ರಾಜ್ಯಪಾಲರ ಭಾಷಣ : ಸಮಸ್ಯೆಗಳ ಕುರಿತು ಒಂದು ಮಾತು ಸಹ ಪ್ರಸ್ತಾಪಿಸಿಲ್ಲ

ಬೆಂಗಳೂರು :

     ಜನಪರ ಸಮಸ್ಯೆಗಳನ್ನು ಗುರುತಿಸಿ ನಿವಾರಿಸುವುದು ನೈಜ ಸರ್ಕಾರದ ಕೆಲಸ. ಆದರೆ ರಾಜ್ಯ ಬಿಜೆಪಿ ಸರ್ಕಾರ ರಾಜ್ಯಪಾಲರ ಭಾಷಣದ 82 ಪ್ಯಾರಾಗಳ ಭಾಷಣದಲ್ಲಿ ಒಂದೇ ಒಂದು ಮಾತನ್ನೂ ಸಹ ಈ ಸಮಸ್ಯೆಗಳ ಕುರಿತು ಪ್ರಸ್ತಾಪಿಸಿಲ್ಲ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತೀವ್ರ ಅಸಮಧಾನ ವ್ಯಕ್ತಪಡಿಸಿದ್ದಾರೆ.   

ರಾಜ್ಯಪಾಲರ ಭಾಷಣಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ಈ ಭಾಷಣ ತೌಡು ಕುಟ್ಟಿದಂತೆ ಕಾಣಿಸುತ್ತಿದೆ. ಬತ್ತ ಕುಟ್ಟಿದರೆ ಅಕ್ಕಿ ಬರುತ್ತದೆ. ತೌಡು ಕುಟ್ಟಿದರೆ ಬರಿ ಉಬ್ಬಲು ಬರುತ್ತದೆ. ಈ ಭಾಷಣವನ್ನು ಭೂಸಾ ಅಥವಾ ತೌಡು ಕುಟ್ಟುವ ಭಾಷಣ ಎಂದು ಕರೆಯುವುದಾಗಿ ತಿಳಿಸಿದ್ದಾರೆ.

    ಬಿಜೆಪಿ ಸರ್ಕಾರ ನಾಲ್ಕು ವರ್ಷಗಳಲ್ಲಿ ತಾನು ಏನನ್ನೂ ಮಾಡಿಲ್ಲ. ಭ್ರಷ್ಟಾಚಾರ ಬಿಟ್ಟು, ರಾಜ್ಯದ ಧರ್ಮ-ಜಾತಿ ಸಂಘರ್ಷವನ್ನು ಬೆಳೆಸಿದ್ದು ಬಿಟ್ಟು ಬೇರೆ ಸಾಧನೆಗಳನ್ನು ಮಾಡಿಲ್ಲ ಎನ್ನುವುದನ್ನು ರಾಜ್ಯಪಾಲರ ಭಾಷಣದಲ್ಲಿ ಒಪ್ಪಿಕೊಂಡಿದೆ. ಹೀಗೆ ತನ್ನ ವೈಫಲ್ಯವನ್ನು ಒಪ್ಪಿಕೊಂಡಿರುವುದಕ್ಕೆ ರಾಜ್ಯಪಾಲರನ್ನು ಮತ್ತು ಸರ್ಕಾರವನ್ನು ಅಭಿನಂದಿಸುವುದಾಗಿ ವ್ಯಂಗ್ಯವಾಡಿದ್ದಾರೆ.

