಯಾವುದೇ ಮುಲಾಜಿಲ್ಲದೇ ಕಠಿಣ ಕ್ರಮ ತಗೊಳ್ಳುತ್ತದೆ. ರಾಜ್ಯೋತ್ಸವದ ದಿನ ಶಪಥ ಮಾಡೋಣ, ನಾವು ಕನ್ನಡಿಗರಾಗಿ ಇರುತ್ತೇವೆ, ಬೇರೆಯವರಿಗೆ ಕನ್ನಡ ಕಲಿಸುತ್ತೇವೆ ಎಂದು ಹೇಳಿದರು.

   ರಾಜ್ಯದ ಎಲ್ಲ 57 ಲಕ್ಷ ಶಾಲಾ‌ ಮಕ್ಕಳಿಗೆ ವಾರದ ಆರು ದಿನ ಮೊಟ್ಟೆ ಕೊಡುತ್ತಿದ್ದೇವೆ. ಚಿಕ್ಕಿ,‌ ಬಾಳೆ ಹಣ್ಣು ಕೊಡುತ್ತಿದ್ದೇವೆ. ಹಾಲಿನ ಜೊತೆಗೆ ರಾಗಿ ಮಾಲ್ಟ್ ಕೊಡುತ್ತಿದ್ದೇವೆ. ಪ್ರತೀ ದಿನ 57 ಲಕ್ಷ ಮಕ್ಕಳಿಗೆ ಮೊಟ್ಟೆ ಕೊಡುತ್ತಿದ್ದೇವೆ. ನಮ್ಮ ದೇಶದಲ್ಲಿ ಬಡತನ ಇದೆ, ಬಡವರ ಮಕ್ಕಳಲ್ಲಿ ಅಪೌಷ್ಟಿಕತೆ ಇದೆ. ಹೀಗಾಗಿಅಸಮಾನತೆ, ಅಪೌಷ್ಟಿಕತೆ ಹೋಗಲಾಡಿಸಲು ಗುಣಮಟ್ಟದ ಶಿಕ್ಷಣ ಕೊಡುವ ಸಲುವಾಗಿ ಈ ಯೋಜನೆಗಳನ್ನು ಮಾಡುತ್ತಿದ್ದೇವೆ ಎಂದು ತಿಳಿಸಿದರು.

    ಬಳಿಕ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ ಅವರು, ಕರ್ನಾಟಕಕ್ಕೆ ದೊಡ್ಡ ಅನ್ಯಾಯ ಆಗುತ್ತಿದೆ, ಮಹಾರಾಷ್ಟ್ರ ಬಿಟ್ಟರೆ ಅತೀ ಹೆಚ್ಚು ತೆರಿಗೆ ಕೊಡುವ ರಾಜ್ಯ ನಮ್ಮದು. ನಾವು 4 ಲಕ್ಷ ಕೋಟಿಗೂ ಹೆಚ್ಚು ತೆರಿಗೆ ಕೊಟ್ಟರೂ ವಾಪಸ್ ಪಡೆಯುತ್ತಿರೋದು 50-60 ಸಾವಿರ ಕೋಟಿ ಅಷ್ಟೇ.. ಅಂದರೆ 1 ಒಂದು ರೂ. ನಲ್ಲಿ 14-15 ಪೈಸೆ ಮಾತ್ರ ನಮಗೆ ವಾಪಸ್ ಕೊಡುತ್ತಿದ್ದಾರೆ. ನಾವು ಮುಂದುವರೆದ ರಾಜ್ಯ ಎಂದು ತೆರಿಗೆ ಪಾಲಿನಲ್ಲಿ ಅನ್ಯಾಯ ಮಾಡುತ್ತಿದ್ದಾರೆ. ಹಸು ಹಾಲು ಕೊಡುತ್ತೆ ಎಂದು ಕರುವಿಗೆ ಹಾಲು ಕೊಡದಿದ್ದರೆ, ಆ ಕರು ದುರ್ಬಲ ಆಗಲಿದೆ. ನಾವು ಕೊಡುವ ತೆರಿಗೆ, ನಮ್ಮ ತೆರಿಗೆ ಪಾಲು ಸರಿಯಾಗಿ ಕೊಡಿ ಎಂದರೆ ಅದಕ್ಕೆ ರಾಜಕೀಯ ಬಣ್ಣ ಕೊಡುತ್ತಾರೆ.

    ಇದನ್ನು ನಾವೆಲ್ಲ ಕನ್ನಡಿಗರೂ ಅರ್ಥ ಮಾಡಿಕೊಳ್ಳಬೇಕು. ನಮ್ಮ ಹಕ್ಕು ನಾವು ಕೇಳಬೇಕು. ಎಲ್ಲ ಸಂಸದರೂ ಲೋಕಸಭೆಯಲ್ಲಿ ಪ್ರತಿಭಟಿಸಿ ತಮ್ಮ ದನಿಯನ್ನು ಲೋಕಸಭೆಯಲ್ಲಿ ಎತ್ತಬೇಕು. ಆಗ ಮಾತ್ರ ನಮಗೆ ನ್ಯಾಯ ಸಿಗುತ್ತದೆ ಎಂದು ಹೇಳಿದರು .ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮಾತನಾಡಿ, ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ರಾಜ್ಯೋತ್ಸವ ಆಚರಿಸುವುದನ್ನು ಕಡ್ಡಾಯಗೊಳಿಸಲಾಗುತ್ತಿದೆ ಎಂದರು.

    ಈ ವರ್ಷದಿಂದ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸುವುದನ್ನು ಕಡ್ಡಾಯಗೊಳಿಸಲಾಗಿದೆ, ದಿನದ ಅಂತ್ಯದ ವೇಳೆಗೆ ಈ ಬಗ್ಗೆ ವರದಿ ಪಡೆಯುತ್ತೇನೆಂದು ಘೋಷಿಸಿದರು.ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ಮಾತನಾಡಿ, ರಾಜ್ಯದಲ್ಲಿ “ಹಿಂದಿ ಹೇರಿಕೆ” ಮುಂದುವರೆದಿದೆ ಎಂದು ಹೇಳಿದರು, ಕೆಲವು ಪರೀಕ್ಷೆಗಳೇ ಇದಕ್ಕೆ ಉದಾಹರಣೆ ಎಂದರು. ತೆರಿಗೆ ಹಂಚಿಕೆಯಲ್ಲಿಯೂ ನಮಗೆ ನ್ಯಾಯ ಸಿಗುತ್ತಿಲ್ಲ. ಕೇಂದ್ರ ಸರಕಾರವು ಮಲತಾಯಿ ಧೋರಣೆಯಲ್ಲಿ ತೊಡಗಿದೆ ಎಂದು ಕಿಡಿಕಾರಿದರು.

Recent Articles

spot_img

Related Stories

Share via
Copy link