ವಿಕಸಿತ ಭಾರತ ಸಂಕಲ್ಪ ಯಾತ್ರೆ : ರಾಜ್ಯ ಸರ್ಕಾರದಿಂದ ಅಸಹಕಾರ : ಶೋಭಾ ಕರಂದ್ಲಾಜೆ

ಉಡುಪಿ:

      ಕೇಂದ್ರ ಸರಕಾರದ ‘ವಿಕಸಿತ ಭಾರತ ಸಂಕಲ್ಪ ಯಾತ್ರೆ’ಗೆ ರಾಜ್ಯ ಸರ್ಕಾರ ಸಂಪೂರ್ಣ ಅಸಹಕಾರ ತೋರಿಸುತ್ತಿದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಉಡುಪಿಯ ಅಂಬಲಪಾಡಿ ಗ್ರಾಪಂ ಆವರಣದಲ್ಲಿ ಗುರುವಾರ ಬೆಳಗ್ಗೆ ಯಾತ್ರೆಗೆ ಚಾಲನೆ ನೀಡಿ ಮಾತನಾಡುವ ವೇಳೆ ವಿಷಯವನ್ನು ದೀರ್ಘವಾಗಿ ಪ್ರಸ್ತಾಪಿಸಿದ ಸಚಿವೆ, ಬಳಿಕ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆಯೂ ಈ ಬಗ್ಗೆ ತಮ್ಮ ಸಿಟ್ಟನ್ನು ಹೊರಹಾಕಿದರು.

    ಇದು ಯಾವುದೇ ಪಕ್ಷದ ಕಾರ್ಯಕ್ರಮವಲ್ಲ. ಕೇಂದ್ರ ಸರಕಾರದ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸುವ ಯೋಜನೆ. ದೇಶಾದ್ಯಂತ ಸುಮಾರು 3000 ವ್ಯಾನ್‌ಗಳು ಈಗಾಗಲೇ ಹಳ್ಳಿ ಬಳ್ಳಿ ತಿರುಗುತಿದ್ದಾವೆ. ಕರ್ನಾಟಕದಲ್ಲಿ ರಾಜ್ಯ ಸರಕಾರ ಜಿಲ್ಲಾಧಿಕಾರಿಗಳು ಮತ್ತು ಸಿಇಒಗಳಿಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ತಿಳಿಸಿದೆ. ನ.15ರಂದು ಯೋಜನೆ ಪ್ರಾರಂಭಗೊಳ್ಳುವ ಮೊದಲು ಹಿಂದಿನ ದಿನ ರಾಜ್ಯ ಸರಕಾರ ಈ ಬಗ್ಗೆ ಮೌಖಿಕ ಆದೇಶ ನೀಡಿದೆ ಎಂದು ಆರೋಪಿಸಿದರು.

  ಈ ಕಾರ್ಯಕ್ರಮದಲ್ಲಿ ಯಾವುದೇ ಅಧಿಕಾರಿಗಳು ಭಾಗವಹಿಸಬಾರದು ಎಂದು ಹೇಳಿದೆ. ಕೇಂದ್ರ ಸರಕಾರದ ಅಭಿವೃದ್ಧಿಯಲ್ಲಿ ರಾಜ್ಯ ಸರ್ಕಾರ ರಾಜಕಾರಣ ಮಾಡುತ್ತಿದೆ. ತೀರಾ ಚೀಪ್ ರಾಜಕೀಯವನ್ನು ರಾಜ್ಯ ಸರಕಾರ ಮಾಡುತ್ತಿದೆ. ಕೇಂದ್ರ ಸರ್ಕಾರದ ಯೋಜನೆಗಳಿಂದ ರಾಜ್ಯಕ್ಕೆ ಅನುಕೂಲ ಆಗಿದೆ. ಜನರಿಗೆ ಆಗುವ ಅನುಕೂಲ ಯಾಕೆ ತಪ್ಪಿಸುತ್ತೀರಿ? ಎಂದು ಖಾರವಾಗಿ ಪ್ರಶ್ನಿಸಿದರು.

   ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ನಾವು ಕೊಟ್ಟ ನಾಲ್ಕು ಸಾವಿರ ರೂ. ನಿಲ್ಲಿಸಿದ್ದೀರಿ. ಕೇಂದ್ರ ಕೊಡುವ ಹಣವನ್ನು ರೈತರಿಗೆ ನೀಡಲು ನೀವು ಸಿದ್ಧವಿಲ್ಲ. ಅಭಿವೃದ್ಧಿಯಲ್ಲಿ ಸಿದ್ದರಾಮಯ್ಯ ರಾಜಕೀಯ ಮಾಡುತ್ತಿದ್ದಾರೆ. ಇದನ್ನು ನಾವು ಉಗ್ರವಾಗಿ ವಿರೋಧಿಸುತ್ತೇವೆ ಎಂದು ಹೇಳಿದರು. 

   ಬೆಳಗಾವಿ ಅಧಿವೇಶದ ವೇಳೆ ವಿಧಾನಸಭೆಯಲ್ಲಿ ನಮ್ಮ ಶಾಸಕರು ಇದನ್ನು ವಿರೋಧಿಸುತ್ತಾರೆ. ರಾಜ್ಯ ಸರ್ಕಾರದ ಅಧಿಕಾರಿಗಳು ಕಾಂಗ್ರೆಸ್ ಪಕ್ಷದ ಸ್ವತ್ತಲ್ಲ. ಯಾವುದೇ ಸರಕಾರ ಬಂದರೂ ಅವರು ಕೆಲಸ ಮಾಡಬೇಕು. ಆಧಿಕಾರಿಗಳಲ್ಲಿ ರಾಜಕೀಯದ ವಿಷ ಬೀಜ ಬಿತ್ತುತ್ತಿದ್ದೀರಿ ಎಂದು ಆರೋಪಿಸಿದ ಅವರು, ಸಿದ್ದರಾಮಯ್ಯರೇ ಕ್ಷುಲ್ಲಕ ರಾಜಕಾರಣ ಬಿಡಿ. ನೀವು ಕೇಂದ್ರದ ಬಳಿ ಬರೋದೇ ಇಲ್ವಾ ನಿಮಗೆ ಯಾವ ಸಹಕಾರನೂ ಬೇಡ್ವಾ? ಎಂದು ಪ್ರಶ್ನಿಸಿದರು.

ಕೇಂದ್ರ ಸರಕಾರದ ಯೋಜನೆ ಬಿಟ್ಟು ಹೋಗಿದ್ದರೆ ಜನರಿಗೆ ತಲುಪಿಸಿ. ಫೆಡರಲ್ ವ್ಯವಸ್ಥೆಯಲ್ಲಿ ಪರಸ್ಪರ ಸಹಕಾರ ಅಗತ್ಯ. ಸಿದ್ದರಾಮಯ್ಯರೇ, ಬ್ಯಾಂಕ್ ಅಧಿಕಾರಿಗಳನ್ನು ನೋಡಲ್ ಅಧಿಕಾರಿ ಮಾಡಿ ಕೆಲಸ ಮಾಡುವ ಸ್ಥಿತಿ ಬಂದಿದೆ. ಕೇಂದ್ರ ಸರಕಾರದ ಯೋಜನೆಗಳ ಫಲ ಜನರಿಗೆ ಸಿಗದಿದ್ದರೆ ಅದಕ್ಕೆ ನೇರವಾಗಿ ಸಿದ್ದರಾಮಯ್ಯ ಕಾರಣರಾಗುತ್ತಾರೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap