ನವದೆಹಲಿ:
ಭಾರತದ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಯಾವುದೇ ಮುಸ್ಲಿಂ ಸಚಿವರಿಲ್ಲದ ಕೇಂದ್ರ ಸಚಿವ ಸಂಪುಟ ರಚನೆಯಾಗಿದೆ.
ಭಾನುವಾರ ರಾತ್ರಿ ಅಸ್ತಿತ್ವಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರದಲ್ಲಿ ಹಲವು ರಾಜ್ಯಗಳು, ವರ್ಗಗಳು ಮತ್ತು ಜಾತಿಗಳಿಗೆ ಪ್ರಾತಿನಿಧ್ಯ ನೀಡಲಾಗಿದೆ. ಆದರೆ ದೇಶದ 200 ಮಿಲಿಯನ್ ಮುಸ್ಲಿಂ ಜನಸಂಖ್ಯೆಗೆ ಒಂದೇ ಒಂದು ಸಚಿವ ಸ್ಥಾನ ನೀಡಿಲ್ಲ.
ಕುತೂಹಲಕಾರಿಯಾಗಿ, 2022 ರಲ್ಲಿ ಬಿಜೆಪಿಯ ಮುಖ್ತಾರ್ ಅಬ್ಬಾಸ್ ನಖ್ವಿ ಅವರು ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಮೂರು ವರ್ಷಗಳ ನಂತರ ರಾಜ್ಯಸಭೆಗೆ ಮರು ಆಯ್ಕೆಯಾಗದ ಕಾರಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಂತರ ನರೇಂದ್ರ ಮೋದಿ ನೇತೃತ್ವದ ಸರ್ಕಾರದಲ್ಲಿ ಮುಸ್ಲಿಂ ಸಚಿವರು ಇರಲಿಲ್ಲ.
ಬಿಜೆಪಿ ಸರ್ಕಾರದ ಸಂಪುಟದಲ್ಲಿ ನಖ್ವಿ ಒಬ್ಬರೇ ಮುಸ್ಲಿಂ ಸಚಿವರಾಗಿದ್ದರು. 2014 ರಲ್ಲಿ, ಪ್ರಧಾನಿ ನರೇಂದ್ರ ಮೋದಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಾಗ, ಆಗಿನ ರಾಜ್ಯಸಭಾ ಸಂಸದ ನಜ್ಮಾ ಹೆಪ್ತುಲ್ಲಾ ಅವರನ್ನು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವರನ್ನಾಗಿ ಮಾಡಲಾಯಿತು.
1999 ರಲ್ಲಿ, ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರ ಇಬ್ಬರು ಮುಸ್ಲಿಮ ಸಚಿವರನ್ನು ಹೊಂದಿತ್ತು – ಶಾನವಾಜ್ ಹುಸೇನ್ ಮತ್ತು ಒಮರ್ ಅಬ್ದುಲ್ಲಾ. 1998 ರಲ್ಲಿ ವಾಜಪೇಯಿ ನೇತೃತ್ವದ ಸರ್ಕಾರದಲ್ಲಿ ನಖ್ವಿ ಅವರು ರಾಜ್ಯ ಸಚಿವರಾಗಿದ್ದರು.
ಈ ಹಿಂದೆಯೂ ಸಹ, ಸಾರ್ವತ್ರಿಕ ಚುನಾವಣೆಯ ನಂತರ ಕೇಂದ್ರ ಸಂಪುಟದಲ್ಲಿ ಯಾವಾಗಲೂ ಕನಿಷ್ಠ ಒಬ್ಬ ಮುಸ್ಲಿಂ ಸಂಸದರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದರು. ಆದರೆ ಇದೇ ಮೊದಲು ಬಾರಿಗೆ ಕೇಂದ್ರದಲ್ಲಿ ಮುಸ್ಲಿಂ ಸಮುದಾಯ ಸಂಪೂರ್ಣ ಪ್ರಾತಿನಿಧ್ಯದಿಂದ ವಂಚಿತವಾಗಿದೆ.