    ನಿರುದ್ಯೋಗ, ಬೆಲೆ ಏರಿಕೆ, ಭ್ರಷ್ಟಾಚಾರ, ಸೌಹಾರ್ಧದ ಸಮಸ್ಯೆ, ಅಶಾಂತಿಯ ವಾತಾವರಣ, ಕೃಷಿ ಬಿಕ್ಕಟ್ಟು, ನೇಕಾರರ, ಮೀನುಗಾರರ ಸಮಸ್ಯೆಗಳು, ಹಾಗೂ ಸಣ್ಣ ಕೈಗಾರಿಕೆಗಳಿಗೆ ಒತ್ತು ಕೊಡದೆ ಇದ್ದದ್ದು ಮುಂತಾದ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದೆ. ಕೃಷ್ಣ ಮೇಲ್ದಂಡೆ ಯೋಜನೆಗೆ ಸಂಬಂಧಪಟ್ಟಂತೆ ಕರ್ನಾಟಕಕ್ಕೆ ಹಂಚಿಕೆಯಾಗಿರುವ ನೀರನ್ನು ಬಳಸಿಕೊಳ್ಳುವಲ್ಲಿ ವಿಫಲವಾಗಿದ್ದು, ಈ ನೀರನ್ನು ತಮಗೆ ಹಂಚಿಕೆ ಮಾಡಿ ಎಂದು ಕೇಂದ್ರ ಸರ್ಕಾರ ಹಾಗೂ ಸುಪ್ರೀಂಕೋರ್ಟ್ಗೆ ತೆಲಂಗಾಣ ಸರ್ಕಾರ ಮೊರೆ ಹೋಗಿದೆ. ಬಹಳ ಕಾಲದಿಂದ ಮಹದಾಯಿ, ಮೇಕೆದಾಟು, ಭದ್ರಾ-ಕೃಷ್ಣ ಮೇಲ್ದಂಡೆ, ತುಂಗಭದ್ರ ಅಣೆಕಟ್ಟುಗಳ ನಿರ್ಮಾಣ ಮುಂತಾದ ಅನೇಕ ನೀರಾವರಿ ಸಮಸ್ಯೆಗಳನ್ನು ಎದುರಿಸುತ್ತಿದೆ. ಆದರೆ ನೀರಾವರಿ ವಿಚಾರದಲ್ಲಿ ಏನನ್ನೂ ಮಾಡಿಲ್ಲ ಎನ್ನುವುದನ್ನು ಸರ್ಕಾರವೇ ಒಪ್ಪಿಕೊಂಡಿದೆ.

    ಕೊಪ್ಪಳ, ಯಾದಗಿರಿ, ಬಳ್ಳಾರಿ ಜಿಲ್ಲೆಗಳಿಗೆ ಸಮರ್ಪಕವಾಗಿ ನೀರಾವರಿ ಸೌಲಭ್ಯ ಒದಗಿಸಲು ಸಾಧ್ಯವಾಗಿಲ್ಲ. ನೀರಾವರಿ ಯೋಜನೆಗಳ ಕುರಿತು ಯಾವುದೇ ಸ್ಪಷ್ಟ ಪ್ರಸ್ತಾಪವಿಲ್ಲ. ಆರ್ಥಿಕತೆ ನಿರ್ಮಾಣ ಮಾಡುವುದರಲ್ಲಿ ಸಣ್ಣ ಕೈಗಾರಿಕೆಗಳ ಪಾತ್ರ ದೊಡ್ಡದು. ಸಂಘಟಿತ, ಅಸಂಘಟಿತ ಸೇರಿದಂತೆ 2 ಕೋಟಿಗೂ ಹೆಚ್ಚು ಕಾರ್ಮಿಕರಿದ್ದು, ಸಣ್ಣ ಕೈಗಾರಿಕೆಗಳ ಅಭಿವೃದ್ಧಿಗೆ ಸರ್ಕಾರ ನಯಾಪೈಸೆಯ ಕಾರ್ಯಕ್ರಮಗಳನ್ನು ರೂಪಿಸಿಲ್ಲ. ರಾಜ್ಯದಲ್ಲಿ 88 ಲಕ್ಷ ಕೃಷಿ ಕುಟುಂಬಗಳಿವೆ. ಕೃಷಿಯನ್ನು ಲಾಭದಾಯಕ ಚಟುವಟಿಕೆಯನ್ನಾಗಿಸಲು ಸರ್ಕಾರ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಹೇಳಿದ್ದಾರೆ.

    ಅನೇಕ ವಿಚಾರಗಳಲ್ಲಿ ಉತ್ತರ ಕರ್ನಾಟಕವು ಹಿಂದೆ ಉಳಿದಿದೆ. ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿ ಸೇರಿದಂತೆ ಕರ್ನಾಟಕದ ಅಭಿವೃದ್ಧಿಗೆ ರಾಜ್ಯಪಾಲರ ಭಾಷಣದಲ್ಲಿ ಯಾವುದೇ ಉಲ್ಲೇಖಗಳಿಲ್ಲ. ಸರ್ಕಾರ ಯಾವುದೇ ಕಾರ್ಯಕ್ರಮಗಳನ್ನು ರೂಪಿಸಿಲ್ಲ ಎನ್ನುವುದು ಸ್ಪಷ್ಟವಾಗಿದೆ. ರಾಜ್ಯದ ದೊಡ್ಡ ಸಮಸ್ಯೆ ಭ್ರಷ್ಟಚಾರದ್ದು. ಇದನ್ನು ಹೋಗಲಾಡಿಸಲು ಸರ್ಕಾರ ಏನು ಕ್ರಮ ಕೈಗೊಂಡಿದೆ ಎನ್ನುವ ಬಗ್ಗೆ ಒಂದೂ ಮಾತು ಪ್ರಸ್ತಾಪವಿಲ್ಲ. ಆದ್ದರಿಂದ ಸರ್ಕಾರ ಭ್ರಷ್ಟಾಚಾರದ ಪರವಾಗಿರುವುದನ್ನು ರಾಜ್ಯಪಾಲರ ಭಾಷಣವು ದೃಡೀಕರಿಸುತ್ತಿದೆ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.

     ರಾಜ್ಯದ ಆದಾಯಕ್ಕೆ ಬೆಂಗಳೂರಿನ ಕೊಡುಗೆ ಶೇ. 70 ಕ್ಕಿಂತ ಹೆಚ್ಚು. ಆದರೆ, ಬೆಂಗಳೂರಿನ ಅಭಿವೃದ್ಧಿಗೆ ಸಂಬಂಧಪಟ್ಟಂತೆ ರಾಜ್ಯಪಾಲರ ಭಾಷಣದಲ್ಲಿ ಸ್ಪಷ್ಟವಾದ ಯಾವುದೇ ಕಾರ್ಯಕ್ರಮಗಳು ಇಲ್ಲ. ನಾಡಪ್ರಭು ಕೆಂಪೇಗೌಡ, ಅರ್ಕಾವತಿ, ಡಾ.ಶಿವರಾಮ ಕಾರಂತ ಬಡಾವಣೆಗಳ ಪ್ರಸ್ತಾಪಮಾಡಿದ್ದು, ಇವೆಲ್ಲವೂ ಕಾಂಗ್ರೆಸ್ ಸರ್ಕಾರದ ಸಾಧನೆಗಳು ಎಂದಿದ್ದಾರೆ.

     ತುಮಕೂರು ರಸ್ತೆಯಿಂದ ಹೊಸೂರುವರೆಗಿನ 100 ಮೀಟರ್ ಅಗಲದ ಫೆರಿಫೆರಲ್ ರಸ್ತೆ ಮತ್ತು ಸಬ್ ಅರ್ಬನ್ ರೈಲು ಯೋಜನೆಯ ಮಾತನ್ನು ಕಳೆದ ನಾಲ್ಕು ವರ್ಷಗಳಿಂದ ಬಿಜೆಪಿಯವರ ಬಾಯಲ್ಲಿ ಕೇಳಿ ಕೇಳಿ ಸಾಕಾಗಿದೆ. ಯೋಜನೆ ಆರಂಭವೂ ಆಗುತ್ತಿಲ್ಲ. ನಮ್ಮ ಸರ್ಕಾರ ಇದ್ದಾಗ ಐದು ವರ್ಷದಲ್ಲಿ 15 ಲಕ್ಷಕ್ಕೂ ಹೆಚ್ಚು ಮನೆಗಳನ್ನು ನಿರ್ಮಾಣ ಮಾಡಿದ್ದೆವು. ಆದರೆ, ಈ ಸರ್ಕಾರ ಕೇವಲ 4.93 ಲಕ್ಷ ಮನೆಗಳನ್ನು ಮಾತ್ರ ನಿರ್ಮಿಸಿರುವುದಾಗಿ ಹೇಳುವ ಮೂಲಕ ತಾನೊಂದು ವಿಫಲಗೊಂಡ ಸರ್ಕಾರ, ಜನರ ಸಮಸ್ಯೆಗಳನ್ನು ಬಗೆಹರಿಸುವುದರಲ್ಲಿ ಸೋತ ಸರ್ಕಾರ ಎನ್ನುವುದನ್ನು ಒಪ್ಪಿಕೊಂಡಿದೆ ಎಂದರು.

    ರಾಜ್ಯದಲ್ಲಿ ಪ್ರತಿ ವರ್ಷ 15-20 ಲಕ್ಷ ಯುವಕರು ಉದ್ಯೋಗದ ಮಾರುಕಟ್ಟೆಗೆ ದುಡಿಯುವ ವಯಸ್ಸಿಗೆ ಬರುತ್ತಾರೆ. ಆ ಯುವಕರಿಗೆ ಉದ್ಯೋಗ ನೀಡುವ ಒಂದೇ ಒಂದು ಕಾರ್ಯಕ್ರಮವನ್ನೂ ನೀಡಿಲ್ಲ. ರಾಜ್ಯಪಾಲರ ಬಾಯಲ್ಲಿ ಸರ್ಕಾರ ಹೇಳಿಸಿರುವ ಅನೇಕ ಕಾರ್ಯಕ್ರಮಗಳು ಕಾಂಗ್ರೆಸ್ ಸರ್ಕಾರದ ಅವಧಿಯ ಕಾರ್ಯಕ್ರಮಗಳಾಗಿವೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap